Advertisement

ಉತ್ತರ ಕರ್ನಾಟಕಕ್ಕಿದೆ ಸುಸ್ಥಿರ ಪ್ರವಾಸೋದ್ಯಮ ಸಾಮರ್ಥ್ಯ

02:19 PM Sep 27, 2022 | Team Udayavani |

ಹುಬ್ಬಳ್ಳಿ: ಆರೋಗ್ಯಕರ, ಆರ್ಥಿಕ ಭದ್ರತೆಯ ಜತೆಗೆ ಸುಸ್ಥಿರ ಪ್ರವಾಸೋದ್ಯಮ ಇಂದಿನ ಅವಶ್ಯಕವಾಗಿದೆ. ಉತ್ತರ ಕರ್ನಾಟಕದಲ್ಲಿ ದೇವ(ನಿಸರ್ಗ)ನಿರ್ಮಿತ ಹಾಗೂ ಮಾನವ ನಿರ್ಮಿತ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಅದರ ಸಮರ್ಪಕ ಬಳಕೆಯ ಇಚ್ಛಾಶಕ್ತಿ ಬೇಕಾಗಿದೆ..

Advertisement

-ಇದು, ಕಲೆ, ಶಿಲ್ಪಕಲೆ ಪ್ರವಾಸೋದ್ಯಮದ ಬೆಳವಣಿಗೆಗೆ ಹೊಸತನದ ಸ್ಪರ್ಶ ಕೊಟ್ಟಿರುವ ಹಾವೇರಿ ಜಿಲ್ಲೆ ಶಿಗ್ಗಾವಿಯ ಗೋಟಗೋಡಿ “ಉತ್ಸವ ರಾಕ್‌ ಗಾರ್ಡನ್‌’ ಮುಖ್ಯಸ್ಥೆ ವೇದಾರಾಣಿ ಪ್ರಕಾಶ ದಾಸನೂರು ಅವರ ಅನಿಸಿಕೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು ಹೇಳಿದಿಷ್ಟು:

ಒಟ್ಟಾರೆ ಪ್ರವಾಸೋದ್ಯಮವನ್ನು ಪರಿಗಣಿಸಿದರೆ ಶೇಕಡಾ 50ಕ್ಕಿಂತ ಹೆಚ್ಚಿನದ್ದು ನಿಸರ್ಗ ನಿರ್ಮಿತವಾಗಿದ್ದು, ಕೌತುಕತೆಯಿಂದ ಕೂಡಿದೆ. ಕಾಡು, ಸಮುದ್ರ, ನದಿ, ಜಲಪಾತ, ಸಸ್ಯ ಸಂಪತ್ತು, ಪ್ರಾಣಿಗಳು, ಮರುಭೂಮಿ, ಶೀತವಲಯ ಹೀಗೆ ನಿಸರ್ಗ ಸಂಪತ್ತು ಪ್ರವಾಸೋದ್ಯಮ ಆಕರ್ಷಣೆ, ಬೆಳವಣಿಗೆಗೆ ತನ್ನದೇ ಕೊಡುಗೆ ನೀಡಿದೆ. ಜತೆಗೆ ಮಾನವ ನಿರ್ಮಿತ ಪ್ರವಾಸೋದ್ಯಮ ತಾಣಗಳು ಸಹ ತಮ್ಮದೇಯಾದ ವೈಶಿಷ್ಟ್ಯವನ್ನು ಹೊಂದಿವೆ.

ಗುಜರಾತ್‌, ರಾಜಸ್ಥಾನ, ಗೋವಾ ಇನ್ನಿತರ ರಾಜ್ಯಗಳು ನಿಸರ್ಗದತ್ತ ಸಂಪತ್ತುಗಳನ್ನೇ ಬಳಸಿಕೊಂಡು ಪ್ರವಾಸೋದ್ಯಮದಲ್ಲಿ ಪ್ರಗತಿ ಕಂಡುಕೊಂಡಿವೆ. ನೀರು, ಮರುಭೂಮಿ, ಕಾಡು ಪ್ರದೇಶವನ್ನೇ ಪ್ರವಾಸಿ ತಾಣಗಳನ್ನಾಗಿಸಿಕೊಂಡು, ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನಿಸರ್ಗ ನಿರ್ಮಿತ, ಮಾನವ ನಿರ್ಮಿತ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಅನೇಕ ಐತಿಹಾಸಿಕ ತಾಣಗಳಿವೆ. ಆದರೆ, ಮೂಲ ಸೌಕರ್ಯ ಸಮಸ್ಯೆ, ನಿಸರ್ಗ ಸಂಪತ್ತು ಪ್ರವಾಸೋದ್ಯಮವಾಗಿ ಪರಿವರ್ತನೆಗೆ ಇಚ್ಛಾಶಕ್ತಿ ಕೊರತೆ, ತಾಣಗಳ ಬಗ್ಗೆ ಸಮರ್ಪಕ ಪ್ರಚಾರ ಇಲ್ಲದಿರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಅಡ್ಡಿಯಾಗಿವೆ.

