ನೋಯ್ಡಾ: ಹಾಲಿಡೇ ಪ್ಯಾಕೇಜ್ ಗಳನ್ನು ನೀಡುವ ನೆಪದಲ್ಲಿ ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದ ತಂಡವನ್ನು ನೋಯ್ಡಾ ಪೊಲೀಸರು ಶನಿವಾರ (ನ.30) ಬಂಧಿಸಿದ್ದಾರೆ. ಈ ಬೃಹತ್ ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಲಕ್ಷ ರೂಪಾಯಿಗಳನ್ನು ವಂಚಿಸಿದ 17 ಮಹಿಳೆಯರು ಸೇರಿದಂತೆ 32 ವ್ಯಕ್ತಿಗಳನ್ನು ಬಂಧಿಸಲಾಗಿದೆ.
‘ಕಂಟ್ರಿ ಹಾಲಿಡೇ ಟ್ರಾವೆಲ್ ಇಂಡಿಯಾ ಲಿಮಿಟೆಡ್’ ನ ಪ್ರತಿನಿಧಿಗಳಂತೆ ತಮ್ಮನ್ನು ತೋರಿಸಿಕೊಂಡಿದ್ದ ಗ್ಯಾಂಗ್, ನೋಯ್ಡಾದ ಸೆಕ್ಟರ್ 63 ರಲ್ಲಿ ಕಾಲ್ ಸೆಂಟರನ್ನು ಸ್ಥಾಪಿಸಿ, ಹಾಲಿಡೇ ಬ್ಯುಸಿನೆಸ್ ಮಾಡುತ್ತಿದ್ದರು. ಭರವಸೆ ನೀಡಿದ ಪ್ಯಾಕೇಜ್ ಸೇವೆ ನೀಡುವ ಬದಲು ಹಣವನ್ನು ಪಡೆದು ಕಣ್ಮರೆಯಾಗುತ್ತಿದ್ದರು.
ಕಾರ್ಯಾಚರಣೆ ವೇಳೆ ಪೊಲೀಸರು ನಾಲ್ಕು ಲ್ಯಾಪ್‌ಟಾಪ್‌ಗಳು, ಮೂರು ಮಾನಿಟರ್‌ಗಳು, ಮೂರು ಕೀಬೋರ್ಡ್‌ಗಳು, ಮೂರು ಸಿಪಿಯುಗಳು, ನಾಲ್ಕು ಚಾರ್ಜರ್‌ಗಳು, ಎರಡು ರೂಟರ್‌ಗಳು, ಮೂರು ಸ್ವಿಚ್‌ಗಳು, ಮೂರು ಐಪ್ಯಾಡ್‌ಗಳು, ಒಂದು ಮೊಬೈಲ್ ಫೋನ್ ಮತ್ತು ಹಲವಾರು ದಾಖಲೆಗಳು ಸೇರಿದಂತೆ ಉಪಕರಣಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ.
ಸೆಂಟ್ರಲ್ ನೋಯ್ಡಾ ಡಿಸಿಪಿ ಶಕ್ತಿ ಮೋಹನ್ ಅವಸ್ತಿ ಪ್ರಕಾರ, ಎರಡು ವರ್ಷಗಳಲ್ಲಿ ನೂರಾರು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮೋಸ ಮಾಡಲಾಗಿದೆ. ರೂ. 2.5 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಒಂಬತ್ತು ದಿನಗಳ ಐಷಾರಾಮಿ ಪ್ರವಾಸಗಳಂತಹ ಆಕರ್ಷಕ ರಜೆಯ ಪ್ಯಾಕೇಜ್ ಗಳೊಂದಿಗೆ ಗ್ಯಾಂಗ್ ಗ್ರಾಹಕರನ್ನು ಆಕರ್ಷಿಸಿತು. ಆದರೆ, ಹಣ ಸ್ವೀಕರಿಸಿದ ನಂತರ, ಗ್ಯಾಂಗ್ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಅಥವಾ ಸಂಪೂರ್ಣವಾಗಿ ಕಣ್ಮರೆಯಾಗುತ್ತಿತ್ತು.
ಅಮ್ರಪಾಲಿ ಈಡನ್ ಪಾರ್ಕ್ ಅಪಾರ್ಟ್‌ಮೆಂಟ್‌ನ ನಿವಾಸಿ ಅನಿತಾ ಅವರು ವಂಚನೆಯ ಕಂಪನಿಯ ವಿರುದ್ಧ ದೂರು ನೀಡಿದ ನಂತರ ಈ ದಂಧೆ ಬೆಳಕಿಗೆ ಬಂದಿದೆ. ಐಟಿಸಿ ಹೋಟೆಲ್‌ನಲ್ಲಿ ಬುಕ್ ಮಾಡಲಾಗಿದ್ದ ಒಂಬತ್ತು ದಿನಗಳ ಪ್ಯಾಕೇಜ್‌ಗೆ ₹ 84,000 ಪಾವತಿಸಿದ್ದಾಗಿ ಅನಿತಾ ಹೇಳಿಕೊಂಡಿದ್ದಾರೆ. ಬುಕಿಂಗ್ ಕಾರ್ಯರೂಪಕ್ಕೆ ಬರಲು ವಿಫಲವಾದಾಗ ಮತ್ತು ಮರುಪಾವತಿಯೂ ನೀಡದಿದ್ದಾಗ, ಅನಿತಾ ಪೊಲೀಸರಿಗೆ ದೂರು ನೀಡಿದರು. ಆಕೆಯ ಪ್ರಕರಣದ ಬಳಿಕ ನೋಯ್ಡಾ ಮತ್ತು ಪುಣೆಯಿಂದ ಹೆಚ್ಚುವರಿ ದೂರುಗಳು ಬಂದವು.
ತನಿಖೆಯ ಸಮಯದಲ್ಲಿ, ಸಂಸ್ಥೆಯ ವಿರುದ್ಧ ಪೊಲೀಸರಿಗೆ ಐದು ಆನ್‌ಲೈನ್ ಮತ್ತು ಒಂದು ಲಿಖಿತ ದೂರನ್ನು ನೀಡಲಾಗಿದೆ. ₹ 2.5 ರಿಂದ ₹ 2.8 ಲಕ್ಷದ ದುಬಾರಿ ಬೆಲೆಗೆ ಮಾರಾಟವಾದ ಪ್ಯಾಕೇಜ್‌ಗಳ ಬಗ್ಗೆ ಈ ದೂರುಗಳು ಬಂದಿವೆ.
ಕಾಲ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದ್ದು, 17 ಮಹಿಳೆಯರು ಸೇರಿದಂತೆ 32 ಮಂದಿಯನ್ನು ಬಂಧಿಸಲಾಗಿದೆ.