Advertisement

ಉತ್ತರ ಕರ್ನಾಟಕದ ಪ್ರಸಿದ್ಧ ಮೈಲಾರ ಜಾತ್ರೆ

12:54 PM Feb 07, 2023 | Team Udayavani |

ಬಳ್ಳಾರಿ: ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯು ಅತಿ ದೊಡ್ಡ ಜಾತ್ರೆಯಾಗಿದೆ. ಭರತ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಭಕ್ತರು ಜಾತ್ರೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ಈ ಜಾತ್ರೆಯ ಸೊಗಡೇ ಹಾಗೆ. ಪ್ರತಿಯೊಬ್ಬರಲ್ಲೂ ಸಂಭ್ರಮ ಮನೆ ಮಾಡಿರುತ್ತದೆ. ಮೈಲಾರಲಿಂಗ ಸ್ವಾಮಿಯು ಯಾವುದೋ ಒಂದು ಜಾತಿ ಜನಾಂಗಕ್ಕೆ ಸೀಮಿತವಲ್ಲ; ಎಲ್ಲ ಜಾತಿ-ಜನಾಂಗದವರ ಆರಾಧ್ಯ ದೇವರಾಗಿದ್ದಾನೆ. ಹಿಂದೂ-ಮುಸ್ಲಿಂ ಬಾಂಧವರು ಅಷ್ಟೇ ಅಲ್ಲ ಎಲ್ಲರೂ ಮೈಲಾರಲಿಂಗ ಸ್ವಾಮಿಗೆ ನಡೆದುಕೊಳ್ತಾರೆ. ಭಕ್ತಿ ಸಲ್ಲಿಸುತ್ತಾರೆ.

Advertisement

ಸ್ವಾಮಿಯ ಜಾತ್ರೆ ಬಂದರೆ ಸಾಕು ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಎಲ್ಲಾ ಜಾತಿ-ಜನಾಂಗದವರು ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಈ ಜಾತ್ರೆಗೆ ರಾಜ್ಯವಷ್ಟೇ ಅಲ್ಲ ವಿವಿಧ ರಾಜ್ಯಗಳ ಮೂಲೆ-ಮೂಲೆಗಳಿಂದಲೂ ಆಗಮಿಸುತ್ತಾರೆ . ಜಾತ್ರೆ ಆರಂಭಗೊಳ್ಳುವ ಒಂದು ತಿಂಗಳ ಮೊದಲೇ ಜಾತ್ರೆಯ ಸಿದ್ಧತೆ ನಡೆಯುತ್ತದೆ. ರೈತರಿಗಂತೂ ಈ ಜಾತ್ರೆಯ ಸಂಭ್ರಮ ಹೇಳತೀರದು. ರೈತರುತಮ್ಮ ಎತ್ತುಗಳನ್ನು ಮೇಯಿಸುವುದು, ಸವಾರಿ ಬಂಡಿಗಾಗಿ ಹೊಸ ವಸ್ತುಗಳನ್ನು ಮುಂಗಡವಾಗಿ ಖರೀದಿಸಿ ಇಟ್ಟುಕೊಳುವುದು ಮುಂತಾದವುಗಳನ್ನು ಮಾಡುತ್ತಾರೆ.

