Advertisement

ನಾರ್ವೆಯ ಕತೆ: ಹುಲಿಗೆ ಪಾಠ ಕಲಿಸಿದ ನರಿ

03:45 AM May 07, 2017 | |

ಒಂದು ಕಾಡಿನಲ್ಲಿ ಹುಲಿಯೊಂದು ರಾಜನಾಗಿ ಆಳುತ್ತಿತ್ತು. ಒಂದು ಸಲ ಕಾಡಿಗೆ ಬಡಕಲಾದ ಎತ್ತು ಬಂದಿತು. ಅದನ್ನು ಕಂಡು ಆಹಾ, ತಿನ್ನಬಹುದಿತ್ತು ಎಂದು ಹುಲಿಯ ಬಾಯಿಯಲ್ಲಿ ನೀರೂರಿತು. ಆದರೆ ಆಹಾರವಿಲ್ಲದೆ ಸೊರಗಿದ್ದ ಎತ್ತಿನ ಮೈಯಲ್ಲಿ ಎಲುಬುಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಮೊದಲು ಆಹಾರ ನೀಡಿ ಇದನ್ನು ಪುಷ್ಟಿಯಾಗುವಂತೆ ಮಾಡಬೇಕು. ಬಳಿಕ ತಿನ್ನಬೇಕು ಎಂದು ಯೋಚಿಸಿತು. ಈ ದುರುದ್ದೇಶ ಯಾರಿಗೂ ತಿಳಿಯಬಾರದೆಂದು ಒಂದು ಉಪಾಯ ಮಾಡಿತು. ಕಾಡಿನ ಎಲ್ಲ ಪ್ರಾಣಿಗಳ ಸಭೆ ಕರೆಯಿತು. “”ಪ್ರಾಣಿಗಳೇ, ಎಚ್ಚೆತ್ತುಕೊಳ್ಳಿ. ಮುಂದಿನ ವರ್ಷ ಭಯಂಕರ ಬರಗಾಲ ಅರಣ್ಯವನ್ನು ಕಾಡಲಿದೆ. ಆಹಾರದ ಅಭಾವ ಎದುರಾಗಲಿದೆ. ಅದನ್ನು ಎದುರಿಸಲು ಕೃಷಿ ಮಾಡಿ ಸಾಕಷ್ಟು ಆಹಾರವನ್ನು ಬೆಳೆದು ದಾಸ್ತಾನು ಮಾಡಬೇಕು. ಯಾರು ಕೃಷಿ ಮಾಡಲು ಸಿದ್ಧರಿದ್ದೀರಿ?” ಎಂದು ಕೇಳಿತು. ಕೋತಿ ಮುಂದೆ ಬಂದಿತು. “”ನನಗೆ ಯಾವ ಋತುವಿನಲ್ಲಿ ಯಾವ ಬೆಳೆ ಬರುತ್ತದೆಂಬುದು ಚೆನ್ನಾಗಿ ಗೊತ್ತಿದೆ. ನಾನು ಕೃಷಿ ಮಾಡುತ್ತೇನೆ” ಎಂದಿತು. “”ಸರಿ, ಸಿದ್ಧತೆ ನಡೆಸು” ಎಂದಿತು ಹುಲಿ.

Advertisement

ಕೋತಿ ವಿಶಾಲವಾದ ಸ್ಥಳದಿಂದ ಕಾಡುಕಂಟಿಗಳನ್ನು ತೆಗೆದು ನೆಲವನ್ನು ಸಿದ್ಧಗೊಳಿಸಿತು. ಅದನ್ನು ಹುಲಿಯ ಬಳಿ ಬಂದು ನಿವೇದಿಸಿಕೊಂಡಿತು. “”ಕೃಷಿ ಮಾಡಲು ನೆಲ ತಯಾರಾಗಿದೆ. ಗೆಣಸು ಬೆಳೆಸಲೆ?” ಎಂದು ಕೇಳಿತು. ಹುಲಿ ಕೋಪ ಪ್ರದರ್ಶಿಸಿತು. “”ಹೋಗು ಹೋಗು, ಗೆಣಸು ಬೆಳೆಸಲು ನಿನ್ನಿಂದಾಗದು. ನೀನು ಬೆಳೆಯುವ ಮೊದಲೇ ಎಲ್ಲವನ್ನೂ ಕಿತ್ತು ತಿನ್ನುವವನು. ಬೇರೆ ಯಾರು ಸಮರ್ಥರಿದ್ದೀರಿ ಕೃಷಿ ಮಾಡುವುದಕ್ಕೆ?” ಎಂದು ಕೇಳಿತು. ಹಂದಿ ಮುಂದೆ ಬಂದು ಸಲಾಮು ಮಾಡಿತು. “”ನನಗೆ ಅನುಭವವಿದೆ. ನಾನು ಕೃಷಿ ಮಾಡುತ್ತೇನೆ” ಎಂದಿತು.

