Advertisement

ಮಾಂಸಾಹಾರಿ ಗೋವು ಉತ್ಪನ್ನಕ್ಕೆ ನಕಾರ

12:30 AM Mar 07, 2019 | Team Udayavani |

ಹೊಸದಿಲ್ಲಿ: ಭಾರತಕ್ಕೆ ಮಾಂಸದ ಅಂಶವಿರುವ ಆಹಾರ ಸೇವಿಸಿದ ಆಕಳಿನ ಹಾಲು ಉತ್ಪನ್ನವನ್ನು ರಫ್ತು ಮಾಡುವ ಅಮೆರಿಕದ ಪ್ರಯತ್ನಕ್ಕೆ ಕೇಂದ್ರ ಸರಕಾರ ಮಣಿಯುತ್ತಿಲ್ಲ ಎಂಬುದು ತಿಳಿದುಬಂದಿದೆ. ಭಾರತದೊಂದಿಗೆ ವ್ಯಾಪಾರ ತೆರಿಗೆ ವಿಚಾರದಲ್ಲಿ ಚೌಕಾಸಿ ನಡೆಸುತ್ತಿರುವ ಅಮೆರಿಕ, ಈ ಉತ್ಪನ್ನಗಳನ್ನು ರಫ್ತು ಮಾಡಲು ಅವಕಾಶ ನೀಡುವಂತೆ ಒತ್ತಾಯ ಮಾಡುತ್ತಿದೆ. ಆದರೆ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಇದಕ್ಕೆ ಸರಕಾರ ಅವಕಾಶ ನೀಡುತ್ತಿಲ್ಲ. ಅಲ್ಲದೆ, ಹಾಲಿನ ಉತ್ಪನ್ನಗಳನ್ನು ಆಮದು ಮಾಡುವಾಗ, ಜಾನುವಾರುಗಳಿಗೆ ಮಾಂಸ ಮೂಲದ ಆಹಾರವನ್ನು ನೀಡಿಲ್ಲ ಎಂಬ ಪ್ರಮಾಣ ಪತ್ರವನ್ನು ನೀಡಬೇಕು ಎಂಬ ತನ್ನ ಪಟ್ಟು ಸಡಿಲಿಸಿಲ್ಲ. ಭಾರತದೊಂದಿಗೆ ಆದ್ಯತೆ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಲವು ತೋರಿದ್ದರು. ಈ ಹಿನ್ನೆಲೆಯಲ್ಲಿ ವ್ಯಾಪಾರ ಒಪ್ಪಂದ ಕುರಿತ ಚರ್ಚೆಯಲ್ಲಿ ಈ ವಿಚಾರ ಪ್ರಸ್ತಾಪಿಸಲ್ಪಟ್ಟಿದೆ. ಕಸಾಯಿಖಾನೆಯಲ್ಲಿನ ರಕ್ತವನ್ನು ಸಂಸ್ಕರಿಸಿ ಪುಡಿ ರೂಪದಲ್ಲಿ ಆಹಾರ ತಯಾರಿಸಿ ಅಮೆರಿಕದಲ್ಲಿ ಜಾನುವಾರುಗಳಿಗೆ ನೀಡಲಾಗುತ್ತದೆ. ಇದು ಅಮಿನೋ ಆಸಿಡ್‌ ಕೊರತೆ ನೀಗಿಸಲು ಹಾಗೂ ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಸೂಕ್ತ ಎಂದು ಹೇಳಲಾಗುತ್ತದೆ. ಇದನ್ನು ಭಾರತದಲ್ಲಿ ಬಳಸಲು ಹಿಂದೂ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹಿಂದಿನಿಂದಲೂ ಇದಕ್ಕೆ ನಿರ್ಬಂಧ ವಿಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next