ಮಂಗಳೂರು: ರಾಜ್ಯದಲ್ಲಿ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಾಗದೆ ಮೂಟೆಗಟ್ಟಲೆ ಉಳಿದುಕೊಂಡ ಪರಿಣಾಮ ಕರಾವಳಿಯ ಬ್ಯಾಂಕ್‌ಗಳಿಗೆ 10 ರೂ. ಹೊಸ ನೋಟುಗಳು ಬರುತ್ತಿಲ್ಲ.
ಮೂರು ವರ್ಷಗಳಿಂದ 10 ರೂ. ಹೊಸ ನೋಟುಗಳು ಬರುತ್ತಿಲ್ಲ. ಇತರೆಲ್ಲ ರಾಜ್ಯ ಗಳಲ್ಲಿ 10 ರೂ. ನಾಣ್ಯಗಳ ಮೇಲೆ ಜನರಿಗೆ ಸಂಶಯ ಇಲ್ಲ, ಅಲ್ಲೆಲ್ಲ ಚಲಾವಣೆಯಾಗುತ್ತಿದೆ. ಹಾಗಾಗಿ ಅಲ್ಲಿಗೆ 10 ರೂ.ನ ಹೊಸ ನೋಟುಗಳ ಬಂಡಲುಗಳೂ ಹೋಗುತ್ತಿವೆ. ನಮ್ಮಲ್ಲಿ ಮಾತ್ರ ಕೊರತೆಯಾಗಿದೆ ಎಂದು ಭಾರತೀಯ ಸ್ಟೇಟ್‌ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಮಸ್ಯೆ ಕರಾವಳಿ ಜಿಲ್ಲೆಗಳಲ್ಲೂ ಇದೆ. ಹೊಸದಾಗಿ ನೋಟು ಕೇಳಿಕೊಂಡು ಬರುವವರಿಗೆ ನೀಡಲು ನಮ್ಮಲ್ಲಿ ನೋಟುಗಳು ಇರುವುದಿಲ್ಲ. 10 ರೂ. ನಾಣ್ಯಗಳು ದೊಡ್ಡ ಪ್ರಮಾಣದಲ್ಲಿ ಶಾಖೆಗಳಲ್ಲಿಉಳಿದುಕೊಂಡಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ನೋಟುಗಳನ್ನು ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಬರುತ್ತಿಲ್ಲ ಹೊಸ ನೋಟು
ಬ್ಯಾಂಕ್‌ನವರ ಪ್ರಕಾರ ಮೂರು ವರ್ಷಗಳಿಂದ 10ರ ಹೊಸ ನೋಟು ಬರುತ್ತಿಲ್ಲ. ಇರುವ ನೋಟುಗಳೇ ಚಲಾವಣೆಯಾಗುತ್ತಿವೆ. ಸಮಾರಂಭಗಳಲ್ಲಿ ದಕ್ಷಿಣೆ ರೂಪದಲ್ಲಿ ನೀಡುವುದಕ್ಕೆ, ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ಜನರಿಗೆ ಹೊಸ ನೋಟುಗಳು ನೇರವಾಗಿ ಉಪಯೋಗಕ್ಕೆ ಬರುವುದು ಒಂದೆಡೆಯಾದರೆ ಸತತ ಚಲಾವಣೆಯಲ್ಲಿರುವ ನೋಟುಗಳು ಹಾಳಾಗುವುದರಿಂದ ನಿಯಮಿತವಾಗಿ ನೋಟುಗಳು ಪ್ರಸರಣದಲ್ಲಿ ಇರುವ ಅಗತ್ಯವಿರುತ್ತದೆ. ಪೇಮೆಂಟ್ ಆ್ಯಪ್‌ಗ್ಳಿಂದಾಗಿ ಚಿಲ್ಲರೆ ಸಮಸ್ಯೆ ಸ್ವಲ್ಪ ಕಡಿಮೆಯಾಗಿದ್ದರೂ ಹಾಲು, ತರಕಾರಿ, ಮತ್ತಿತರ ದೈನಂದಿನ ಅಗತ್ಯಗಳಿಗೆ ಅತ್ಯಧಿಕವಾಗಿ ಬಳಕೆಯಾಗುವುದು 10ರ ನೋಟು. ಹಾಗಾಗಿ ಸದ್ಯ ಹಳೆಯ, ಮಾಸಿದ, ಹರಕಲು ನೋಟುಗಳೇ ಕರಾವಳಿಯಲ್ಲಿ ಚಲಾವಣೆಯಲ್ಲಿವೆ ಎನ್ನುತ್ತಾರೆ ಅಧಿಕಾರಿಗಳು.