ಉತ್ತರ ಕರ್ನಾಟಕದಲ್ಲಿ ಮಾನವ ನಿರ್ಮಿತ ಪ್ರವಾಸೋದ್ಯವನ್ನು ನೋಡುವುದಾದರೆ ಪ್ರಮುಖವಾಗಿ ವಾಸ್ತುಶಿಲ್ಪ, ಶಿಲ್ಪಕಲೆ ಕೇಂದ್ರಿತ ಪ್ರವಾಸೋದ್ಯಮ ತಾಣಗಳು ಕಾಣಸಿಗುತ್ತವೆ. ಹಂಪಿ, ವಿಜಯಪುರ, ಬಾದಾಮಿ, ಐಹೊಳೆ, ಪಟ್ಟಣಕಲ್ಲು ಇನ್ನಿತರ ತಾಣಗಳಿವೆ. ನಮ್ಮಲ್ಲಿನ ನೀರು, ನಿಸರ್ಗ ನಿರ್ಮಿತ ತಾಣಗಳು ಪ್ರವಾಸೋದ್ಯಮ ದೃಷ್ಟಿಯಿಂದ ಬೆಳೆಯಬೇಕಾಗಿದೆ. ಇದಲ್ಲದೆ ಅಧ್ಯಾತ್ಮಿಕ ಪ್ರವಾಸೋದ್ಯಮವೂ ಇಲ್ಲಿ ತನ್ನದೇ ಮಹತ್ವ ಪಡೆದುಕೊಂಡಿದೆ. ದೇವಸ್ಥಾನ, ಜಾತ್ರೆ, ದೈವಿಕ ತಾಣಗಳು ಸ್ಥಳ ಮಹಿಮೆಯೊಂದಿಗೆ ಪ್ರವಾಸೋದ್ಯಮ ರೂಪ ಪಡೆದುಕೊಂಡಿವೆ.

Advertisement

ಉದ್ಯೋಗ ಸೃಷ್ಟಿ ಸಾಧ್ಯ: ಪ್ರವಾಸೋದ್ಯಮ ಬೆಳೆದರೆ ಅದರ ಜತೆ ಜತೆಗೆ ಹತ್ತಾರು ವ್ಯಾಪಾರ-ವಹಿವಾಟು ಕ್ಷೇತ್ರವೂ ಬೆಳೆಯುತ್ತದೆ. ಹೊಟೇಲ್‌, ವಿವಿಧ ವಸ್ತುಗಳ ಖರೀದಿಯೊಂದಿಗೆ ಆರ್ಥಿಕತೆಗೆ ಬಲತುಂಬುತ್ತದೆ. ಅಷ್ಟೇ ಅಲ್ಲ ಇತರೆ ಉದ್ಯಮಗಳಿಗಿಂತಲೂ ಹೆಚ್ಚಿನ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿದೆ. ಇದನ್ನು ಮನಗಾಣುವ ಮೂಲಕ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರವಾಸೋದ್ಯಮದಲ್ಲಿ ದೇಸಿಯ ಸಂಸ್ಕೃತಿ, ಪರಂಪರೆ, ಆಧ್ಯಾತ್ಮ, ಆಹಾರ, ಆಟ, ಕಲೆ, ಸಂಪ್ರದಾಯಗಳನ್ನು ಮೈದಳೆಯುವಂತೆ ಮಾಡಬೇಕಿದೆ. ನಮ್ಮಲ್ಲಿನ ನೀರು, ನಿಸರ್ಗ ಸಂಪತ್ತು, ಸಾಕು ಪ್ರಾಣಿಗಳು, ನಮ್ಮ ಆಟಗಳು, ಜಾನಪದ ಕಲೆ, ಲಲಿತ ಕಲೆ ಇವುಗಳನ್ನು ಬಳಸಿಕೊಂಡರೆ ಅದ್ಭುತ ರೀತಿಯ ಪ್ರವಾಸೋದ್ಯಮ ರೂಪಿಸಬಹುದಾಗಿದೆ. ನಿಸರ್ಗ ಸಂಪತ್ತು ಹಾಳು ಹಾಗೂ ಹಾನಿ ಮಾಡದ ರೀತಿಯಲ್ಲಿ ಪ್ರವಾಸೋದ್ಯಮ ಬಳಕೆಗೆ ಸಾಕಷ್ಟು ಅವಕಾಶಗಳಿವೆ.