ಹುಲಿ ಹಂದಿಗೆ ಕೃಷಿಯ ಜವಾಬ್ದಾರಿ ನೀಡಿತು. ಹಂದಿ ಹೊಲದ ತುಂಬ ಗೊಬ್ಬರ ಹರಡಿತು. ಅದನ್ನು ನೋಡಿ ಹುಲಿ, “”ಇನ್ನು ನೀನು ಕೃಷಿ ಮಾಡುವುದು ಬೇಡ. ಕೃಷಿಯನ್ನು ಅರ್ಧದಲ್ಲೇ ತಿಂದು ಹಾಳು ಮಾಡುವ ಕೆಟ್ಟ ಗುಣ ನಿನ್ನದು. ಹೀಗಾಗಿ ಬುದ್ಧಿವಂತನಾದ ನರಿಯೇ ಹೊಲವನ್ನು ಉಳುಮೆ ಮಾಡಿ ಕೃಷಿ ಮುಂದುವರೆಸಲಿ” ಎಂದು ಹುಲಿ ಹಂದಿಯನ್ನು ದೂರ ಓಡಿಸಿತು. ನರಿ ಎದುರಿಗೆ ಬಂದಿತು. “”ಒಡೆಯಾ, ಹೊಲ ಉಳುಮೆ ಮಾಡಬೇಕಿದ್ದರೆ ಎತ್ತು ಬೇಕಾಗುತ್ತದೆ. ನೀವು ಎತ್ತು ಕೊಡಿಸಿದರೆ ನಾನು ಹೊಲವನ್ನು ಉತ್ತು ಹದ ಮಾಡಿ ಬಿತ್ತನೆಗೆ ತಯಾರಿ ನಡೆಸುತ್ತೇನೆ” ಎಂದು ನಿವೇದಿಸಿತು. ಹುಲಿ ಬಡಕಲು ಎತ್ತನ್ನು ಅದಕ್ಕೆ ತೋರಿಸಿತು. “”ನಿನಗೆ ಕಣ್ಣು ಕಾಣಿಸುವುದಿಲ್ಲವೆ? ಸೊಗಸಾದ ಎತ್ತು ಅಲ್ಲಿ ನಿಂತಿದೆ. ಅದನ್ನೇ ಗದ್ದೆ ಉಳಲು ಉಪಯೋಗಿಸು” ಎಂದು ಆಜ್ಞಾಪಿಸಿತು.

“”ಆದರೆ ಒಡೆಯಾ, ಅದರ ಮೈಯಲ್ಲಿ ಎಲುಬು ಮಾತ್ರ ಇದೆ. ಆಹಾರವಿಲ್ಲದೆ ನಿತ್ರಾಣವಾಗಿದೆ. ಉಳಲು ಬಳಸಿದರೆ ಸತ್ತುಹೋಗುತ್ತದೆ” ನರಿ ಮುಖ ಸಣ್ಣದು ಮಾಡಿ ಹೇಳಿತು. “”ಅದು ನನಗೂ ಗೊತ್ತಿದೆ. ಎತ್ತಿಗೆ ಹಸಿರು ಹುಲ್ಲು, ಮೊಳಕೆ ಬಂದ ಧಾನ್ಯ ಚೆನ್ನಾಗಿ ತಿನ್ನಿಸಿ ಪುಷ್ಟಿಯಾಗುವಂತೆ ಮಾಡು. ಮತ್ತೆ ಹೊಲ ಉಳಲು ಬಳಸು” ಎಂದಿತು ಹುಲಿ. ನರಿ ಒಳ್ಳೆಯ ಆಹಾರ ನೀಡಿ ಎತ್ತನ್ನು ಪ್ರೀತಿಯಿಂದ ಸಲಹಿತು. ಕೆಲವು ವಾರಗಳಲ್ಲಿ ಎತ್ತು ದಷ್ಟಪುಷ್ಟವಾಗಿ ಬೆಳೆಯಿತು. ಎತ್ತು ಮತ್ತು ನರಿ ಅನ್ಯೋನ್ಯವಾಗಿ ಇದ್ದವು.

