ಕಾರವಾರ: ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ -66ರ ಕಾಮಗಾರಿಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಪರಿಶೀಲಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಕಮಿಷನರ್ ವಿದ್ಯಾ ಚಂದರಗಿ, ತಹಶೀಲ್ದಾರ್ ಆರ್.ವಿ. ಕಟ್ಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದರು.
ಐಆರ್‌ಬಿ ಕಂಪನಿ ಅಧಿಕಾರಿಗಳು ಸಹ ಈ ವೇಳೆ ಇದ್ದರು. ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿಯುವ ಸ್ಥಳಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಕೈಗೊಳ್ಳಬೇಕಾದ ಮುಂಜಾಗ್ರತಾ ಕೆಲಸಗಳ ಬಗ್ಗೆ ನಿರ್ದೇಶನ ನೀಡಿದರು. ನೆರೆ ಹಾವಳಿಯಿಂದ ನೀರು ತುಂಬಿ ಜನ ಜೀವನಕ್ಕೆ ವ್ಯತ್ಯಯ ಉಂಟಾಗುವ ಸ್ಥಳಗಳಿಗೆ ಸಹ ಭೇಟಿ ನೀಡಿ ಪರಿಶೀಲಿಸಿದರು.
ಕಾರವಾರದ ಸಂಕ್ರುಬಾಗ ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ಜಾಗದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳದಲ್ಲಿದ್ದ ಐಆರ್‌ಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಅಮದಳ್ಳಿ ಮುದಗಾ ತಿರುವಿನಲ್ಲಿ ಅತಿವೃಷ್ಟಿಯಿಂದ ನೀರು ತುಂಬುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆಸುವ ಕಂಪನಿಯ ಅಧಿಕಾರಿಗಳಿಗೆ ಅಗತ್ಯ ಕ್ರಮದ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡಲಾಯಿತು. ಹಾಗೂ ನೌಕಾನೆಲೆ ಅಧಿಕಾರಿಗಳಿಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಜೆಸಿಬಿ ಬಳಸಿ ಏಪ್ರಿಲ್ ಅಂತ್ಯದೊಳಗಾಗಿ ಸೂಕ್ತ ಕಾರ್ಯ ಮಾಡಿ, ಮಳೆ ನೀರು ಹರಿಯಲು ದಾರಿ ಮಾಡಿಕೊಡಬೇಕೆಂದು ಆದೇಶಿಸಲಾಯಿತು. ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬೇಕಾಗಿರುವ ಭೂಸ್ವಾಧೀನವಾಗುವ ಸ್ಥಳಗಳಿಗೆ ಸಹ ಭೇಟಿ ನೀಡಲಾಯಿತು.
ಪರಿಹಾರ ಪಡೆದುಕೊಂಡ, ಭೂಸ್ವಾಧೀನವಾದ, ಆದರೆ ಕಂಪನಿಗೆ ಭೂಮಿ, ಮನೆಯ ಜಾಗ ನೀಡಲು ಬಾಕಿ ಉಳಿದಿರುವ ಜಮೀನುಗಳನ್ನು ತಕ್ಷಣ ವಶಕ್ಕೆ ಪಡೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.