ಸಿಯೋಲ್: ಯುದ್ಧೋನ್ಮಾದ ತೋರುತ್ತಿರುವ ಉತ್ತರಕೊರಿಯಾ ಬುಧವಾರ ಇನ್ನೊಂದು ಖಂಡಾಂತರ್ಗಾಮಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷೆ ಮಾಡಿ ಉದ್ಧಟತನ ಮೆರೆದಿದೆ. ಅಮೆರಿಕ ಉತ್ತರಕೊರಿಯಾವನ್ನು ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸಿದ ಬೆನ್ನಲ್ಲೇ ಈ ಪರೀಕ್ಷೆ ನಡೆದಿದೆ.
ಐಸಿಬಿಎಮ್ ಕ್ಷಿಪಣಿ ಹಾರಿಸಿದ ಬೆನ್ನಲ್ಲೇ ತಜ್ಞರು ಉತ್ತರಕೊರಿಯಾದ ಕ್ಷಿಪಣಿಗಳ ವ್ಯಾಪ್ತಿಯೊಳಗೆ ಅಮೆರಿಕ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಹಾರಿಸಿದ ಕ್ಷಿಪಣಿ ಜಪಾನ್ ಸಮೀಪಕ್ಕೆ ತಲುಪಿದ್ದು, 2,800 ಮೈಲಿಗಳಷ್ಟು ಕ್ರಮಿಸಿ ಜಪಾನ್‌ನ ಜಲಭಾಗದಲ್ಲಿ ಬಿದ್ದಿದೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ.
ಈ ಕ್ಷಿಪಣಿ ಪರೀಕ್ಷೆ ಉತ್ತರಕೊರಿಯಾದಲ್ಲಿ ಉದ್ವಿಗತೆಯನ್ನು ಹುಟ್ಟು ಹಾಕಿದ್ದು, ಅಮೆರಿಕ ಇನ್ನಷ್ಟು ನಿರ್ಬಂಧಗಳನ್ನು ಹೇರುವ ಸಾಧ್ಯತೆಗಳಿವೆ.
ಕ್ಷಿಪಣಿ ಪರೀಕ್ಷೆಯ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ರಕ್ಷಣಾ ಕ್ರಮಗಳನ್ನುಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ‘ನಾವು ನಿಭಾಯಿಸುವ ಪರಿಸ್ಥಿತಿ ಇದು’ ಎಂದಿದ್ದಾರೆ.