ಒಂದು ದಿನ ಮೇಯಲು ಹೋಗಿದ್ದ ಎತ್ತು ಕಣ್ಣೀರಿಳಿಸಿಕೊಂಡು ನರಿಯ ಬಳಿಗೆ ಬಂದಿತು. “”ಗೆಳೆಯಾ, ಎಲ್ಲವೂ ಮೋಸ. ಹುಲಿರಾಯನಿಗೆ ಕೃಷಿ ಮಾಡುವ ಉದ್ದೇಶವಿಲ್ಲ. ಅದು ನನಗೆ ಹುಲ್ಲು, ಧಾನ್ಯ ತಿನ್ನಿಸಿ ಗಟ್ಟಿಯಾಗಿ ಬೆಳೆಸಲು ಹೇಳಿದ್ದು ಹೊಲ ಉಳುವುದಕ್ಕಾಗಿ ಅಲ್ಲ. ನನ್ನನ್ನು ಕೊಂದು ಆಹಾರವಾಗಿ ಉಪಯೋಗಿಸುವುದೇ ಅದರ ಉದ್ದೇಶ. ಇದಕ್ಕಾಗಿ ಜ್ಯೋತಿಷಿ ಮೊಲರಾಯನನ್ನು ಕರೆಸಿಕೊಂಡಿದೆ. ಎತ್ತನ್ನು ಕೊಲ್ಲಲು ಒಳ್ಳೆಯ ಮುಹೂರ್ತವಿದೆಯೇ ಎಂದು ಕೇಳಿ ತಿಳಿದುಕೊಂಡಿದೆ. ನಾಳೆ ಬೆಳಗ್ಗೆ ಯೋಗ್ಯವಾದ ಸಮಯವಿದೆಯಂತೆ. ಆಗ ನನ್ನನ್ನು ಅದು ಕೊಲ್ಲುತ್ತದೆ. ಈ ಕುತ್ತಿನಿಂದ ನನ್ನನ್ನು ನೀನು ಪಾರು ಮಾಡಬೇಕು” ಎಂದು ಕೇಳಿಕೊಂಡಿತು.

Advertisement

ನರಿ ಎತ್ತಿಗೆ ಅಭಯ ನೀಡಿತು. “”ಭಯಪಡಬೇಡ. ನಾನು ನಿನ್ನ ಜೀವವುಳಿಸುವ ದಾರಿ ತೋರಿಸಿ ಕೊಡುತ್ತೇನೆ” ಎಂದು ಧೈರ್ಯ ತುಂಬಿತು. ಕಾಡಿಗೆ ಹೋಗಿ ಮರದ ಗೂಟಗಳನ್ನು ಕಡಿದು ತಂದಿತು. ಎಲ್ಲವನ್ನೂ ಹೂಳಿ ಒಂದು ಪಂಜರವನ್ನು ತಯಾರಿಸಿತು. ಹುಲಿಯ ಬಳಿಗೆ ಹೋಯಿತು. ಅದನ್ನೇ ಕಾದಿದ್ದ ಹುಲಿ, “”ನೀನು ಹೊಲ ಉಳಲು ಸಾಕಿರುವ ಎತ್ತು ಅಹಂಕಾರದಿಂದ ಕೊಬ್ಬಿ ಹೋಗಿದೆ. ಕಾಡಿನ ರಾಜ ಬರುವಾಗ ತಲೆ ಬಾಗಿಸಿ ನಮಸ್ಕಾರ ಮಾಡುವುದು ಬಿಟ್ಟು ಪೊಗರಿನಿಂದ ಮುಂದೆ ಸಾಗಿದೆ. ಈ ಅಪರಾಧಕ್ಕಾಗಿ ನಾಳೆ ಬೆಳಗ್ಗೆ ನಾನೇ ಅದನ್ನು ಸ್ವತಃ ಕೊಲ್ಲುತ್ತೇನೆ” ಎಂದು ಗರ್ಜಿಸಿತು.

“”ಪ್ರಭುಗಳ ಕೋಪ ಸರಿಯಾಗಿಯೇ ಇದೆ. ಹುಲ್ಲು, ಧಾನ್ಯ ತಿನ್ನಿಸಿ ಬೆಳೆಸಿದ್ದೇನೆ. ನನ್ನಲ್ಲಿಯೇ ವಿಧೇಯತೆಯಿಂದ ವರ್ತಿಸುವುದಿಲ್ಲ. ಅದನ್ನು ತಾವು ಕೊಲ್ಲುವುದೇ ಸರಿ. ಆದರೆ ಎತ್ತು ಬಲಿಷ್ಠವಾಗಿದೆ. ಅದಕ್ಕೆ ಅಪಾರ ಶಕ್ತಿಯಿದೆ. ಕೊಲ್ಲುವುದು ಸುಲಭವಲ್ಲ. ಇದಕ್ಕಾಗಿ ಒಂದು ಉಪಾಯ ಮಾಡಿದ್ದೇನೆ. ಗೂಡಿನಂತಹ ಒಂದು ಮನೆ ಕಟ್ಟಿದ್ದೇನೆ. ಅದರೊಳಗೆ ಎತ್ತನ್ನು ನಿಲ್ಲಿಸುತ್ತೇನೆ. ನೀವು ಮುಹೂರ್ತದ ಹೊತ್ತಿಗೆ ಬಂದು ಒಳಗೆ ಪ್ರವೇಶಿಸಿ ಅಲ್ಲಿಯೇ ಕೊಂದು ಹಾಕಿ. ಹೀಗೆ ಮಾಡಿದರೆ ಎತ್ತಿಗೆ ಎದುರು ನಿಂತು ಹೋರಾಡಲು ಸಾಧ್ಯವಾಗುವುದಿಲ್ಲ” ಎಂದು ಉಪಾಯ ಹೇಳಿತು.