ಹುಣ್ಣಿಮೆಯಿಂದ ಮೂರು ದಿವಸಗಳ ಕಾಲ ಸುಕ್ಷೇತ್ರ ಮೈಲಾರಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಇಂದಿನ ಆಧುನಿಕ ಕಾಲದಲ್ಲೂ ಅತೀ ಹೆಚ್ಚು ಚಕ್ಕಡಿಗಳು ಕಾಣೋದು ಈ ಜಾತ್ರೆಯಲ್ಲಿಯೇ. ಎತ್ತುಗಳನ್ನುಸಿಂಗರಿಸಿಕೊಂಡು ಬಂಡಿ ಕಟ್ಟಿಕೊಂಡು ಜಾತ್ರೆಗೆ ತೆರಳುವುದನ್ನು ನೋಡುವುದೇ ಸಡಗರ-ಸಂಭ್ರಮ. ಮನೆಯಲ್ಲಿ ರೊಟ್ಟಿ, ಹಲವು ಬಗೆಯ ಕಾಳುಗಳ ಪಲ್ಲೆ, ಸಿಹಿ ಪದಾರ್ಥ ತಯಾರಿಸಿಕೊಂಡು ಬುತ್ತಿ ಕಟ್ಟಿಕೊಂಡು ಜಾತ್ರೆಗೆ ಹೊರಡುತ್ತಾರೆ. ಸುಮಾರು ಒಂದು ವಾರಕ್ಕೆ ಸಾಕಾಗುವಷ್ಟು ದವಸ ಧಾನ್ಯಗಳನ್ನು ಶೇಖರಿಸಿಕೊಂಡು ಶ್ರೀ ಕ್ಷೇತ್ರಕ್ಕೆ ಹೊರಡುತ್ತಾರೆ.

ಮೈಲಾರ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮದವರಷ್ಟೇ ಅಲ್ಲ ನೂರಾರು ಕಿಮೀ ದೂರದಿಂದಲೂ ರೈತರು ಬಂಡಿಯಲ್ಲೇ ಕುಟುಂಬ ಸಮೇತ ಇಲ್ಲಿಗೆ ಆಗಮಿಸುತ್ತಾರೆ. ಸಾಮಾನ್ಯವಾಗಿ ಪ್ರತಿ ಬಂಡಿ ಜತೆಯಲ್ಲಿ ಒಬ್ಬರು ಕಾಲ್ನಡಿಗೆಯಲ್ಲಿ ಮೈಲಾರಕ್ಕೆ ಬರುತ್ತಾರೆ. ಜಾತ್ರೆ ಸಮಯದಲ್ಲಿ ಸುಮಾರು ಒಂದು ವಾರ ಕಾಲ ಎತ್ತಿನ ಬಂಡಿ ಜತೆಯಲ್ಲಿ ಟೆಂಟ್‌ ಹಾಕಿಕೊಂಡು ಜನ ಸುಕ್ಷೇತ್ರ ಮೈಲಾರದಲ್ಲಿ ಉಳಿಯುತ್ತಾರೆ.ಇಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳುತ್ತಾರೆ. ಅಲ್ಲದೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೀರಿಸುತ್ತ ಜಾತ್ರೆಯ ಸೊಗಡು ಸವಿಯುತ್ತಾರೆ.

ಭರತ ಹುಣ್ಣಿಮೆಯ ಮಾರನೆಯ ದಿವಸ ಶ್ರೀ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ವೀಕ್ಷಿಸಲು ಸುಮಾರು 15ರಿಂದ 20 ಲಕ್ಷ ಜನ ಒಂದೇ ಕಡೆ ಸೇರುವುದು, ಜಾತ್ರೆಯ ವೈಭವ ಹಾಗೂ ಮೈಲಾರಲಿಂಗೇಶ್ವರ ಸ್ವಾಮಿ ಬಗ್ಗೆ ಜನರಿಗಿರುವ ಭಕ್ತಿ ತೋರುತ್ತದೆ. ಗೊರವಪ್ಪ ಸುಮಾರು 17 ಅಡಿ ಎತ್ತರದ ಕಬ್ಬಿಣದ ಬಿಲ್ಲನ್ನೇರಿ ಭವಿಷ್ಯ ವಾಣಿ ನುಡಿಯುವುದು ಜಾತ್ರೆಯ ಕೌತುಕದ ಕ್ಷಣವಾಗಿರುತ್ತದೆ. ಕಾರ್ಣಿಕ ನುಡಿಯುವ ವಂಶ ಪಾರಂಪರ್ಯ ಕಾರ್ಣಿಕದ ಗೊರವಯ್ಯ ರಾಮಣ್ಣ ಲಕ್ಷಾಂತರ ಜನರ ಸಮ್ಮುಖದಲ್ಲಿ ನೋಡ ನೋಡುತ್ತಿದ್ದಂತೆ ಸರಸರನೇ ಬಿಲ್ಲನ್ನೇರಿ ತುತ್ತ ತುದಿಯಲ್ಲಿ ನಿಂತು ಆಕಾಶವನ್ನು ತದೇಕ ಚಿತ್ತದಿಂದ ವೀಕ್ಷಿಸಿ, ಸದ್ದಲೇ…ಎಂದು ಅಧಿ ಕಾರದ ವಾಣಿ ಮೊಳಗಿಸುತ್ತಾನೆ.

