ಟೆಸ್ಲಾ ಕಂಪನಿಯ ಎಲಾನ್ ಮಸ್ಕ್, ಭಾರತದ ಗೌತಮ್ ಅದಾನಿ, ಅಂಬಾನಿ ಸಹೋದರರು, ಅಜೀಮ್ ಪ್ರೇಮ್ ಜೀ ಹೀಗೆ ಹಲವರನ್ನು ಜಗತ್ತಿನ ಅತೀ ಶ್ರೀಮಂತ ಉದ್ಯಮಿಗಳು ಎಂದು ಪರಿಗಣಿಸಲಾಗುತ್ತಿದೆ. ಆದರೆ ಮೊಘಲ್ ಸಾಮ್ರಾಜ್ಯ ಕಾಲದಲ್ಲಿ ಗುಜರಾತ್ ನ ಸೂರತ್ ಮೂಲದ ವೀರ್ಜಿ ವೋರಾ ಎಂಬ ಉದ್ಯಮಿ ವಿಶ್ವದ ಆಗರ್ಭ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಈಸ್ಟ್ ಇಂಡಿಯಾ ಕಂಪನಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಆ ಕಾಲದಲ್ಲಿ ಅವರ ಬಳಿ ಎಂಟು ಮಿಲಿಯನ್ (ಈ ಕಾಲದ 80 ಲಕ್ಷ ರೂಪಾಯಿ) ಸಂಪತ್ತು ಹೊಂದಿದ್ದರಂತೆ!
ಇದನ್ನೂ ಓದಿ:‘ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ಸಾಕಾಗಿದೆ..’: ಡಿಕೆ ಸುರೇಶ್ ರಾಜಕೀಯ ವೈರಾಗ್ಯದ ಮಾತು
ವೀರ್ಜಿ ವೋರಾ ಅವರನ್ನು “ವ್ಯಾಪಾರಿ ರಾಜ ಹಾಗೂ ಪ್ರಭಾವಶಾಲಿ ಧನಿಕ” ಎಂದೇ ಕರೆಯಲಾಗುತ್ತಿತ್ತು. ಭಾರತದ ನೂರಾರು ವರ್ಷಗಳ ಇತಿಹಾಸದಲ್ಲಿ ವ್ಯಾಪಾರ, ವಹಿವಾಟು ಹಾಗೂ ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಆದರೆ ದೇಶ ಸ್ವಾತಂತ್ರ್ಯ ಪಡೆದದ್ದು 1947ರಲ್ಲಿ. ಅಂದು ಶ್ರೀಮಂತ ವ್ಯಾಪಾರಿಗಳಿದ್ದರು. ಅಂತಹ ಆಗರ್ಭ ಉದ್ಯಮಿಗಳಲ್ಲಿ ವೀರ್ಜಿ ವೋರಾ ಹೆಸರು ಪ್ರಮುಖವಾದದ್ದು. ಯಾಕೆಂದರೆ ಮೊಘಲ್ ಸಾಮ್ರಾಜ್ಯ ಕಾಲಘಟ್ಟವಾದ 1617 ಮತ್ತು 1670ರ ನಡುವೆ ಬದುಕಿದ್ದ ವೀರ್ಜಿ ಇತಿಹಾಸದ ಆಗರ್ಭ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೋರಾ ಅವರು ಈಸ್ಟ್ ಇಂಡಿಯಾ ಕಂಪನಿಗೆ ಸಾಲ ಕೊಡುತ್ತಿದ್ದ ಪ್ರಭಾವಶಾಲಿ ಧನಿಕರಾಗಿದ್ದರು ಎಂಬುದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಸಗಟು ವ್ಯಾಪಾರದಲ್ಲಿ ನಿರತರಾಗಿದ್ದ ವೀರ್ಜಿ ವೋರಾ ಅವರು ಬ್ಯಾಂಕಿಂಗ್ ಹಾಗೂ ಸಾಲ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲ ಚಿನ್ನ, ಅಫೀಮು, ಬೆಳ್ಳಿಗಟ್ಟಿ, ಹವಳ, ದಂತ, ಏಲಕ್ಕಿ, ಕಾಳು ಮೆಣಸು, ಲೆಡ್ (ಸತು) ಆಮದು ವಹಿವಾಟು ನಡೆಸುತ್ತಿದ್ದರು. ವೋರಾ ಅವರು ಬ್ರಿಟಿಷ್ ಮತ್ತು ಡಚ್ ಈಸ್ಟ್ ಇಂಡಿಯಾ ಕಂಪನಿಗಳಿಗೆ ಸಾಲ ನೀಡುವ ಮೂಲವಾಗಿದ್ದರು.
