ಶಿರಸಿ: ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ಶ್ವಾನ ಪ್ರದರ್ಶನಕ್ಕೆ ಶಿರಸಿ ಸಜ್ಜಾಗಿದೆ. ನಗರದಲ್ಲಿ ನಡೆಯುತ್ತಿರುವ ಹತ್ತನೇ ಡಾಗ್ ಶೋದಲ್ಲಿ ಸುಮಾರು 30ಕ್ಕೂ ಅಧಿಕ ತಳಿಯ ಶ್ವಾನಗಳು ಪ್ರದರ್ಶನ ನೀಡಲಿವೆ ಎಂದು ಆಯೋಜಕರಾದ ಪಶುವೈದ್ಯ ಡಾ| ಪಿ.ಎಸ್. ಹೆಗಡೆ ಹಾಗೂ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್ ತಿಳಿಸಿದ್ದಾರೆ.
ನಗರದ ಟಿಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಏ.10ರ ಸಂಜೆ 5ರಿಂದ ರಾತ್ರಿ 9ರ ತನಕ ಟಿಎಸ್‌ಎಸ್ ಪ್ರಾಯೋಜಿತ ಶ್ವಾನ ಪ್ರದರ್ಶನ ನಡೆಯಲಿದೆ. ಒಂದು ಲಕ್ಷ ರೂ. ತನಕ ಬಹುಮಾನಗಳ ಪ್ರಾಯೋಜನೆ ಆಗಲಿದೆ. 150ಕ್ಕೂ ಅಧಿಕ ಶ್ವಾನಗಳು ಇಲ್ಲಿ ಬಂದು ವಾಕ್ ಮಾಡಲಿವೆ ಎಂದರು.
ಚಾಂಪಿಯನ್‌ಗೆ 25 ಸಾವಿರ, ಪ್ರಥಮ ಬಹುಮಾನ 15 ಸಾವಿರ ಹಾಗೂ ದ್ವಿತೀಯ ಬಹುಮಾನ 10 ಸಾವಿರ ರೂ. ಬಹುಮಾನವಿದೆ. 4ರಿಂದ 8 ವರೆಗಿನ ಉತ್ತಮ ನಾಯಿಗಳಿಗೆ ತಲಾ 2500 ರೂ., ಬೆಸ್ಟ್ ಪಪ್ಪಿಗೆ 2 ಸಾವಿರ ರೂ. ಹಾಗೂ ಬೆಸ್ಟ್ ಸ್ಥಳೀಯ ನಾಯಿಗೆ 2 ಸಾವಿರ ರೂ. ಬಹುಮಾನ ಇಡಲಾಗಿದೆ. ಮೊದಲು ನೋಂದಾಯಿಸಿದರೆ 250 ರೂ. ಸ್ಥಳದಲ್ಲಿ ನೊಂದಾಯಿಸಿದರೆ 300 ರೂ. ಪ್ರವೇಶ ಶುಲ್ಕ ಇಡಲಾಗಿದೆ ಎಂದರು. ದಾವಣಗೆರೆ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗಗಳಿಂದಲೂ ಶ್ವಾನಗಳು ಬರಲಿವೆ. ಪಶು ತಜ್ಞರಾದ ರಾಕೇಶ ಬಂಗಲೆ, ಡಾ| ಯಶಸ್ವಿ ಹಾಗೂ ಡಾ| ನಂದಕುಮಾರ ಪೈ ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ.
ಡೋಗೀ ಅರ್ಜಂಟೈನಾ, ನ್ಯೂ ಪೌಂಡಲೈನ್, ಬಾಕ್ಸರ್, ಫಮಿರಿಯನ್, ಮುಧೋಳ, ಹಚ್, ಪಿಗ್, ಹಿಮಾಚಲನ್ ಮ್ಯಾನೆrಪ್, ಪಾಕುºಲಿ, ಬುಲ್‌ಡಾಗ್ ಸೇರಿದಂತೆ 30ಕ್ಕೂ ಅಧಿಕ ವೆರೈಟಿ ಶ್ವಾನಗಳು ಬರುತ್ತಿವೆ. ಈಗಾಗಲೇ ಅನೇಕ ಶ್ವಾನ ಯಜಮಾನರು ಹೆಸರು ನೋಂದಾಯಿಸಿದ್ದಾರೆ ಎಂದರು. ಕಳೆದ ಹತ್ತು ವರ್ಷಗಳಿಂದ ಶ್ವಾನ ಪ್ರದರ್ಶನ ಮಾಡಲಾಗುತ್ತಿದೆ. ನಾಯಿ ಯಾಕಾಗಿ ಸಾಕಬೇಕು, ಹೇಗೆ ಸಾಕಬೇಕು ಎಂಬ ಜಾಗೃತಿ ಕೂಡ ಇದರಿಂದ ಆಗುತ್ತಿದೆ. ವಿಶೇಷ ಎಂದರೆ ಶೇ.90 ರಷ್ಟು ಹೆಣ್ಮಕ್ಕಳೇ ಶ್ವಾನ ಪ್ರಿಯರಾಗಿದ್ದಾರೆ. ಶೇ.5 ರಷ್ಟು ಯುವಕರು ಹಾಗೂ ಉಳಿದವರು ವೃದ್ಧರು ನಾಯಿ ಸಾಕುತ್ತಿದ್ದಾರೆ ಎಂದರು.
ಟಿಎಸ್‌ಎಸ್‌ನ ವಿನಾಯಕ ಹೆಗಡೆ ಮಕ್ಕಳತಾಯಿಮನೆ, ವಿನಾಯಕ ಹೆಗಡೆ, ಗಿರೀಶ ಹೆಗಡೆ ಇತರರು ಇದ್ದರು.