Advertisement

ಎಂಡೋಬಾಧಿತರ ಸಂಚಾರಿ ಆರೋಗ್ಯ ಘಟಕ ಸ್ಥಗಿತ

06:47 PM Apr 10, 2021 | Team Udayavani |

ಶಿರಸಿ: ಜಿಲ್ಲೆಯ ಎಂಡೋಸಲ್ಫಾನ್‌ ಬಾಧಿತರ ಮನೆ ಬಾಗಿಲಿಗೆ ತೆರಳಿ ಆರೊಗ್ಯ ಸೇವೆ ನೀಡುತ್ತಿದ್ದ, ಸಂಚಾರಿ ಆರೋಗ್ಯ ಘಟಕಗಳು ಕಳೆದ ಒಂದು ವಾರದಿಂದ ಸೇವೆ ಸ್ಥಗಿತಗೊಳಿಸಿದ್ದರಿಂದ ಬಾಧಿತರು ಪರದಾಡುವಂತಾಗಿದೆ.

Advertisement

ಕಳೆದ ಮೂರು ವರ್ಷಗಳಿಂದ ಭಟ್ಕಳ, ಹೊನ್ನಾವರ, ಕುಮಟಾ-ಅಂಕೋಲಾ, ಶಿರಸಿ, ಸಿದ್ದಾಪುರ ಸೇರಿದಂತೆ ಒಟ್ಟು ನಾಲ್ಕು ಸಂಚಾರಿ ಆರೋಗ್ಯ ಘಟಕಗಳು ಜಿಲ್ಲೆಯ ಸುಮಾರು 2000ಕ್ಕಿಂತ ಹೆಚ್ಚು ಎಂಡೋಸಲ್ಫಾನ್‌ ಬಾಧಿತರು ಹಾಗೂ ಅವರ ಕುಟುಂಬಗಳಿಗೆ ನಿರಂತರವಾಗಿ ಆರೋಗ್ಯ ಸೇವೆ ಹಾಗೂ ಉಚಿತ ಔಷಧ ನೀಡುತ್ತಾ ಜನರ ಜೀವನಾಡಿಯಂತೆ ಸೇವೆ ನೀಡುತ್ತಿದ್ದವು. ಆದರೆ ಈ ಸೇವೆಯನ್ನೇ ಅವಲಂಬಿಸಿರುವ ಬಹುವಿಧದ ಅಂಗವೈಕಲ್ಯತೆ ಹಾಗೂ ದೈಹಿಕ ಸಮಸ್ಯೆಯಿಂದ ಬಳಲುತ್ತಿರುವ ಎಂಡೋಸಲ್ಫಾನ್‌ ಬಾಧಿತರು ಸರಿಯಾಗಿ ಔಷಧಗಳು ಹಾಗೂ ಸೇವೆ ಲಭ್ಯವಾಗದೇ ಕಂಗಾಲಾಗಿದ್ದಾರೆ.

ಉತ್ತರ ಕನ್ನಡದಲ್ಲಿರುವ ಎಂಡೋಸಲ್ಫಾನ್‌ ಬಾಧಿತರು ದಕ್ಷಿಣ ಕನ್ನಡದಲ್ಲಿರುವ ಸರ್ಕಾರದ ಸಹಭಾಗಿತ್ವ ಹೊಂದಿದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೋಗಿ ಸೇವೆ ಪಡೆಯಲು ಸಮಸ್ಯೆ ಆಗುತ್ತಿರುವುದರಿಂದ ಮನೆ ಬಾಗಿಲಲ್ಲೇ ಆರೋಗ್ಯ ಸೇವೆ ಲಭಿಸುವಂತೆ ಮಾಡಲು ಪ್ರತಿಷ್ಠಿತ ಸ್ಕೊಡವೆಸ್‌ ಸಂಸ್ಥೆ ಸಹಯೋಗದಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸಲಾಗಿತ್ತು. ಇದೊಂದು ಉತ್ತಮ ಯೋಜನೆಯಾಗಿದ್ದು, ಕೊವಿಡ್‌-19 ಕಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸಂಚಾರಿ ಆರೋಗ್ಯ ಘಟಕಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷéದಿಂದ ಇವು ಸ್ಥಗಿತಗೊಂಡಿವೆ.

ವೈದ್ಯಕೀಯ ಸಿಬ್ಬಂದಿ ಅತಂತ್ರ: ಎಂಡೋಸಲ್ಫಾನ್‌ ಬಾಧಿತರ ಸೇವೆಗೆ ನಿಯೋಜನೆಗೊಂಡ ಸಂಚಾರಿ ಆರೋಗ್ಯ ಘಟಕಗಳು ಸ್ಥಗಿತಗೊಂಡಿದ್ದರಿಂದ ಈ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಸುಮಾರು 30 ಸಿಬ್ಬಂದಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ಬೇರೆ ಬೇರೆ ಊರುಗಳಿಂದ ಉದ್ಯೋಗಕ್ಕಾಗಿ ಬಂದು, ಆಯಾ ತಾಲೂಕಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ ವೈದ್ಯಕೀಯ ಸಿಬ್ಬಂದಿ ಸಂಚಾರಿ ಆರೋಗ್ಯ ಘಟಕಗಳ ಸೇವೆ ಸ್ಥಗಿತಗೊಂಡಿದ್ದರಿಂದ ವಿವಿಧ ರೀತಿಯ ಸಮಸ್ಯೆಗೆ ಒಳಗಾಗಿದ್ದಾರೆ.

ರಾಜ್ಯ ಉತ್ಛ ನ್ಯಾಯಾಲಯದ ಸೂಚನೆಯಂತೆ ಎಂಡೋಸಲ್ಫಾನ್‌ ಬಾಧಿತರಿಗೆ ಉಚಿತ ಆರೋಗ್ಯ ಸೇವೆಯೊಂದಿಗೆ ಇತರ ಸೌಲಭ್ಯಗಳನ್ನೂ ಸಹ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಕೆಲವು ಅಧಿಕಾರಿಗಳ ನಿರ್ಲಕ್ಷéದಿಂದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಂಚಾರಿ ಆರೋಗ್ಯ ಘಟಕಗಳನ್ನು ತಕ್ಷಣ ಪುನರಾರಂಭಿಸಲು ಅಗತ್ಯ ಕ್ರಮಕೈಗೊಳ್ಳದಿದ್ದರೆ ಎಂಡೋ ಬಾಧಿತರು ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವ ಹಾಗೂ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.

Advertisement

ಕ್ಯಾರೇ ಅನ್ನದ ಅಧಿಕಾರಿಗಳು: ಈಗಾಗಲೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಹಾಗೂ ಸಂಸದ ಅನಂತಕುಮಾರ್‌ ಹೆಗಡೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ ಸಂಚಾರಿ ಆರೋಗ್ಯ ಘಟಕಗಳನ್ನು ಮುಂದುವರೆಸುವಂತೆ ಆರೋಗ್ಯ ಸಚಿವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಈ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಜನಪ್ರತಿನಿಧಿಗಳ ಮನವಿಯನ್ನೂ ಲೆಕ್ಕಿಸದೇ ಸಂಚಾರಿ ಆರೋಗ್ಯ ಘಟಕಗಳ ಸೇವೆ ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next