Advertisement

ಲಕ್ಷೋಪ ಲಕ್ಷ ಭಕ್ತರಿದ್ದ ಪ್ರದೇಶದಲ್ಲಿ ಒಂದು ಸೂಜಿ ಮೊನೆ ಬಿದ್ದರೂ ಕೇಳಿಸುವಷ್ಟು ಮೌನ ಆವರಿಸುತ್ತದೆ. ನಂತರ ಗೊರವಪ್ಪ ಶ್ರೀ ಮೈಲಾರಲಿಂಗನ ಆಶೀರ್ವಾದದಂತೆ ಕಾರ್ಣಿಕದ ಭವಿಷ್ಯವಾಣಿ ನುಡಿದು ಭೂಮಿಗೆ ಧುಮುಕುತ್ತಾನೆ. ಇದು ನಿಜಕ್ಕೂ ಕ್ಷಣ ಕಾಲ ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿರಿಸುತ್ತದೆ. ಈ ಕಾರ್ಣಿಕದ ನುಡಿಯಿಂದ ದೇಶದ ಒಳಿತು -ಕೆಡಕುಗಳ ವಿಶ್ಲೇಷಣೆ ಮಾಡಲಾಗುತ್ತದೆ. ನಾಡಿನ ಗಣ್ಯರ ಜೀವನ, ರೈತಾಪಿ ವರ್ಗಕ್ಕೆ ಶುಭ-ಅಶುಭ, ಮಕ್ಕಳು, ಹಿರಿಯ ಜೀವನ, ನಾಡಿನ ಒಳಿತು ಕೆಡುಕುಗಳ ಮುನ್ನೆಚ್ಚರಿಕೆ ಕೈಗನ್ನಡಿ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಹೀಗೆ ಎಲ್ಲಾ ರೀತಿಯಿಂದಲೂ ಶ್ರೀ ಮೈಲಾರ ಕಾರ್ಣಿಕೋತ್ಸವವನ್ನು ಭಕ್ತರು ತಮ್ಮದೇ ಲೆಕ್ಕಾಚಾರದಲ್ಲಿ ವಿಶ್ಲೇಷಿಸುತ್ತಾರೆ.ಕಾರ್ಣಿಕ ನುಡಿ ಭವಿಷ್ಯದ ಸತ್ಯವಾಣಿ ಎಂದು ನಂಬುತ್ತಾರೆ.

