ಹುಬ್ಬಳ್ಳಿ/ಕಲಬುರಗಿ: ಉತ್ತರ ಕರ್ನಾಟಕದ 13 ಜಿಲ್ಲೆಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯ ರಚನೆ ಮಾಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಗುರುವಾರ ಕರೆ ನೀಡಿದ್ದ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕೆಲವೆಡೆ ಪ್ರತಿಭಟನೆ ನಡೆದದ್ದು ಬಿಟ್ಟರೆ, ಉಳಿದಂತೆ ಜನಜೀವನ ಎಂದಿನಂತಿತ್ತು. ಶಾಲಾ-ಕಾಲೇಜುಗಳು, ವ್ಯಾಪಾರ ವಹಿವಾಟು, ವಾಹನ ಸಂಚಾರ ಎಂದಿನಂತಿತ್ತು. ಮುನ್ನೆಚ್ಚರಿಕೆಯಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಮಧ್ಯೆ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬಂದ್ ವಿರೋಧಿಸಿ ಪ್ರತಿಭಟನೆಗಳು ನಡೆದವು. ಅಲ್ಲದೆ, ಯಲಬುರ್ಗಾದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕರ್ನಾಟಕ ಜನಕಲ್ಯಾಣ ವೇದಿಕೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ಬೆಳಗಾವಿಯಲ್ಲಿ ಉ.ಕ.ಹೋರಾಟ ಸಮಿತಿಯ ಭೀಮಪ್ಪ ಗಡಾದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ, ಬೆಳಗಾವಿ, ಬಳ್ಳಾರಿ ಸೇರಿದಂತೆ ಹಲವೆಡೆ ಜನರಿಗೆ ಗುಲಾಬಿ ಹೂ ಕೊಟ್ಟು ಬಂದ್‌ಗೆ ಬೆಂಬಲ ಸೂಚಿಸದಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮನವಿ ಮಾಡಿದರು.
ಹಾವೇರಿ, ಧಾರವಾಡಗಳಲ್ಲಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಮಧ್ಯೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ವಿಚಾರದಲ್ಲಿ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಹಾವೇರಿಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿಯೇ ಉಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷರನ್ನು ಬದಲಾಯಿಸಿದ ಘಟನೆ ಕೂಡ ನಡೆಯಿತು.
ಇದೇ ವೇಳೆ, ರಾಯಚೂರು, ಯಾದಗಿರಿ, ವಡಗೇರಾ ಸೇರಿದಂತೆ ಹೈ-ಕ ಭಾಗದ ಹಲವೆಡೆ ಬಂದ್ ವಿರೋಧಿಸಿ ಪ್ರತಿಭಟನೆಗಳು ನಡೆದವು. ಯಲಬುರ್ಗಾದಲ್ಲಿ ಹೈ-ಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕರ್ನಾಟಕ ಜನಕಲ್ಯಾಣ ವೇದಿಕೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.