Advertisement

ತಾಪಂ ಸಭೆಯಲ್ಲಿ ಗದ್ದಲ

02:33 PM Sep 10, 2019 | Suhan S |

ಹಿರಿಯೂರು: ಕಳೆದ ಒಂದೂವರೆ ವರ್ಷದಿಂದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡ ತ್ತೈಮಾಸಿಕ ಕೆಡಿಪಿ ಸಭೆ ನಡೆಸದೆ ಒನ್‌ಮ್ಯಾನ್‌ ಶೋ ಮಾಡುತ್ತಿದ್ದಾರೆ. ಇದು ತಾಲೂಕು ಮಟ್ಟದ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆ ವಿಫಲಗೊಳ್ಳಲು ಕಾರಣ ಎಂದು ತಾಲೂಕು ಪಂಚಾಯತ್‌ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಆರೋಪಿಸಿದರು.

Advertisement

ನಗರದ ಸಾಮರ್ಥ್ಯಸೌಧದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯ ಆರಂಭದಲ್ಲೇ ಶಾಸಕಿ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ರಾಮ್‌ಕುಮಾರ್‌ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳ ಸುರಿಮಳೆಗೈದರು. ಬಿಜೆಪಿ ಸದಸ್ಯರು ಶಾಸಕರನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಸಭೆ ಗೊಂದಲದ ಗೂಡಾಯಿತು. ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಜೆಡಿಎಸ್‌-ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಸದಸ್ಯರ ಮಾತಿನ ಚಕಮಕಿ, ಗದ್ದಲದಲ್ಲಿ ಅಧಿಕಾರಿಗಳು ನೀಡುತ್ತಿದ್ದ ವಿವರಣೆಗಳು ಅರಣ್ಯ ರೋದನವಾದವು.

ಸದಸ್ಯ ಓಂಕಾರಪ್ಪ ಕೊಳವೆಬಾವಿ ವಿಚಾರದ ಬಗ್ಗೆ ಮಾತನಾಡಿ, 2018-19ನೇ ಸಾಲಿನಲ್ಲಿ ಎಷ್ಟು ಕೊಳವೆಬಾವಿ ಕೊರೆಸಲಾಗಿದೆ ಎಂಬ ಮಾಹಿತಿ ನೀಡಿ ಎಂದು ಎಇಇ ಮಂಜುನಾಥ್‌ಗೆ ತಾಕೀತು ಮಾಡಿದರು. ಈ ಪ್ರಶ್ನೆಗೆ ತಡವರಿಸಿದ ಎಇಇ, 700ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿದ್ದೇವೆ. ಶೇ. 70-80 ರಷ್ಟು ವಿಫಲವಾಗಿವೆ ಎಂದರು.

ಇದರಿಂದ ಮತ್ತಷ್ಟು ಕೆರಳಿದ ಸದಸ್ಯ ಮುಕುಂದಪ್ಪ, ಕೊಳವೆಬಾವಿ ಕೊರೆಸುವ ಮುನ್ನ ಯಾವ ಮಾಹಿತಿ ವಿನಿಮಯ ಮಾಡಿಕೊಂಡಿದ್ದೀರೆಂಬುದನ್ನು ಮೊದಲು ಸಭೆಗೆ ತಿಳಿಸಬೇಕೆಂದು ಆಗ್ರಹಿಸಿದರು. ಗ್ರಾಮೀಣ ನೀರು ಸರಬರಾಜು ಇಲಾಖೆ ಕ್ರಿಯಾ ಯೋಜನೆ ಅನುಮೋದಿಸುವುದು ನಾವು. ಜಿಪಂ ಮಂಜೂರಾತಿ ನೀಡುತ್ತೆ, ಬಿಲ್ಗಾಗಿ ಸ್ಥಳ ಪರಿಶೀಲನೆ, ವರದಿ ಸಲ್ಲಿಕೆ ಮೊದಲಾದ ಪ್ರಕ್ರಿಯೆಗಳನ್ನು ಗ್ರಾಪಂ ಅಧಿಕಾರಿಗಳು ನಡೆಸಬೇಕು. ಆದರೆ ನೀವು ಶಾಸಕರು, ಅವರ ಹಿಂಬಾಲಕರ ಮರ್ಜಿಗೆ ಬಿದ್ದು ಕೆಲಸ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಇದ್ದೂ, ಇಲ್ಲದಂತಾಗಿದೆ. ಆಡಳಿತ ಸಂಪೂರ್ಣ ಕುಸಿದಿದೆ. ಮಳೆಗಾಲದಲ್ಲೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉದ್ಭವಿಸಿದೆ ಎಂಬುದಾಗಿ ಅವರು ದೂರಿದರು.

ಬಿಜೆಪಿ ಸದಸ್ಯರಾದ ಯಶವಂತರಾಜು ಮತ್ತು ಜಯರಾಮಯ್ಯ, ಇಂತಹ ಸಂಪ್ರದಾಯ ಆರಂಭಿಸಿದ್ದೇ ನೀವು. ಅದನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಅಂದು ಸರಿ ಕಂಡದ್ದು, ಇಂದು ತಪ್ಪಾಗಿ ಕಾಣುತ್ತಿದೆಯೇ ಎಂದು ಪ್ರಶ್ನಿಸಿದರು. ಇದರಿಂದ ವಾಕ್ಸಮರ ತಾರಕಕ್ಕೇರಿತು.

Advertisement

ಬರೀ ಗೊಂದಲ ಗದ್ದಲದಲ್ಲೇ ಮುಕ್ತಾಯಗೊಂಡ ಸಭೆಯಲ್ಲಿ ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿಟ್ಲಾಲಿ ಕರಿಯಣ್ಣ, ತಾಪಂ ಇಒ ರಾಮ್‌ಕುಮಾರ್‌, ತಹಶೀಲ್ದಾರ್‌ ಕಾಂತರಾಜ್‌, ವ್ಯವಸ್ಥಾಪಕ ಅಶ್ವತ್ಥಾಮ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next