ಕಾರ್ಣಿಕೋತ್ಸವ ರಾಕ್ಷಸ ಸಂಹಾರದ ವಿಜಯೋತ್ಸವದ ಸಂಕೇತ

ಹಿಂದೆ ಭೂ ಲೋಕದಲ್ಲಿ ಮಲ್ಲಾಸುರ-ಮಣಿಕಾಸುರ ಎಂಬ ರಾಕ್ಷಸ ಸಹೋದರರು ಮಾನವರೊಳಗೊಂಡಂತೆ ಮುನಿಗಳನ್ನು, ತಪಸ್ವಿಗಳನ್ನು ಹಿಂಸಿಸುತ್ತಿರುತ್ತಾರೆ. ಇವರ ಉಪಟಳ ತಾಳಲಾರದೆ ಕೊನೆಗೆ ದೇವತೆಗಳು ಶಿವನಲ್ಲಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಲು ಮೊರೆ ಹೋಗುತ್ತಾರೆ. ಆಗ ಶಿವ ಪರಮಾತ್ಮನು ಏಳು ಕೋಟಿ ದೇವಾನು ದೇವತೆಗಳ ಸೈನ್ಯ ಕಟ್ಟಿಕೊಂಡು ಶ್ರೀ ಕ್ಷೇತ್ರದ ಮೂಡಣ ದಿಕ್ಕಿನ ಮಣಿಚುರ ಪರ್ವತಕ್ಕೆ ಸಾಗುತ್ತಾನೆ.

ಈ ಸಂದರ್ಭದಲ್ಲಿ ಈಶ್ವರನು ಮಾರ್ತಾಂಡ ಭೈರವನಾಗಿ, ಕಂಬಳಿ ನಿಲುವಂಗಿ, ಮುಂಡಾಸ, ಕೈಯಲ್ಲಿ ಢಮರುಗ, ತ್ರಿಶೂಲ,ದೋಣಿ ಭಂಡಾರ ಬಟ್ಟಲು ಕೈಯಲ್ಲಿ ಹಿಡಿದುಕೊಂಡು ಶ್ರೀ ವಿಷ್ಣುವನ್ನು ಮುಖ್ಯ ಸೇನಾಧಿಪತಿಯನ್ನಾಗಿ, ನಂದೀಶ್ವರ ಕುದುರೆಯಾಗಿ, ರಾಕ್ಷಸರ ಸಂಹಾರಕ್ಕೂ ಗುಪ್ತ ಮೌನ ಸವಾರಿ ಮೂಲಕವಾಗಿ ರಾಕ್ಷಸರು ಅವಿತು ಕುಳಿತಿದ್ದ ಡೆಂಕನ ಮರಡಿಗೆ ತೆರಳುತ್ತಾರೆ.

ರಥಸಪ್ತಮಿ ದಿನದಿಂದ ಸುಮಾರು 11 ದಿನಗಳ ಕಾಲ ರಾಕ್ಷಸರಿಗೂ ಹಾಗೂ ದೇವತೆಗಳಿಗೂ ಘೋರ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ರಾಕ್ಷಸರನ್ನು ಸಂಹಾರ ಮಾಡಲಾಗುತ್ತದೆ ಎಂಬುದು ಪುರಾಣ ಪ್ರಸಿದ್ಧವಾಗಿದೆ. ಮಲ್ಲಾಸುರ ದೈತ್ಯನನ್ನು ಸಂಹರಿಸಿದ್ದಕ್ಕಾಗಿ ಮಲ್ಲಾರಿ ಎಂದು ಹಾಗೆ ಮಲ್ಲಾರಿ ನೆಲೆಸಿದ್ದ ಸ್ಥಳವನ್ನು ಮೈಲಾರವೆಂದು ಪ್ರಸಿದ್ಧಿ ಪಡೆಯಿತೆಂಬ ಪ್ರತೀತಿ ಇದೆ.ರಾಕ್ಷಸರ ಸಂಹಾರದ ನಂತರ ಭೂಲೋಕದಲ್ಲಿ ಮಳೆ ಬೆಳೆ ಸುಭಿಕ್ಷೆಯಿಂದ ಆಗಲು ಮತ್ತು ಪ್ರಜೆಗಳು ಸಂತೋಷವಾಗಿರಲು ನಾಡಿನ ಭಕ್ತರಿಗೆ ಒಳಿತು ಮಾಡುವ ದೇವರ ವಾಣಿ ನಡೆದು ಅದು ಇಂದಿಗೂ ಕಾರ್ಣಿಕದ ನುಡಿಯಾಗಿ ಪ್ರಸಿದ್ಧಿಯಾಗಿದೆ.

-ವಿಶ್ವನಾಥ ಹಳ್ಳಿಗುಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next