Advertisement
ಬೆಳಗಾಂ ಎಂಬುದು ಬೆಳಗಾವಿಯಾಗಿ ಬದಲಾಗಬೇಕು ಎಂಬ ಕನ್ನಡ ಹೋರಾಟಗಾರರ ನಿರಂತರ ಹೋರಾಟಕ್ಕೆ ಸರಕಾರಗಳು ಸ್ಪಂದಿಸಿ ಬೆಳಗಾವಿ ಪುನರ್ ನಾಮಕರಣ ಮಾಡಿ ಈಗ ಐದು ವರ್ಷ ಸಂದಿವೆ. ಆದರೆ ಬೆಳಗಾವಿಯ ಜನ, ಹಾಗೂ ಸರಕಾರಿ ಅಧಿಕಾರಿಗಳು ಈಗಲೂ ಇದನ್ನು ಸಂಪೂರ್ಣವಾಗಿ ಸ್ವೀಕಾರ ಮಾಡಿಲ್ಲ. ಈಗಲೂ ವ್ಯವಹಾರಿಕ ಭಾಷೆಯಲ್ಲಿ ಬೆಳಗಾಂ ಎಂಬುದೇ ಹೆಚ್ಚು ಪ್ರಚಲಿತದಲ್ಲಿದೆ. ಅನೇಕ ಕಡೆ ನಾಮಫಲಕಗಳಲ್ಲಿ ಬೆಳಗಾಂ ರಾರಾಜಿಸುತ್ತಿದೆ.
Related Articles
Advertisement
ರಾಜ್ಯ ಸರಕಾರದ ಕಚೇರಿಗಳ ಮೇಲೆ ಕಡ್ಡಾಯವಾಗಿ ಬೆಳಗಾವಿ ಎಂದು ಬರೆಸಿದ್ದರೂ ಇದೇ ಆದೇಶ ಕೆಂದ್ರ ಸರಕಾರದ ಕಚೇರಿಗಳಲ್ಲಿ ಕಾಣುತ್ತಿಲ್ಲ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕನ್ನಡ ಮುಖಂಡರು.
ದಶಕಗಳ ಬೇಡಿಕೆ ಬೆಳಗಾಂ ಬದಲಿಗೆ ಬೆಳಗಾವಿ ಎಂದು ನಾಮಕರಣ ಮಾಡಬೇಕು ಎಂಬ ಹೋರಾಟಕ್ಕೆ ಹಲವಾರು ದಶಕಗಳ ಇತಿಹಾಸವೇ ಇದೆ. ಬೆಳಗಾವಿಯಲ್ಲಿ 2003 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಇದಕ್ಕೊಂದು ಸ್ಪಷ್ಟ ರೂಪ ಬಂತು. ಆಗ ಕನ್ನಡ ಹೋರಾಟಗಾರರು ಬೆಳಗಾಂ ಬದಲು ಬೆಳಗಾವಿ ಎಂದು ನಾಮಕರಣ ಮಾಡುವಂತೆ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಂದ ಈ ಹೋರಾಟ ನಿರಂತರವಾಗಿ ನಡೆಯಿತು. ಕನ್ನಡ ಹೋರಾಟಗಾರರ ಸತತ ಒತ್ತಡಕ್ಕೆ ಸ್ಪಂದಿಸಿದ ಸರಕಾರ ಬೆಳಗಾವಿ ಸೇರಿದಂತೆ 13 ನಗರಗಳಿಗೆ ಮರು ನಾಮಕರಣ ಮಾಡಿ ಆದೇಶ ಹೊರಡಿಸಿತು. ಆದರೆ ಇದನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು ಎನ್ನುವ ಷರತ್ತು ಹಾಕಲಿಲ್ಲ. ಇದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಉದ್ದಿಮೆದಾರರು ಬೆಳಗಾವಿ ಹೆಸರನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ ಎಂಬುದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ. ಜಾರಿಗೆ ನಿರಾಸಕ್ತಿ
ನಮ್ಮ ಹೋರಾಟದ ಫಲವಾಗಿ ಬೆಳಗಾಂಗೆ ಬೆಳಗಾವಿ ಎಂದು ನಾಮಕರಣವಾಯಿತು. ಈ ಆದೇಶವಾಗಿ ಐದು ವರ್ಷಗಳಾದವು. ಆದರೆ ಇದುವರೆಗೆ ಇದು ಸಮರ್ಪಕವಾಗಿ ಜಾರಿಗೆ ಬಂದೇ ಇಲ್ಲ. ಅಧಿಕಾರಿಗಳು ಸಹ ಸರಕಾರದ ಆದೇಶ ಪಾಲಿಸಬೇಕು ಎನ್ನುವಂತೆ ಕಾಟಾಚಾರಕ್ಕೆ ಕಾರ್ಯಾಚರಣೆ ಮಾಡಿದ್ದಾರೆ. ಇವರ ನಿರಾಸಕ್ತಿಯಿಂದಾಗಿ ಈಗಲೂ ಅನೇಕ ಸರಕಾರಿ ಕಚೇರಿಗಳಲ್ಲಿ ಬೆಳಗಾಂ ಎಂದೇ ಬಳಸಲಾಗುತ್ತಿದೆ.
ಶ್ರೀನಿವಾಸ ತಾಳೂಕರ, ಕನ್ನಡ ಹೋರಾಟಗಾರ ಮನವೊಲಿಕೆ ಜಾರಿ
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಬೆಳಗಾವಿ ಎಂಬ ಪುನರ್ ನಾಮಕರಣ ಅನುಷ್ಠಾನವಾಗಿದೆ. ಸರಕಾರಿ ಕಚೇರಿಗಳಲ್ಲಿ ಸಹ ಇದನ್ನು ಜಾರಿಗೆ ತರಲಾಗಿದೆ. ಕೆಲವೇ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಸಾರ್ವಜನಿಕ ಸ್ಥಳದಲ್ಲಿ ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಬೆಳಗಾವಿ ಹೆಸರು ಬರೆಯಲಾಗಿದೆ. ಮರಾಠಿ ಭಾಷಿಕ ಪ್ರದೇಶಗಳಲ್ಲಿ ಮಾತ್ರ ಇನ್ನೂ ಬಾಕಿ ಇದ್ದು ಇಲ್ಲಿಯೂ ಸಹ ಜನರ ಮನವೊಲಿಸಿ ನಾಮಫಲಕಗಳಲ್ಲಿ ಬೆಳಗಾವಿ ಹೆಸರು ಬರೆಸಲಾಗುತ್ತಿದೆ.
ಶಶಿಧರ ಕುರೇರ, ಪಾಲಿಕೆ ಆಯುಕ್ತ ಕೇಶವ ಆದಿ