Advertisement

ಅನಿವಾಸಿ ಭಾರತೀಯರಿಗೆ ತಾಯ್ನಾಡಿಗೆ ಕೊಡುಗೆ ತುಡಿತ: ಇನ್ಫಿ ಮೂರ್ತಿ

01:02 PM Feb 04, 2023 | Team Udayavani |

ಹುಬ್ಬಳ್ಳಿ: ಅನಿವಾಸಿ ಭಾರತೀಯರಲ್ಲಿ ಭಾರತಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎನ್ನುವ ತುಡಿತವನ್ನು ಕಂಡಿದ್ದೇನೆ. ಅಂತಹ ಪ್ರಯತ್ನದಲ್ಲಿ ಹಲವರು ಯಶಸ್ವಿ ಕೂಡ ಆಗಿದ್ದಾರೆ. ಹುಟ್ಟಿ ಬೆಳೆದ ದೇಶದ ಬಗ್ಗೆ ಅಪಾರ ಹೆಮ್ಮೆಯಿದೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಹೇಳಿದರು.

Advertisement

ಶುಕ್ರವಾರ ಗೋಕುಲ ಗ್ರಾಮದ ಬಳಿಯ ದೇಶಪಾಂಡೆ ಫೌಂಡೇಶನ್‌ ಆವರಣದಲ್ಲಿ ಹಮ್ಮಿಕೊಂಡಿದ್ದ ನವೋದ್ಯಮ ಗ್ರ್ಯಾವಿಟಿ ಸಮ್ಮೇಳನ ಸಮಾರೋಪದ ಸಂವಾದದಲ್ಲಿ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದೇನೆ. ಅಂತಹ ಸಂದರ್ಭದಲ್ಲಿ ಅನಿವಾಸಿ ಭಾರತೀಯರೊಂದಿಗೆ ಮಾತಿಗಿಳಿದಾಗ ಜನ್ಮ ನೀಡಿದ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಲ್ಲಿನ ಜನಪರ ಕಾರ್ಯಗಳಿಗೆ ನೆರವಿನ ಹಸ್ತ ನೀಡಲು ಸಿದ್ಧರಿರುತ್ತಾರೆ ಎಂದರು.

ಉದ್ಯಮ ಆರಂಭಿಸಲು ಇದು ಸಕಾಲವಾಗಿದೆ. ಹಿಂದಿನಷ್ಟು ಸವಾಲುಗಳು, ಸಮಸ್ಯೆಗಳು ಇಂದಿಲ್ಲ. ಕೇಂದ್ರ-ರಾಜ್ಯ ಸರಕಾರ, ಸಮಾಜದಿಂದ ಅಗತ್ಯ ನೆರವು ಇಂದು ದೊರೆಯುತ್ತಿವೆ. ಆದರೆ ಮಾಡುವ ಆಲೋಚನೆ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ಸರಕಾರವೇ ಎಲ್ಲರನ್ನೂ ನೋಡಿಕೊಳ್ಳಲು ಸಾಧ್ಯವಿಲ್ಲ. ಉದ್ಯಮಿಯಾದವನ ಆಲೋಚನೆ ಹಾಗೂ ಅದರ ಅನುಷ್ಠಾನ ಉದ್ಯೋಗ ಹಾಗೂ ದೇಶ ಅಭಿವೃದ್ಧಿಯ ಚಿಂತನೆ ಇರಬೇಕು. ಕಠಿಣ ಪರಿಶ್ರಮ ಹಾಗೂ ಕ್ರಿಯಾಶೀಲ ಚಿಂತನೆಗಳು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.

ನವೋದ್ಯಮಿಗಳಿಗೆ ತಾಳ್ಮೆ ಮುಖ್ಯ. ಮೂಲ ಸ್ವರೂಪ ಪಡೆಯುವ ಹಂತದವರೆಗಿನ ಅವಧಿ ಕಲಿಕೆ ಎಂದು ಭಾವಿಸಬೇಕು. ಈ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ಹೇಳಿದರು. ಆರಂಭದಲ್ಲಿ ಒಂದು ಕಂಪನಿಯನ್ನು ಕಟ್ಟಿದ್ದೆ. ಆದರೆ ನಿರೀಕ್ಷಿಸಿದ ಗ್ರಾಹಕರು ಇರಲಿಲ್ಲ. ಆಗಲೇ ಇನ್ನೊಂದು ಕಂಪನಿಯ ಆರಂಭಕ್ಕೆ ಮುಂದಾದೆ.

1979-82 ನಡುವೆ 13 ಕಂಪನಿಗಳು ಹುಟ್ಟಿಕೊಂಡವು. ಅದರಲ್ಲಿ ಇನ್ಫೋಸಿಸ್‌ ಒಂದಾಗಿತ್ತು. ಇಷ್ಟೊಂದು ಎತ್ತರಕ್ಕೆ ಬೆಳೆದ ಏಕೈಕ ಕಂಪನಿಯಾಗಿದೆ. ಅಂದು ನಮ್ಮ ತಂಡ, ನಾವು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಯಶಸ್ವಿಯಾಗಿ ಇಷ್ಟೊಂದು ದೂರ ಕರೆದುಕೊಂಡು ಬಂದಿದೆ ಎಂದರು.

Advertisement

ಮೊದಲ ಮೂರು ಸ್ಥಾನ ಪಡೆದ ಹಾಗೂ ಉತ್ತಮ ಸ್ಟಾರ್ಟ್‌ಅಪ್‌ಗ್ಳಿಗೆ ಪ್ರಶಸ್ತಿ ಪ್ರದಾನ ಹಾಗೂ ನಗದು ಬಹುಮಾನ ನೀಡಲಾಯಿತು. ಕಲ್ಯಾಣ ಕರ್ನಾಟಕದ 21 ನವೋದ್ಯಮಿಮಗಳಿಗೆ ಪ್ರಶಸ್ತಿ ನೀಡಲಾಯಿತು. ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಗುರುರಾಜ ದೇಶಪಾಂಡೆ, ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ, ದೇಶಪಾಂಡೆ ಸ್ಟಾರ್ಟ್ ಅಪ್ಸ್‌ ಸಿಇಒ ಅರವಿಂದ ಚಿಂಚುರೆ ಇದ್ದರು.

ನಾವು ಮಾಡುವ ಮೂಲ ಚಿಂತನೆಯಲ್ಲಿಯೇ ಕೆಲವೊಮ್ಮೆ ಸಮಸ್ಯೆ ಇರಬಹುದು. ತಂಡದ ಪ್ರತಿಯೊಬ್ಬರ ಸಲಹೆ-ಸೂಚನೆ ಕೇಳಬೇಕು. ಅಂತಿಮ ನಿರ್ಧಾರ ನಾಯಕನದ್ದಾಗಿರಬೇಕು. ಆ ನಿರ್ಧಾರ ಪ್ರತಿಯೊಬ್ಬರ ಆತಸ್ಥೈರ್ಯ ಹೆಚ್ಚಿಸುವಂತಿರಬೇಕು. ಸಲಹೆ ಕೇಳಲು ಹೆಚ್ಚಿನ ಸಮಯ ಬೇಡ. ನಿರ್ಧಾರ ಕೈಗೊಳ್ಳಲು ಮಾತ್ರ ಸಮಯ ಬೇಕಾಗುತ್ತದೆ.
*ಎನ್‌.ಆರ್‌. ನಾರಾಯಣಮೂರ್ತಿ, ಇನ್ಫೋಸಿಸ್‌ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next