Advertisement

ಕೆಲಸಗಳಾಗುತ್ತಿಲ್ಲ: ಸ್ವಪಕ್ಷೀಯರಿಂದಲೇ ಅಸಮಾಧಾನ

07:40 AM Jun 20, 2020 | Lakshmi GovindaRaj |

ಬೆಂಗಳೂರು: ಬಿಜೆಪಿ ಸರ್ಕಾರವಿದ್ದರೂ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ , ವರ್ಗಾವಣೆ ಸೇರಿದಂತೆ ಇತರೆ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸ್ವಪಕ್ಷೀಯ ಶಾಸಕರಿಗೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಸದ್ಯದಲ್ಲೇ ಸಿಎಂ ಯಡಿಯೂರಪ್ಪ ಅವರೊಂದಿಗೆ ವಿಭಾಗವಾರು ಶಾಸಕರ ಸಭೆ ನಡೆಸಲು ಪ್ರಯತ್ನಿಸುವ ಭರವಸೆ ನೀಡಿ ಸಮಾಧಾನಪಡಿಸಿದ್ದಾರೆ.

Advertisement

ಎಚ್‌.ವಿಶ್ವನಾಥ್‌ ಅಸಮಾಧಾನಹೊರತುಪಡಿಸಿದರೆ ಪರಿಷತ್‌ಗೆ ಬಿಜೆಪಿಯ 4 ಮಂದಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಬಳಿಕ ಗುರುವಾರ ಎಲ್ಲವೂ ಸುಖಾಂತ್ಯವಾಯಿತು ಎಂಬ ವಾತಾವರಣವಿತ್ತು. ಆದರೆ ಸಂಜೆ ಹೊತ್ತಿಗೆ ಅತೃಪ್ತ ಶಾಸಕರು ಕಟೀಲ್‌ ಅವರನ್ನು ಭೇಟಿಯಾಗಿ ಸರ್ಕಾರದಲ್ಲಿ ತಮ್ಮ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌, ಅನಿಲ್‌ ಬೆನಕೆ, ಅಭಯ್‌ ಪಾಟೀಲ್‌,  ಕರಾವಳಿ ಭಾಗದ ಶಾಸಕರು ಸೇರಿದಂತೆ ಹಲವರು ಕಟೀಲ್‌ ಅವರನ್ನು ಭೇಟಿಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ನಳಿನ್‌ ಕುಮಾರ್‌ ಕಟೀಲ್‌, ಈ ರೀತಿಯ ಸಮಸ್ಯೆಗಳಿದ್ದರೆ ಚರ್ಚಿಸಿ ಬಗೆಹರಿಸಲು ಕ್ರಮ  ವಹಿಸಲಾಗುವುದು. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳನ್ನು ಪಕ್ಷದ ಕಚೇರಿಗೆ ಕರೆಸಿ ಗೊಂದಲಗಳನ್ನು ಬಗೆಹರಿಸಿಕೊಳ್ಳೋಣ. ಈ ಬಗ್ಗೆ ಬಹಿರಂಗ ಚರ್ಚೆ ಬೇಡ ಎಂದು ಕಿವಿಮಾತು ಹೇಳಿದ್ದಾರೆ ಎಂದು ನಿಯೋಗದಲ್ಲಿದ್ದ ಶಾಸಕರೊಬ್ಬರು ತಿಳಿಸಿದರು. ಸದ್ಯದಲ್ಲೇ  ಮುಖ್ಯಮಂತ್ರಿಗಳ ವತಿಯಿಂದ ಕಂದಾಯ  ವಿಭಾಗವಾರು ಶಾಸಕರ ಸಭೆ ನಡೆಸಲು ಪ್ರಯತ್ನಿಸಲಾಗುವುದು. ಆಗ ಶಾಸಕರು ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಅತೃಪ್ತ ಶಾಸಕರ  ನಿಯೋಗದಲ್ಲಿ ಕರಾವಳಿ ಭಾಗದ ಕೆಲ ಶಾಸಕರು ಇದ್ದರು ಎಂಬ ಮಾತುಗಳಿವೆ. ಆದರೆ ಇದನ್ನು ಅಲ್ಲಗಳೆದಿರುವ ಕೆಲ ಶಾಸ  ಕರು, ಪಕ್ಷದ ರಾಜ್ಯಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರೂ ಆಗಿರುವುದರಿಂದ ಪಕ್ಷ ಸಂಘಟನೆ ಹಾಗೂ  ಸ್ಥಳೀಯ ವಿಚಾರಗಳ ಬಗ್ಗೆ ಆಗಾಗೆ ಚರ್ಚೆ ಮಾಡುತ್ತಿರುತ್ತೇವೆ. ಈ ನಡುವೆ ಬೇರೆ ಭಾಗದ ಕೆಲ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳು, ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next