ವಿಶೇಷವಾಗಿ ಮಾನವ ನಿರ್ಮಿತ ಮ್ಯೂಸಿಯಂಗಳ ವಿಷಯಕ್ಕೆ ಬಂದರೆ ವಿದೇಶಿಯರಿಂದ ಕಲಿಯಬೇಕಾಗಿದ್ದು ಸಾಕಷ್ಟಿದೆ. ಅವರು ಸಣ್ಣ ಸಣ್ಣ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ಸಂರಕ್ಷಿಸುತ್ತಾರೆ. ನಮ್ಮಲ್ಲಿ ಸಾಕಷ್ಟು ವಸ್ತುಗಳು ನಮ್ಮ ಸುತ್ತಮುತ್ತಲು ಇದ್ದರೂ ಅವುಗಳನ್ನು ಸಂರಕ್ಷಿ ಸುವ, ಮ್ಯೂಸಿಯಂ ವಸ್ತುಗಳನ್ನಾಗಿ ಮಾಡುವ ಮನೋಭಾವದ ಕೊರತೆ ಇದೆ. ಹೈದರಾಬಾದ್‌ನ ಸಾಲಾರ್‌ ಜಂಗ್‌ ಮ್ಯೂಸಿಯಂನಂತಹ ಹಲವು ಮ್ಯೂಸಿಯಂಗಳನ್ನು ರೂಪಿಸುವುದು ಅಸಾಧ್ಯ ವೆಂದೇನಲ್ಲ. ದೃಷ್ಟಿಕೋನ, ಮಾಡುವ ಮನಸ್ಸು ಬೇಕಷ್ಟೇ.

ಕುಟುಂಬ ಗಾರ್ಡನ್‌: ಪ್ರೊ| ಟಿ.ಬಿ.ಸೊಲಬಕ್ಕನವರ ಅವರ ಕಲಾತಪಸ್ಸಿನ ಪ್ರತೀಕವಾಗಿರುವ “ಉತ್ಸವ ರಾಕ್‌ ಗಾರ್ಡನ್‌’ನಲ್ಲಿ ಸಾಕಷ್ಟು ಹೊಸ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕುಟುಂಬ ಮಹತ್ವ-ಮೌಲ್ಯಗಳ ಮನನ ನಿಟ್ಟಿನಲ್ಲಿ ವಿವಿಧ ಧರ್ಮ-ದೇಶಗಳ ಕುಟುಂಬ ವ್ಯವಸ್ಥೆಯ ಚಿತ್ರಣವನ್ನು ನೀಡಲು ಯೋಜಿಸಲಾಗಿದೆ. ಸುಮಾರು ಹತ್ತು ಎಕರೆ ಜಾಗದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಜೈನ್‌, ಬೌದ್ಧ, ವಿವಿಧ ವೃತ್ತಿಯ, ಗ್ರಾಮೀಣ ಹಾಗೂ ಪ್ರಾದೇಶಿಕ ಸೊಗಡಿನ ಕುಟುಂಬ ವ್ಯವಸ್ಥೆಯನ್ನು ಶಿಲ್ಪಕಲೆಗಳ ಮೂಲಕ ಚಿತ್ರಿಸಲಾಗುತ್ತಿದೆ. ಮುಖ್ಯವಾಗಿ ನಮ್ಮ ಋಷಿ-ಮುನಿಗಳು, ಸಂತರ ನಿಸರ್ಗ ಪರಿಕಲ್ಪನೆ ಮೂಡಿಸಲಾಗುತ್ತದೆ.

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next