Related Articles
ಬೇಡಿಕೆ ಇಲ್ಲದಿದ್ದರೂ
ಬರುತ್ತಿದೆ 10ರ ನಾಣ್ಯ!
ಹಲವು ಶಾಖೆಗಳಲ್ಲಿ 10 ರೂ. ನಾಣ್ಯ ಮೂಟೆಗಟ್ಟಲೆ ಉಳಿದುಕೊಂಡಿವೆ. ಹಾಗಿದ್ದರೂ ಹೊಸ ನಾಣ್ಯಗಳು ಮತ್ತೆ ಬರುತ್ತಿವೆ. ಬೇಕಾದವರು ಮಾತ್ರ ಬಂದು ಪಡೆದುಕೊಂಡು ಹೋಗುತ್ತಿದ್ದಾರೆ. ಆದರೆ 10ರ ನೋಟು ಬರುವುದು ನಿಂತೇ ಹೋಗಿದೆ ಎಂದು ಯೂನಿಯನ್ ಬ್ಯಾಂಕ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನೇಕ ಬಾರಿ ಕಾಯಿನ್ ಮೇಳ ನಡೆಸಿ 10 ರೂ. ನಾಣ್ಯ ವಿತರಣೆಗೆ ಯತ್ನ ಮಾಡಲಾಗಿದೆ. ಆದರೂ ಜನರಿಗೆ 10ರ ನಾಣ್ಯದ ಮೇಲೆ ಅದೇಕೋ ಸಂಶಯ ನಿವಾರಣೆಯಾಗುತ್ತಿಲ್ಲ. ಈಗ 1, 2 ರೂ. ನಾಣ್ಯಗಳ ಚಲಾವಣೆ ನಿಧಾನಕ್ಕೆ ಕಡಿಮೆಯಾಗುತ್ತಿದೆ, ಅವುಗಳ ಸ್ಥಾನವನ್ನು 10 ರೂ. ನಾಣ್ಯಗಳು ಆಕ್ರಮಿಸಲಿವೆ, ಮುಂದೆ ಅದರ ಚಲಾವಣೆ ಅನಿವಾರ್ಯ ಎನ್ನುತ್ತಾರೆ ಅವರು.
2,000 ರೂ.
ನೋಟು ಕೂಡ ಇಲ್ಲ
2,000 ರೂ. ಮುಖಬೆಲೆಯ ನೋಟಿನ ಮುದ್ರಣವನ್ನೂ ಆರ್‌ಬಿಐ ನಿಲ್ಲಿಸಿರುವುದರಿಂದ ಹೊಸ ನೋಟುಗಳು ಬರುತ್ತಿಲ್ಲ. ಬಹುತೇಕ ಮೂರ್‍ನಾಲ್ಕು ವರ್ಷಗಳ ಹಿಂದಿನ ನೋಟುಗಳಾದ್ದರಿಂದ ಹಾಳಾಗಿವೆ. ಹಾಗಾಗಿ ಎಟಿಎಂಗಳಲ್ಲಿ ಈಗ ನಾವು ಕೇವಲ 500 ರೂ., 200 ರೂ. ಮತ್ತು 100 ರೂ. ನೋಟು ಮಾತ್ರವೇ ಹಾಕುತ್ತಿದ್ದೇವೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.
ಯಾಕೆ ಈ ತಿರಸ್ಕಾರ?
ಕೆಲವು ವರ್ಷಗಳ ಹಿಂದೆ ಹೊಸ 10 ರೂ. ನಾಣ್ಯ (ಚಿನ್ನ ಹಾಗೂ ಸ್ಟೀಲ್ ಬಣ್ಣವೆರಡೂ ಇರುವ) ಬಿಡುಗಡೆಯಾದ ಸಂದರ್ಭ ಕೆಲವು ಕಡೆಗಳಲ್ಲಿ ಈ ನಾಣ್ಯದ ನಕಲಿಗಳು ಮಾರುಕಟ್ಟೆಗೆ ಬಂದಿತ್ತು ಎಂಬ ಗಾಳಿಸುದ್ದಿ ಹರಡಿತ್ತು. ಆ ಬಳಿಕ ಜನ 10 ರೂ. ನಾಣ್ಯ ತಿರಸ್ಕರಿಸಲು ಆರಂಭಿಸಿದ್ದರು. ಅಲ್ಲದೆ ಈ ನಾಣ್ಯ ಭಾರ ಇದ್ದು ಇರಿಸಿಕೊಳ್ಳುವುದಕ್ಕೆ ರಗಳೆ ಎಂಬ ಅಭಿಪ್ರಾಯವೂ ಇದೆ.
– ವೇಣುವಿನೋದ್ ಕೆ.ಎಸ್.