Advertisement
ನನ್ನ ಜೀವನದಾಗ ಭಾಳ ಬ್ಯಾಸರದ ಕೆಲಸ ಅಂದ್ರ ಈ ವಾಕಿಂಗ್ ರೀ . ವಾಕಿಂಗ್ ಹೋಗೋದು ಚೊಲೋ ಬಿಡ್ರಿ. ಆರೋಗ್ಯಕ್ಕೂ ಒಳ್ಳೇದು. ಬಿ.ಪಿ., ಶುಗರ್, ಕೊಲೆಸ್ಟ್ರಾಲ್, ಮಂಡಿನೋವು, ತೂಕ ಎಲ್ಲಾ ಕಡಿಮಿ ಆಗ್ತದ ಇದ್ರಿಂದ ಅಂತ ಎಲ್ಲಾರಿಗೂ ಗೊತ್ತು ಬಿಡ್ರಿ.. ಈಗ ನಾನು ಹೇಳ್ಬೇಕು ಅಂದದ್ದು, ವಾಕಿಂಗ್ ಹೋಗೋದ್ರಿಂದ ಆಗೋ ಉಪಯೋಗದ ಬಗ್ಗೆ ಅಲ್ಲ ..
Related Articles
Advertisement
ವಾಕಿಂಗ್ ವಿಶೇಷ ಅಂದ್ರ, ಈ ಸಾಕಿದ ಜಾತಿ ನಾಯಿ ಮತ್ತು ಬೀದಿಯ ಕಂತ್ರಿ ನಾಯಿ.. ಅವು ಎದರಾಬದರಾ ಬಂದ ಕೂಡ್ಲೆ ಕೋರೆಹಲ್ಲು ಹೊರಗ್ ಹಾಕಿ ಒಂದಕ್ಕೊಂದು ಒದರಿದ್ದಾ ಒದರಿದ್ದು . ಸಾಕಿದ ನಾಯಿ ಮಾಲೀಕರಿಗೆ ವಾಕಿಂಗ್ ಬೇಕಾಗಿರಂಗಿಲರಿ. ನಾಯಿ ಬಹಿರ್ದೆಶೆಯ ದೊಡ್ಡ ಜವಾಬ್ದಾರಿ ಅವರ ಮ್ಯಾಲೆ ಇರ್ತ ದಲ್ಲ. ಅವರ ಮನಿ ಅಂಗಳ ಸ್ವತ್ಛ ಇರಬೇಕ್ರಿ. ರೋಡ್ ಒಳಗ ಅವು ಮೂಸಿ ನೋಡ್ಕೊತ ಕಂಬ ಕಂಡಲ್ಲೇ ಕಾಲು ಎತ್ಕೊತ ತಮ್ಮ ಕೆಲಸ ಮುಗಿಸಿದ್ರ ಇವ್ರು ನಿರಾಳ ಆಗ್ತಾರ್ರೀ. ಅವು ನಮ್ಮ ಹತ್ರ ಬಂದು ಗುರ್ರ ಅಂದ್ರ ಅದ್ರ ಮಾಲೀಕ್ರು- “ಅಯ್ಯೋ ರಾಕ್ಸಿ ಅವ್ರು ಆಂಟಿ ಅಲ್ವ, ಕೂಗಬಾರ್ಧು ಡಿಯರ್’ ಅಂತಾರ್ರೀ! ಇವರ ಮನ್ಯಾಗಿನ ಮಕ್ಕಳಿಗೂ ಇಷ್ಟು ಸಂಸ್ಕಾರ ಕಲಸಿ ರ್ತಾರೋ, ಇಲ್ಲೋ ನಾಯಿಗೆ ಮಾತ್ರ ಎಲ್ಲ ಕಲಸ್ತಾರ…
ನನ್ನ ಗೆಳತಿ ಒಬ್ಬಾಕಿ ಬರ್ತಿದ್ಲು ನನ್ನ ಜೊತಿ ವಾಕಿಂಗ್‌ಗೆ . ಅಕಿ ವಾಕಿಂಗ್ ಮುಗಸಿ ಮನಿ ಮುಟ್ಟಿದಾಗಿಂದಮತ್ತ ಮಾರನೇದಿನ ವಾಕಿಂಗ್ ಬರೋ ತನಕ ಮನಿ ಒಳಗ್ ಏನೇನಾತು ಸುದ್ದಿ ಹೇಳಿ ಹೇಳಿ ತಲಿ ತಿಂದಿದ್ದಳ್ರಿ. ಅದಕ್ಕಾ ಅಕಿ ಜೊತಿ ಹೋಗೋದ ಬಿಟ್ಟೆ. ಬ್ಯಾರೆ ಟೈಮ್ ಮಾಡ್ಕೊಂಡೆ .