Advertisement

ವಸತಿ ರಹಿತರ ಆನ್‌ಲೈನ್‌ ಸಮೀಕ್ಷೆ

12:16 PM Jul 27, 2018 | Team Udayavani |

ಬೆಂಗಳೂರು: ಆನ್‌ಲೈನ್‌ ಸಮೀಕ್ಷೆ ಮೂಲಕ ನಿವೇಶನ ರಹಿತರನ್ನು ಗುರುತಿಸುವ ಕಾರ್ಯಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಂದಾಗಿದೆ.

Advertisement

ಇದೇ ಮೊದಲ ಬಾರಿ ಇಂಥದೊಂದು ಪ್ರಯತ್ನ ನಡೆಯುತ್ತಿದ್ದು, ಈಗಾಗಲೇ 40 ಸಾವಿರಕ್ಕೂ ಅಧಿಕ ವಸತಿ ಹಾಗೂ ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಈ ತಿಂಗಳ ಅಂತ್ಯದವರೆಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಕಾಲವಕಾಶವಿದೆ. ಹೀಗಾಗಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಂದಿಕೊಂಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆ ಇಲ್ಲದರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇಂತಹ ಕುಟುಂಬಗಳನ್ನು ಗುರುತಿಸಿ ಅಂತವರಿಗೆ ಮನೆಗಳನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅನುದಾನ ಎಷ್ಟು?: ನಿವಾಸ ಹೊಂದಿರದವರಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮತ್ತು ರಾಜ್ಯ ಸರ್ಕಾರದ ಬಸವ ವಸತಿ ಮತ್ತು ಅಂಬೇಡ್ಕರ್‌ ಯೋಜನೆಯಡಿ ವಸತಿ ಕಲ್ಪಿಸಲಾಗುತ್ತದೆ. ಆನ್‌ಲೈನ್‌ ಅರ್ಜಿಗಳನ್ನು ಪರಿಶೀಲಿಸಲಿರುವ ಗ್ರಾಮ ಸಭೆಗಳು ಫ‌ಲಾನುಭವಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ.

ಈ ಯೋಜನೆಯಡಿ ಆಯ್ಕೆಯಾದ ಫ‌ಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಬಸವ ವಸತಿ ಯೋಜನೆಯಡಿ 1.20 ಲಕ್ಷ ಮತ್ತು ಉದ್ಯೋಗ ಖಾತರಿ ಯೋಜನೆಯಡಿ 20 ಸಾವಿರ ರೂ ಅನುದಾನ ನೀಡಲಾಗುತ್ತದೆ. ಮನೆ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ ಹಂತ -ಹಂತವಾಗಿ ಅನುದಾನ ಒದಗಿಸಲಾಗುತ್ತದೆ.

Advertisement

ಜನತೆಗೆ ತಿಳಿವಳಿಕೆ: ಬೆಂಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಆನೇಕಲ್‌, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯಲ್ಲಿ ಕಳೆದ ತಿಂಗಳೇ ಆನ್‌ಲೈನ್‌ ಸಮೀಕ್ಷೆ ಆರಂಭವಾಗಿದೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ನೋಡಲ್‌ ಅಧಿಕಾರಿಗಳು ಕೂಡ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಹಿರಿಯ ಯೋಜನಾ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ 11,036 ವಸತಿ ರಹಿತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಆನೇಕಲ್‌ ತಾಲೂಕಿನಲ್ಲಿ 3119, ಬೆಂಗಳೂರು ಪೂರ್ವ ತಾಲೂಕಿನಲ್ಲಿ 545, ಬೆಂಗಳೂರು ಉತ್ತರ ತಾಲೂಕಿನಲ್ಲಿ 6650 ಮತ್ತು ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 722 ಅರ್ಜಿಗಳು ಸಲ್ಲಿಕೆಯಾಗಿವೆ.

ಗುರಿ ಎಷ್ಟು?: 2018-19ನೇ ಸಾಲಿನಲ್ಲಿ ಬಸವ ವಸತಿ ಮತ್ತು ಅಂಬೇಡ್ಕರ್‌ ಯೋಜನೆಯಡಿ 4,196 ಮನೆಗಳ ನಿರ್ಮಾಣದ ಗುರಿಯನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಹೊಂದಿದೆ. ಕಳೆದ ವರ್ಷ 6,100 ಮನೆಗಳ ನಿರ್ಮಾಣ ಗುರಿಯಲ್ಲಿ, 4,463 ಮನೆಗಳನ್ನು ನಿರ್ಮಿಸಲಾಗಿದೆ. 1,637 ಮನೆಗಳ ನಿರ್ಮಾಣ ವಿವಿಧ ಹಂತಗಳಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವಸತಿ ಮತ್ತು ನಿವೇಶನ ರಹಿತರನ್ನು ಆನ್‌ಲೈನ್‌ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
-ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

* ದೇವೇಶ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next