Advertisement

BJPಯೇತರ ಪಕ್ಷಗಳು ಒಂದಾಗಬೇಕು: ಕೇಜ್ರಿವಾಲ್‌ ಕರೆ

10:28 PM May 25, 2023 | Team Udayavani |

ಮುಂಬೈ/ನವದೆಹಲಿ: ಬಿಜೆಪಿಯೇತರ ಪ್ರತಿಪಕ್ಷಗಳು ಒಂದಾದರೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಸೋಲಿಸಬಹುದು ಎಂದು ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ದೆಹಲಿಯಲ್ಲಿ ಗ್ರೂಪ್‌ ಎ ಅಧಿಕಾರಿಗಳ ವರ್ಗಾವಣೆ ಮತ್ತು ಶಿಸ್ತುಕ್ರಮ ಸಂಬಂಧ ದೆಹಲಿ ಸರ್ಕಾರದ ಅಧಿಕಾರವನ್ನು ಕಿತ್ತುಕೊಳ್ಳುವ ಸುಗ್ರೀವಾಜ್ಞೆಯನ್ನುಕೇಂದ್ರ ಸರ್ಕಾರ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸತತವಾಗಿ ವಿಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿರುವ ಕೇಜ್ರಿವಾಲ್‌, ಇದೀಗ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಬೆಂಬಲ ಗಿಟ್ಟಿಸಿಕೊಂಡಿದ್ದಾರೆ.

Advertisement

ಕೇಂದ್ರ ಸರ್ಕಾರದ ಹೊಸ ಸುಗ್ರೀವಾಜ್ಞೆ ಒಕ್ಕೂಟ ವ್ಯವಸ್ಥೆಗೇ ಸವಾಲಾಗಿ ಪರಿಣಮಿಸಿದೆ. ಬಿಜೆಪಿಯೇತರ ಪಕ್ಷಗಳು ರಾಜ್ಯಸಭೆಯಲ್ಲಿ ಒಗ್ಗಟ್ಟಾಗಿ ನಿಂತರೆ ರಾಜ್ಯಸಭೆಯಲ್ಲಿ ಅದಕ್ಕೆ ಸಂಬಂಧಿಸಿದ ವಿಧೇಯಕ ಚರ್ಚೆಗೆ ಬಂದಾಗ ಸೋಲಿಸಲು ಸಾಧ್ಯವಿದೆ ಎಂದು ಪವಾರ್‌ ಭೇಟಿಯ ಬಳಿಕೆ ಕೇಜ್ರಿವಾಲ್‌ ಹೇಳಿದ್ದಾರೆ. ಚುನಾಯಿತ ಸರ್ಕಾರದ ಅಧಿಕಾರವನ್ನು ರಕ್ಷಿಸಲೇಬೇಕಾಗಿದೆ, ಈ ನಿಟ್ಟಿನಲ್ಲಿ ಬೆಂಬಲ ಪಡೆದುಕೊಳ್ಳಲು ಕೇಜ್ರಿವಾಲ್‌ ಅವರು ಕಾಂಗ್ರೆಸ್‌, ಬಿಜು ಜನತಾ ದಳ ಸೇರಿದಂತೆ ಎಲ್ಲಾ ಪಕ್ಷಗಳನ್ನು ಭೇಟಿ ಮಾಡಬೇಕು ಎಂದು ಪವಾರ್‌ ಅಭಿಪ್ರಾಯಪಟ್ಟಿದ್ದಾರೆ.

ಖರ್ಗೆ ಭೇಟಿ ಮಾಡುವೆ: ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿಯನ್ನು ಭೇಟಿ ಮಾಡಲು ಕೇಜ್ರಿವಾಲ್‌ ತೀರ್ಮಾನಿಸಿದ್ದಾರೆ. ಪವಾರ್‌ ಭೇಟಿ ವೇಳೆ ಈ ಬಗ್ಗೆ ಮಾತನಾಡಿದ ಕೇಜ್ರಿವಾಲ್‌, ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಲು ಇಚ್ಛಿಸಿದ್ದೇನೆ ಎಂದಿದ್ದಾರೆ. ಈಗಾಗಲೇ ಟಿಎಂಸಿ, ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ಕೇಜ್ರಿವಾಲ್‌ಗೆ ಬೆಂಬಲ ನೀಡಿದೆ.

ಮಾಜಿ ಸಚಿವ ಸತ್ಯೇಂದ್ರ ಜೈನ್‌ ಐಸಿಯುನಲ್ಲಿ
ತಿಹಾರ್‌ ಜೈಲಿನಲ್ಲಿ ಇರುವ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಅವರು ಗುರುವಾರ ಏಕಾಏಕಿ ಕುಸಿದು ಬಿದ್ದಿದ್ದಾರೆ. ಹೀಗಾಗಿ, ಅವರನ್ನು ದೀನ್‌ದಯಾಳ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಕೂಡಲೇ ಸರ್ಕಾರಿ ಸ್ವಾಮ್ಯದ ಲೋಕನಾಯಕ ಜಯಪ್ರಕಾಶ್‌ ನಾರಾಯಣ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವಾರದ ಅವಧಿಯಲ್ಲಿ ಮಾಜಿ ಸಚಿವರನ್ನು ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಜೈಲಿನ ಸ್ನಾನ ಗೃಹದಲ್ಲಿ ತಲೆಸುತ್ತಿನಿಂದ ಬಿದ್ದಿದ್ದರು. ಅವರು ಕೂಡಲೇ ಗುಣಮುಖರಾಗಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಹಾರೈಕೆ ಮಾಡಿ ಟ್ವೀಟ್‌ ಮಾಡಿದ್ದಾರೆ. ಜತೆಗೆ ಪ್ರಧಾನಿ ಮೋದಿಯವರನ್ನು ಪರೋಕ್ಷವಾಗಿ ಉಲ್ಲೇಖೀಸಿ ಟೀಕಿಸಿದ್ದಾರೆ.”ಒಬ್ಬ ನಿರಂಕುಶವಾದಿ ಜನರಿಗಾಗಿ ಉತ್ತಮ ಕೆಲಸ ಮಾಡಿದ ವ್ಯಕ್ತಿಯನ್ನು ಹಿಂಸೆಗೆ ಗುರಿಮಾಡಿದ್ದಾರೆ. ದೇವರು ಎಲ್ಲವನ್ನೂ ವೀಕ್ಷಿಸುತ್ತಿದ್ದಾನೆ ಮತ್ತು ಒಳ್ಳೆಯದನ್ನು ಮಾಡಲಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next