ಬಳ್ಳಾರಿ: ಭಾರೀ ಮಳೆಯ ಕಾರಣದಿಂದ ತುಂಗಭದ್ರಾ ಜಲಾಶಯದಿಂದ ನದಿಯ ಕೆಳ ಪಾತ್ರಕ್ಕೆ ಹೆಚ್ಚುವರಿ ನೀರನ್ನು ಹರಿಯಬಿಟ್ಟ ಪರಿಣಾಮ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ಉಪ್ಪಳಗಡ್ಡೆಯಲಿ ಐದು ಮಂದಿ ಕುರಿಗಾಹಿಗಳು ತಮ್ಮ ಆರು ನೂರಕ್ಕೂ ಹೆಚ್ಚು ಕುರಿಗಳ ಸಹಿತ ಸಿಕ್ಕಿಹಾಕಿಕೊಂಡಿರುವ ಘಟನೆ ವರದಿಯಾಗಿದೆ. ಈ ಕುರಿಗಾಹಿಗಳ ಮತ್ತು ಆರು ನೂರಕ್ಕೂ ಹೆಚ್ಚಿನ ಕುರಿಗಳ ರಕ್ಷಣೆ ಇದೀಗ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಬಾಗೇವಾಡಿ ಗ್ರಾಮದ ನಿವಾಸಿ ಕಟ್ಟೆಮ್ಯಾಗಳ ನಾಗಪ್ಪ ಎಂಬವರ ಪುತ್ರರು ಆರು ನೂರಕ್ಕೂಅಧಿಕ ಕುರಿಗಳ ಹಿಂಡನ್ನು ಹೊಡೆದುಕೊಂಡು ಕಳೆದ ವಾರವಷ್ಟೇ ಉಪ್ಪಳಗಡ್ಡಗೆ ಹೋಗಿದ್ದರು. ಇದೀಗ ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಟ್ಟಿರುವುದರಿಂದ ಆ ನಾಲ್ವರು ನಡುಗಡ್ಡೆಯಲ್ಲೇ ಸಿಲುಕಿಕೊಂಡಿದ್ದಾರೆ.
ಬಾಗೇವಾಡಿ ಗ್ರಾಮದಲ್ಲಿ ಹನುಮಪ್ಪನ ಗಡ್ಡೆ ಹಾಗೂ ಉಪ್ಪಳಗಡ್ಡೆ ಎಂಬ ಎರಡು ನಡುಗಡ್ಡೆಗಳು ಇವೆ. ಈ ಪ್ರದೇಶದಲ್ಲಿ ವೇದಾವತಿ ಮತ್ತು ತುಂಗಭದ್ರಾ ನದಿಗಳು ಸಂಗಮಿಸುವುದರಿಂದ ಪ್ರತೀ ವರ್ಷವೂ ಇಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗುತ್ತಿರುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದೀಗ ಈ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಕುರಿಗಾಹಿಗಳು ಮತ್ತು ಕುರಿಗಳ ರಕ್ಷಣೆಗೆ ಕಾರ್ಯಾಚರಣೆ ಪ್ರಾರಂಭಗೊಂಡಿದೆ. ಮೊದಲು ತಮ್ಮ ಕುರಿಗಳನ್ನು ರಕ್ಷಿಸುವಂತೆ ಈ ಸಂದರ್ಭದಲ್ಲಿ ಕುರಿಗಾಹಿಗಳು ರಕ್ಷಣಾ ಕಾರ್ಯಾಚರಣೆಯ ತಂಡವನ್ನು ವಿನಂತಿಸಿಕೊಂಡಿದ್ದಾರೆ.
ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಅಂದಾಜು 1.50 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ ಒಂದು ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿತ್ತು. ಜಲಾಶಯದಿಂಧ ನದಿಗೆ ದಿಢೀರ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನಡುಗಡ್ಡೆಯಲ್ಲಿ ಈ ಕುರಿಗಾಹಿಗಳು ತಮ್ಮ ಕುರಿಗಳ ಜೊತೆಯಲ್ಲಿ ಸಿಲುಕಿದ್ದಾರೆ.