ವೀರ್ಜಿ ವೋರಾ ಉತ್ಪನ್ನಗಳ ಸಂಗ್ರಹವನ್ನೇ ಖರೀಸುವ ಏಕಸ್ವಾಮ್ಯತೆ ಹೊಂದಿದ್ದರು. ಶ್ರೀಮಂತ ಕುಳನಾಗಿದ್ದ ವೋರಾ ಅವರು ಆ ಕಾಲದಲ್ಲಿ ಸಣ್ಣ, ಸಣ್ಣ ಕಂಪನಿಗಳನ್ನು ತೆರಯಲು ಬ್ರಿಟಿಷ್ ವ್ಯಕ್ತಿಗಳಿಗೆ ಹಣಕಾಸು ನೆರವು ನೀಡುತ್ತಿದ್ದರಂತೆ. ದಾಖಲೆಯ ಪ್ರಕಾರ, ಮೊಘಲ್ ದೊರೆ ಔರಂಗಜೇಬ್ ಭಾರತದ ಡೆಕ್ಕನ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಹೊರಟ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಅನುಭವಿಸಿದ್ದು, ಆಗ ಹಣಕಾಸು ನೆರವು ನೀಡುವಂತೆ ಔರಂಗಜೇಬ್ ತನ್ನ ಸಹಾಯಕನನ್ನು ವೀರ್ಜಿ ವೋರಾ ಬಳಿ ಕಳುಹಿಸಿದ್ದನಂತೆ!
ಶಿವಾಜಿ ದಾಳಿಯಲ್ಲಿ ವೋರಾ ಕೋಟ್ಯಂತರ ರೂ. ಸಂಪತ್ತು ಲೂಟಿ:
1664ರ ಜನವರಿ 7ರಂದು ಶಿವಾಜಿ ಮಹಾರಾಜರ ನೇತೃತ್ವದ ಮರಾಠ ಪಡೆಗಳು ವೀರ್ಜಿ ವೋರಾ ಅವರ ಮನೆ ಮತ್ತು ಉಗ್ರಾಣದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದವು. ಜೊತೆಗೆ ಅಪಾರ ಪ್ರಮಾಣದ ಹಣ, ಮುತ್ತು, ರತ್ನ, ಪಚ್ಚೆ ಹರಳು ಹಾಗೂ ವಜ್ರಗಳನ್ನು ಲೂಟಿಗೈದಿದ್ದರು. ಅಂದಿನ ಡಚ್ ಪ್ರತ್ಯಕ್ಷದರ್ಶಿ ವೋಲ್ ಕ್ವಾರ್ಡ್ ಐವರ್ಸನ್ ನೀಡಿದ್ದ ಮಾಹಿತಿ ಪ್ರಕಾರ, ಅಂದು ಶಿವಾಜಿ ದಾಳಿಯಲ್ಲಿ ವೀರ್ಜಿ ವೋರಾ ಮನೆಯಲ್ಲಿದ್ದ ಆರು ಬ್ಯಾರೆಲ್ಸ್ ಗಳಷ್ಟು ಚಿನ್ನ, ಹಣ, ಮುತ್ತು, ಕೆಂಪು ಹರಳು ಸೇರಿದಂತೆ ಅಮೂಲ್ಯ ರತ್ನಗಳನ್ನು ಹೊತ್ತೊಯ್ದಿದ್ದರು. ಇದರ ಅಂದಾಜು ಮೊತ್ತ 50,000 ಡಾಲರ್ ಎಂದು ಅಂದಾಜಿಸಲಾಗಿದೆ. ಇದರ ಪರಿಣಾಮ ವೀರ್ಜಿ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟಕ್ಕೆ ಗುರಿಯಾಗಿರುವುದಾಗಿ ಫ್ರೆಂಚ್ ಪ್ರವಾಸಿಗ ಜೀನ್ ಡೆ ಥೇವೆನೊಟ್ ಉಲ್ಲೇಖಿಸಿದ್ದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ಮರಾಠರ ದಾಳಿಯಲ್ಲಿ ವೀರ್ಜಿಯ ಅಪಾರ ಪ್ರಮಾಣದ ಸಂಪತ್ತನ್ನು ಹೊತ್ತೊಯ್ದಿದ್ದರೂ ಕೂಡಾ ವೀರ್ಜಿ ಕಂಗೆಟ್ಟಿರಲಿಲ್ಲವಾಗಿತ್ತು. ಸೂರತ್ ಹೊರವಲಯದಲ್ಲಿದ್ದ ಹಲವಾರು ವಾಣಿಜ್ಯ ಕೇಂದ್ರಗಳನ್ನು ಹಂಚಿಕೆ ಮಾಡಿದ್ದರಂತೆ. ಕೊನೆಗೆ ಆಗ್ರಾದಲ್ಲಿರುವ ಮೊಘಲ್ ಕೋರ್ಟ್ ನಲ್ಲಿ ನಗರವನ್ನು ದಾಳಿಕೋರರಿಂದ ರಕ್ಷಿಸುವ ನಿಟ್ಟಿನಲ್ಲಿ ವಾಣಿಜ್ಯ ಕೇಂದ್ರಗಳನ್ನು ಹಂಚಿಕೆ ಮಾಡಿರುವ ಬಗ್ಗೆ ವೀರ್ಜಿ ಹಾಗೂ ಮತ್ತೊಬ್ಬ ಉದ್ಯಮಿ ಹಾಜಿ ಝಾಹೀದ್ ಬೇಗ್ ಮನವರಿಕೆ ಮಾಡಿಕೊಟ್ಟಿದ್ದರಂತೆ. ಇವೆಲ್ಲದರ ನಡುವೆ 1670ರಲ್ಲಿ ಶಿವಾಜಿ ಎರಡನೇ ಬಾರಿ ವೀರ್ಜಿ ನಿವಾಸ ಮತ್ತು ವಾಪಾರ ಕೇಂದ್ರದ ಮೇಲೆ ದಾಳಿ ನಡೆಸಿದ್ದು, ಇದರಿಂದಾಗಿ ಮತ್ತಷ್ಟು ಆರ್ಥಿಕ ಹೊಡೆತಕ್ಕೆ ಗುರಿಯಾಗುವಂತಾಗಿತ್ತು. ಆದರೆ ಈ ದಾಳಿಯಲ್ಲಿ ಎಷ್ಟು ನಷ್ಟ ಅನುಭವಿಸಿದ್ದರು ಎಂಬುದರ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ.
ಈ ಸಂದರ್ಭದಲ್ಲಿ ವೀರ್ಜಿ ಮೊಮ್ಮಗ ನಾನ್ಚಾಂದ್ ವಹಿವಾಟಿನ ಉಸ್ತುವಾರಿ ವಹಿಸಿಕೊಂಡಿದ್ದು, 1670ರಲ್ಲಿ ಶಿವಾಜಿ ಎರಡನೇ ದಾಳಿಯ ಬಳಿಕ ವೀರ್ಜಿ ಬಹುತೇಕ ಸಾವನ್ನಪ್ಪಿರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ. ಬಿ.ಜಿ. ಗೋಖಲೆ ಅವರ ಪ್ರಕಾರ, ಮೊಮ್ಮಗ ನಾನ್ಚಾಂದ್ ವ್ಯಾಪಾರ-ವಹಿವಾಟನ್ನು ತನ್ನ ಸುಪರ್ದಿಗೆ ಪಡೆದುಕೊಂಡ ನಂತರ ವೀರ್ಜಿ ನಿವೃತ್ತಿಯಾಗಿದ್ದಿರಬಹುದು. ಆ ನಂತರ 1675ರಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ಉಲ್ಲೇಖಿಸಿದ್ದಾರೆ.