Advertisement

ಟ್ವಿನ್‌ ಟವರ್‌ ಇದ್ದ ಸ್ಥಳದಲ್ಲಿ ಈಗ ಧೂಳಿನ ಹೊದಿಕೆ

10:17 PM Aug 29, 2022 | Team Udayavani |

ನೋಯ್ಡಾ:ಉತ್ತರಪ್ರದೇಶದ ನೋಯ್ಡಾದಲ್ಲಿ ಸೂಪರ್‌ಟೆಕ್‌ನ ಅವಳಿ ಕಟ್ಟಡಗಳು ತಲೆಎತ್ತಿ ನಿಂತಿದ್ದ ಪ್ರದೇಶದಲ್ಲಿ ಈಗ ತ್ಯಾಜ್ಯದ ದೊಡ್ಡ ಪರ್ವತವೇ ಸೃಷ್ಟಿಯಾಗಿದೆ. ಈ ತ್ಯಾಜ್ಯದ ವಿಲೇವಾರಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

ಟ್ವಿನ್‌ ಟವರ್‌ಗಳು ನೆಲಸಮಗೊಂಡ ಪ್ರದೇಶದ ಸುತ್ತಮುತ್ತಲೂ ಧೂಳಿನ ದಟ್ಟ ಪದರ ಸೃಷ್ಟಿಯಾಗಿದೆ. ಮರಗಿಡಗಳು, ಕಟ್ಟಡಗಳು, ರಸ್ತೆಗಳು ಧೂಳಿನ ಹೊದಿಕೆಯಲ್ಲಿ ಕಣ್ಮರೆಯಾಗಿದ್ದು, ಸೋಮವಾರ ಮುಂಜಾನೆಯಿಂದಲೇ ಸ್ವಚ್ಛತಾ ಕೆಲಸವನ್ನು ಸಮರೋಪಾದಿಯಲ್ಲಿ ಆರಂಭಿಸಲಾಗಿದೆ.

ಅವಳಿ ಕಟ್ಟಡದ ಸುತ್ತಲಿದ್ದ ಮರಗಿಡಗಳು ಹಾಗೂ ರಸ್ತೆಗಳಿಗೆ ನೀರನ್ನು ಸಿಂಪಡಣೆ ಮಾಡಲಾಗುತ್ತಿದೆ ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಾಹೇಶ್ವರಿ ತಿಳಿಸಿದ್ದಾರೆ.ಇದಕ್ಕಾಗಿ ಭಾರೀ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಮೀಪದ ಎಮೆರಾಲ್ಟ್ ಕೋರ್ಟ್‌ ಮತ್ತು ಎಟಿಎಸ್‌ ವಿಲೇಸ್‌ ಸೊಸೈಟಿಯ ನಿವಾಸಿಗಳಲ್ಲಿ ಕೆಲವು ಭಾನುವಾರ ರಾತ್ರಿಯೇ ತಮ್ಮ ತಮ್ಮ ಮನೆಗಳಿಗೆ ಮರಳಿದ್ದರೆ, ಇನ್ನೂ ಕೆಲವರು ಸೋಮವಾರ ಮುಂಜಾನೆ ವಾಪಸಾಗಿದ್ದಾರೆ. ಕಟ್ಟಡ ನೆಲಸಮ ಹಿನ್ನೆಲೆಯಲ್ಲಿ ಸುಮಾರು 5 ಸಾವಿರ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಈ ಪೈಕಿ ಶೇ.75ರಷ್ಟು ಮಂದಿ ತಮ್ಮ ಮನೆಗಳಿಗೆ ಮರಳಿದ್ದಾರೆ.

ಭಾರತ ಸೇರ್ಪಡೆ:
ಸೂಪರ್‌ಟೆಕ್‌ ಅವಳಿ ಕಟ್ಟಡಗಳನ್ನು ಯಶಸ್ವಿಯಾಗಿ ಕೆಡವುವ ಮೂಲಕ ಭಾರತವು 100 ಮೀಟರ್‌ಗಿಂತ ಎತ್ತರದ ಕಟ್ಟಡಗಳನ್ನು ನೆಲಸಮಗೊಳಿಸಿದ ದೇಶಗಳ ಕ್ಲಬ್‌ಗೆ ಸೇರ್ಪಡೆಯಾಗಿದೆ. ಇದರ ಹೆಗ್ಗಳಿಕೆಯು ಎಡಿಫೈಸ್‌ ಎಂಜಿನಿಯರಿಂಗ್‌ನ ಇಡೀ ತಂಡಕ್ಕೆ ಸಲ್ಲುತ್ತದೆ ಎಂದು ದಕ್ಷಿಣ ಆಫ್ರಿಕಾದ ಸಂಸ್ಥೆ ಜೆಟ್‌ ಡೆಮಾಲಿಷನ್ಸ್‌ನ ಜೋ ಬ್ರಿಂಕ್‌ಮನ್‌ ಹೇಳಿದ್ದಾರೆ.

Advertisement

ಮುಂಬೈ ಕಟ್ಟಡಗಳ ಆಡಿಟ್‌ ನಡೆಯಲಿ
ನೋಯ್ಡಾ ಕಟ್ಟಡ ನೆಲಸಮ ಬೆನ್ನಲ್ಲೇ ಮುಂಬೈನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಗಗನಚುಂಬಿ ಕಟ್ಟಡಗಳ ಆಡಿಟ್‌ ನಡೆಸಬೇಕೆಂದು ಬಿಜೆಪಿ ನಾಯಕ ಕಿರಿಟ್‌ ಸೋಮಯ್ಯ ಆಗ್ರಹಿಸಿದ್ದಾರೆ. ಫ್ಲ್ಯಾಟ್‌ ಮಾಲೀಕರ ಹಿತಾಸಕ್ತಿಯ ರಕ್ಷಣೆಗಾಗಿ ಇಂಥ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಏಕನಾಥ ಶಿಂಧೆ ಅವರಿಗೆ ಬರೆದ ಪತ್ರದಲ್ಲಿ ಸೋಮಯ್ಯ ಮನವಿ ಮಾಡಿದ್ದಾರೆ. ಈ ನಡುವೆ, ಸೋಮವಾರ ಮಾತನಾಡಿರುವ ಉತ್ತರಪ್ರದೇಶ ಮಾಜಿ ಸಿಎಂ, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌, “ನೋಯ್ಡಾದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ ಸೂಪರ್‌ಟೆಕ್‌ನ ಬಿಲ್ಡರ್‌ಗಳ ವಿರುದ್ಧ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲವೇಕೆ’ ಎಂದು ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next