ಸುಲಭವಾಗಿ ಎತ್ತನ್ನು ಕೊಲ್ಲಲು ನರಿ ನೀಡುವ ಸಹಕಾರ ಕಂಡು ಹುಲಿಗೆ ಖುಷಿಯಾಯಿತು. ಮರುದಿನ ಬೆಳಗ್ಗೆ ಅದು ನರಿಯ ಮನೆಗೆ ಹೋಯಿತು. ಎತ್ತು ಮರದ ಗೂಟಗಳ ಪಂಜರದೊಳಗೆ ನಿಂತಿತ್ತು. ಪಂಜರದ ತೆರೆದ ಬಾಗಿಲಿನೊಳಗೆ ಹುಲಿ ಒಳಗೆ ನುಗ್ಗಿತು. ಕೂಡಲೇ ನರಿ ಪಂಜರದ ಬಾಗಿಲನ್ನು ಭದ್ರವಾಗಿ ಮುಚ್ಚಿತು. ಎತ್ತು ಮತ್ತು ಹುಲಿಯ ನಡುವೆ ಭದ್ರವಾದ ಗೂಟಗಳ ಗೋಡೆಯಿರುವುದು ಹುಲಿಗೆ ಗೊತ್ತೇ ಇರಲಿಲ್ಲ. ನರಿ ಪಂಜರದ ಇನ್ನೊಂದು ಬಾಗಿಲನ್ನು ತೆರೆದು ಎತ್ತನ್ನು ಸುರಕ್ಷಿತವಾಗಿ ಹೊರಗೆ ತಂದಿತು. “”ಇನ್ನೂ ಕಾಡಿನಲ್ಲೇ ಇದ್ದರೆ ನಿನಗೆ ಅಪಾಯ ತಪ್ಪಿದ್ದಲ್ಲ. ಬೇಗನೆ ಹೋಗಿ ಸಮೀಪದ ಊರನ್ನು ಸೇರಿಕೋ. ಯಾರಾದರೂ ಮನುಷ್ಯರ ಆಶ್ರಯ ಪಡೆದು ಸುಖವಾಗಿ ಬದುಕಿಕೋ” ಎಂದು ಹೇಳಿ ಅಲ್ಲಿಂದ ಹೊರಟಿತು.

ಪಂಜರದೊಳಗೆ ಸಿಕ್ಕಿಕೊಂಡಿದ್ದ ಹುಲಿಗೆ ಹೊರಗೆ ಬರಲು ದಾರಿ ತಿಳಿಯಲಿಲ್ಲ. “”ನರಿಯೇ, ಏನಿದು ಮೋಸ? ನನ್ನನ್ನು ಪಂಜರದಲ್ಲಿ ಬಂಧಿಸಿ ಎಲ್ಲಿಗೆ ಹೋಗುತ್ತಿರುವೆ?” ಎಂದು ಗರ್ಜಿಸಿತು. “”ಹುಲಿಯಣ್ಣ, ಮೋಸ ಮಾಡಿದ್ದು ನೀನು. ಕೃಷಿಯ ನೆವದಲ್ಲಿ ಬಡಕಲು ಎತ್ತನ್ನು ಬಲಿಷ್ಠವಾಗುವಂತೆ ಮಾಡಲು ಹೇಳಿ ಆಹಾರವಾಗಿ ಭಕ್ಷಿಸಲು ದುರಾಲೋಚನೆ ಮಾಡಿದ್ದೆಯಲ್ಲವೆ? ಮೋಸಕ್ಕೆ ಮೋಸದಿಂದಲೇ ಪಾಠ ಕಲಿಸಬೇಕು ತಾನೆ?” ಎಂದು ಕೇಳಿ ನರಿ ಹಿಂತಿರುಗಿ ನೋಡದೆ ಹೊರಟುಹೋಯಿತು.

ಪರಾಶರ
 

Advertisement

Udayavani is now on Telegram. Click here to join our channel and stay updated with the latest news.

Next