Advertisement

ನಾಮಕರಣ ಬದಲಾವಣೆಗೆ ಆಗ್ರಹ

07:24 AM Feb 15, 2019 | Team Udayavani |

ದಾವಣಗೆರೆ: ಸರಕಾರಿ ಅನುದಾನದಲ್ಲಿ ನಡೆದ ಸಾರ್ವಜನಿಕ ಕಾಮಗಾರಿಗಳಿಗೆ ಜೀವಂತವಿರುವ ಜನಪ್ರತಿನಿಧಿಗಳ ಹೆಸರು ಇಟ್ಟಿರುವುದನ್ನು 15 ದಿನದೊಳಗಾಗಿ ತೆಗೆದುಹಾಕಿ ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಬೇಕು ಎಂದು ಬಿಜೆಪಿ ದಾವಣಗೆರೆ ಜಿಲ್ಲೆ ಕಾನೂನು ವಿಭಾಗದ ಜಿಲ್ಲಾ ಸಂಚಾಲಕ ಎ.ಸಿ. ರಾಘವೇಂದ್ರ ಒತ್ತಾಯಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಅನುದಾನದಲ್ಲಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ನಡೆದ ಕಾಮಗಾರಿಗಳಾದ ರಸ್ತೆ, ಉದ್ಯಾನವನ, ಜಿಲ್ಲಾ ಪಂಚಾಯತ್‌, ಮಹಾನಗರಪಾಲಿಕೆ ಸಭಾಂಗಣ, ಬಸ್‌ ನಿಲ್ದಾಣ ಸೇರಿದಂತೆ ಹಲವೆಡೆ ಜೀವಂತವಿರುವ ಜನಪ್ರತಿನಿಧಿಗಳ ಹೆಸರಿಡಲಾಗಿದ್ದು. ಇದು ಕಾನೂನು ಬಾಹಿರವಾಗಿದೆ ಎಂದರು. 

ಈ ಹಿಂದೆ 2011ರಲ್ಲಿ ಚನ್ನಗಿರಿಯ ಸಾರ್ವಜನಿಕ ಕ್ರೀಡಾಂಗಣಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ಕ್ರೀಡಾಂಗಣವೆಂದು ನಾಮಕರಣ ಮಾಡಿದ ಪ್ರಕರಣಕ್ಕೆ
ಸಂಬಂಧಿಸಿದಂತೆ ರಿಟ್‌ ಪಿಟಿಷನ್‌ ನಂ.2201/2012ರಲ್ಲಿ ಜೀವಂತವಿರುವ ರಾಜಕೀಯ ನಾಯಕರ ನಾಮಕರಣ ಮಾಡುವಂತಿಲ್ಲ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಕ್ರಮಜಿತ್‌ ಸೇನ್‌ ಸ್ಪಷ್ಟ ಆದೇಶ ನೀಡಿದ್ದು, ಅದರಂತೆ ತೆರವುಗೊಳಿಸಲಾಗಿತ್ತು. ಆದರೆ, ದಾವಣಗೆರೆ ನಗರದಲ್ಲಿ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ನಗರದಲ್ಲಿ ಖಾಸಗಿ ಬಸ್‌ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಹಳೇ ಬಸ್‌ ನಿಲ್ದಾಣ, ಕುಂದುವಾಡ ಕೆರೆಗೆ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಸಾಗರ, ಜಿಲ್ಲಾ ಪಂಚಾಯತ್‌ ಸಭಾಂಗಣಕ್ಕೆ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಭಾಂಗಣ ಸೇರಿದಂತೆ ವಿವಿಧ ರಸ್ತೆ, ಬಡಾವಣೆ, ಇಲಾಖೆ ಸಭಾಂಗಣಕ್ಕೆ ಜೀವಂತವಿರುವ ವಿವಿಧ ರಾಜಕಾರಣಿಗಳ ಹೆಸರಿಡಲಾಗಿದ್ದು, ಅಂತಹ ಬೋರ್ಡ್‌ಗಳ ತೆರವಿಗೆ ನವೆಂಬರ್‌ 23, 2018ರಂದು ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ. ಈ ಕೂಡಲೇ 15 ದಿನದೊಳಗಾಗಿ ಕಾನೂನು ಕ್ರಮ ಕೈಗೊಂಡು ಬೋರ್ಡ್‌ಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳನ್ನು ಒಳಗೊಂಡಂತೆ ಸಂಬಂಧಪಟ್ಟವರ ಮೇಲೆ ಹೈಕೋರ್ಟ್‌ನಲ್ಲಿ ಪಿಟಿಷನ್‌ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಎಚ್‌. ದಿವಾಕರ್‌, ಶ್ರೀನಿವಾಸ್‌, ಡಿ.ಪಿ. ಬಸವರಾಜ್‌, ಲಿಂಬಾನಾಯ್ಕ, ಜಿ.ಸಿ.ವಸುಂಧರಾ, ಮಂಜುಳಾ, ಶಂಕರ್‌ರಾವ್‌, ಪಿ.ವಿ. ಶಿವಕುಮಾರ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next