ಪ್ಯಾರಿಸ್: ಈ ಬಾರಿ ಅದೃಷ್ಟದ ಬಲದಿಂದಲ್ಲ, ಉತ್ತಮ ಮಟ್ಟದ ಸಾಧನೆಯಿಂದ ಗೆದ್ದು ಬಂದೆ ಎಂಬುದಾಗಿ ಎರಡನೇ ಸಲ ಫ್ರೆಂಚ್ ಓಪನ್ ಪ್ರಶಸ್ತಿಯನ್ನೆತ್ತಿದ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಹೇಳಿದ್ದಾರೆ.
ಇದು ಕಠಿನ ಪರಿಶ್ರಮಕ್ಕೆ ಸಂದ ಪ್ರತಿಫಲ ಎಂಬುದಾಗಿ ವಿಶ್ವದ ನಂ.1 ಆಟಗಾರ್ತಿಯೂ ಆಗಿರುವ ಸ್ವಿಯಾಟೆಕ್ ಹೇಳಿದರು.
ಪ್ಯಾರಿಸ್ ಫೈನಲ್‌ನಲ್ಲಿ ಅಮೆರಿಕದ 18ರ ಹರೆಯದ ಆಟಗಾರ್ತಿ ಕೊಕೊ ಗಾಫ್ ಅವರನ್ನು 6-1, 6-3 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಐಗಾ ಸ್ವಿಯಾಟೆಕ್ ತಮ್ಮ ಟೆನಿಸ್ ಬಾಳ್ವೆಯ ದ್ವಿತೀಯ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನೆತ್ತಿದರು. ಅವರಿಗೆ ಮೊದಲ ಗ್ರ್ಯಾನ್‌ಸ್ಲಾಮ್ ಕೂಡ ಇಲ್ಲಿಯೇ, 2020ರಲ್ಲಿ ಒಲಿದಿತ್ತು.
“2020ರಲ್ಲಿ ಇಲ್ಲಿ ಆಡುತ್ತಿದ್ದಾಗ ನಾನು ಒಂಥರ ಗೊಂದಲಕ್ಕೆ ಸಿಲುಕಿದ್ದೆ. ಗ್ರ್ಯಾನ್‌ಸ್ಲಾಮ್ ಗೆಲುವು ಅಸಾಧ್ಯ ಎಂದೇ ಭಾವಿಸಿದ್ದೆ. ಆದರೆ ಅಂದು ಅದೃಷ್ಟ ಇತ್ತು. ಮೊದಲ ಗ್ರ್ಯಾನ್‌ಸ್ಲಾಮ್ ಎತ್ತಿದೆ. ಆದರೆ ಈ ಬಾರಿ ಕಠಿನ ಸಾಧನೆ, ಅಷ್ಟೇ ಕಠಿನ ಪರಿಶ್ರಮದಿಂದಾಗಿ ಗೆದ್ದು ಬಂದೆ. ಹೀಗಾಗಿ ನನಗೆ ಅಂದಿಗಿಂತ ಈ ಸಲ ಹೆಚ್ಚು ಖುಷಿಯಾಗಿದೆ’ ಎಂದು ಕಳೆದ ವಾರವಷ್ಟೇ 21ಕ್ಕೆ ಕಾಲಿರಿಸಿದ ಸ್ವಿಯಾಟೆಕ್ ಹೇಳಿದರು.
ಸತತ 35ನೇ ಗೆಲುವು
ಈ ಜಯದೊಂದಿಗೆ ಐಗಾ ಸ್ವಿಯಾಟೆಕ್ ಅವರ ಸತತ ಗೆಲುವಿನ ಓಟ 35 ಪಂದ್ಯಗಳಿಗೆ ವಿಸ್ತರಿಸಲ್ಪಟ್ಟಿದೆ. ಇದರೊಂದಿಗೆ ವೀನಸ್ ವಿಲಿಯಮ್ಸ್ ದಾಖಲೆಯನ್ನು ಸರಿದೂಗಿಸಿದರು. “ಇದು ಸತತ 35ನೇ ಗೆಲುವು. ಸೆರೆನಾ ಗಿಂತ ಮಿಗಿಲಾದುದನ್ನು ನಾನು ಸಾಧಿಸಿದ್ದೇನೆಂದರೆ ಅದೊಂದು ವಿಶೇಷ ಸಾಧನೆಯೇ ಆಗಿದೆ. ಇದಕ್ಕಾಗಿ ಹೆಮ್ಮೆ ಇದೆ’ ಎಂದರು ಸ್ವಿಯಾಟೆಕ್.