ಒಬ್ರು (ಗಂಡಸು )ಬರ್ತಿದ್ರು ವಾಕಿಂಗ್‌ಗೆ . ಅವರು ಮೊಬೈಲ್ ಸ್ಪೀಕರ್ ಆನ್ ಇಟ್ಟು ಹಾಡು ಕೇಳ್ಕೊತ ಬರ್ತಿದ್ರು. ಅವು ಎಂಥಾ ಹಾಡ್ರಿ? “ದೇಖೋರೆ ದೇಖೋರೆ ಬಾಳೆದಿಂಡು’, “ಚಳಿ ಚಳಿ ತಾಳೆನು ಈ ಚಳಿ ಯಾ… ’ ಇಂಥಾವ. ನಂಗಂತೂ ಮೈ ಪರಚಿಕೊಳ್ಳೋ ಹಂಗ ಆಗೋದ್ರಿ.. ವಾಕಿಂಗ್ ಹೋಗದ ಮನ್ಯಾಗ ಕೂತ್ರ, ಮಕ್ಳು – “ಅಮ್ಮಾ, ನಿನ್ನ ವೆಯಿಟ್ ಜಾಸ್ತಿ ಆಗ್ಲಿಕತ್ತೇದ’ ಅಂತ ಅಣ ಕಿ ಸೋರು, ಅವ ತ್ತೂಂದಿನ, ಮಗ ಕೆಲಸದಿಂದ ಸಂಜಿಕೆ ಮನಿಗೆ ಬಂದು ಕೇಳಿದ- “ಇವತ್ ವಾಕ್ ಹೋಗಿದ್ದೇನಮ್ಮಾ?’ ಅಂತ. “ಹೂಂ ಹೋಗಿದ್ದೆ. ಕರೆಕ್ಟ್ 45 ನಿಮಿಷ ಮಾಡಿದೆ ವಾಕ್’ ಅಂದೆ. ಅದಕ್ಕ ಮಗಾ ಅಂದ- “ಸುಳ್ಳು ಹೇಳ್ಬ್ಯಾಡ ಬಿಡಮ್ಮ. ನೀ ಆನ್‌ಲೈನ್ ಇದ್ದಿ ಫೇಸ್ಬುಕ್ ಒಳಗ್ ಎಂಟೂವರಿ ತನಕ. ಕಾಮೆಂಟ್ ಹಾಕ್ಕೋತಾ ಕೂತಿದ್ದೀ, ಹೌದಿಲ್ಲೋ? ’
ಹಿಂಗೆಲ್ಲಾ ಆಗ್ತಾ ವ ನೋಡ್ರೀ. ಅದ ಕ್ಕೆ, ಹೊರಗ್ ಯಾಕ ಹೋಗ್ಬೇಕು ವಾಕ್ ಅಂತ ಟೆರೇಸ್ ಮ್ಯಾಲ್ ಮಾಡ್ತೇನ್ರಿ. ಅಲ್ಯರ ಏನ್ ಸುಖಾ ಅದ ಬಿಡ್ರಿ. ಆಜು ಬಾಜೂ ಅಪಾರ್ಟ್‌ಮೆಂಟ್ ಇಂದ 4-5 ಜೋಡಿ ಕಣ್ಣು ನನ್ನ ನೋಡೋದು ಗೊತ್ತಾಗಲಿಕತ್ತು. ಯಾಕ ಹಿಂಗ್ ನೋಡ್ತಾರ ಅನ್ಕೊಂಡು ನಾನು ಸೀರೀ ಸೆರಗು ಸರಿ ಮಾಡ್ಕೊಂಡೆ, ಕೂದಲ ಸರಿ ಮಾಡ್ಕೊಂಡೆ ..ಎಲ್ಲಾ ಸರಿ ಇತ್ತು.¤ಅವರು ಅನ್ನೋದು ಕೇಳ್ತು- “ಅಯ್ಯೋ ಬೆಳಗ್ಗೆ ಬೆಳಗ್ಗೆ ಇರೋ ಕೆಲಸ ಬಿಟ್ಟು ನಮಗೆ ವಾಕ್ ಮಾಡ್ತಾ ಕೂಡೋಕೆ ಆಗಲ್ಲಪ್ಪ . ಇದೆಲ್ಲಾ ಮನೇಲಿ ಕೆಲ್ಸ ಇಲ್ದೇ ಖಾಲಿ ಇರೋರಿಗೆ ಸರಿಬಿಡಿ’ …..
ನಾ ಆದ್ರೂ ಬಿಟ್ಟಿಲ್ಲರಿ ವಾಕ್ ಮಾಡೋದು. ಈಗ, ಅತ್ತ ಇತ್ತ ನೋಡದಂತೆ ಕುರುಡನ ಮಾಡಯ್ಯ, ಅತ್ತ ಇತ್ತ ಕೇಳದಂತೆ ಕಿವುಡನ ಮಾಡಯ್ಯ ಅನ್ನೋ ಥರ ಇತೇನ್ರಿ.. ಹಿಂಗೆ ಮಾತಿಲ್ಲದೆ, ಕಥಿ ಇಲ್ಲದೆ ಬಾಯಿ ಮುಚ್ಕೊಂಡು ಒಬ್ಬೇಕಿನ ನಡಿಯೋ ಈ ವಾಕಿಂಗ್ ನಂಗ ದೊಡ್ಡ ಶಿಕ್ಷೆ ಆಗೇದ ನೋಡ್ರಿ…
-ಲತಾ ಜೋಶಿ