ಹೈದರಾಬಾದ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಬಳಿಕ ಈಗ ಕಾಂಗ್ರೆಸ್‌ನ ಮತ್ತೂಬ್ಬ ನಾಯಕ 2019ರ ಸರ್ಜಿಕಲ್ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. “ಪುಲ್ವಾಮಾದಲ್ಲಿ 2019ರಲ್ಲಿ 40 ಯೋಧರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ಥಾನದ ಬಾಲಾಕೋಟ್‌ನಲ್ಲಿ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು ಎನ್ನುವುದರ ಬಗ್ಗೆಯೇ ನನಗೆ ಅನುಮಾನವಿದೆ’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿ, “ಅಂದು ಸರ್ಜಿಕಲ್ ದಾಳಿ ನಿಜವಾಗಿಯೂ ನಡೆದಿತ್ತೇ, ಇಲ್ಲವೇ ಎನ್ನುವುದು ಯಾರಿಗೂ ಗೊತ್ತಿಲ್ಲ.
ಕೇಂದ್ರ ಗುಪ್ತಚರ ದಳ ಮುನ್ನೆಚ್ಚರಿಕೆ ವಹಿಸಿದ್ದರೆ ಪುಲ್ವಾಮಾ ದಾಳಿಯನ್ನು ತಡೆಯಲು ಸಾಧ್ಯವಾಗುತ್ತಿತ್ತು. ಇದೊಂದು ದೊಡ್ಡ ವೈಫಲ್ಯ’ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ದೇಶದ ಪರ ಚಿಂತನೆ ನಡೆಸುತ್ತಿಲ್ಲ. ಅವರು ಎಲ್ಲವನ್ನೂ ಚುನಾವಣೆಯಲ್ಲಿ ಜಯ ಸಾಧಿಸುವ ದೃಷ್ಟಿಕೋನದಿಂದಲೇ ನೋಡುತ್ತಾರೆ. ಪುಲ್ವಾಮಾ ದಾಳಿ, ವಾಯುಪಡೆ ನಡೆಸಿದ ಪ್ರತಿದಾಳಿಯಲ್ಲೂ ರಾಜಕೀಯ ಲಾಭ ಪಡೆಯಲು ನೋಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇವಂತ್ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ತೆಲಂಗಾಣ ಬಿಜೆಪಿ ನಾಯಕ ಬಂಡಿ ಸಂಜಯ ಕುಮಾರ್, “ಸಿಎಂ ರೇವಂತ್ ರೆಡ್ಡಿ ಪಾಕ್‌ಗೆ ಕ್ಲೀನ್‌ಚಿಟ್ ನೀಡುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿಯೇ ಹೈದರಾಬಾದ್‌ನ ಹಲವು ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆದಿದೆ’ ಎಂದು ಟ್ವೀಟ್ ಮಾಡಿದ್ದಾರೆ.