Advertisement

ಜಿಲ್ಲಾ ನ್ಯಾಯಾಲಯಗಳಲ್ಲಿ ಸ್ವತ್ಛತೆಗಿಲ್ಲ ಜನ

09:33 AM Oct 14, 2018 | Team Udayavani |

ಮಂಗಳೂರು: ನ್ಯಾಯಾಲಯಗಳಲ್ಲಿ ಸ್ವತ್ಛತಾ ಕೆಲಸಗಳನ್ನು ನಿರ್ವಹಿಸಲು ಹೊರಗುತ್ತಿಗೆ ನೌಕರರ ಬದಲು ಡಿ ಗ್ರೂಪ್‌ ನೌಕರರನ್ನು ಬಳಸಿಕೊಳ್ಳಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ.
ಹೀಗಾಗಿ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ 4 ದಿನಗಳಿಂದ ಸ್ವತ್ಛತೆ ಕಾರ್ಯ ಸ್ಥಗಿತಗೊಂಡಿದೆ. ಡಿ ಗ್ರೂಪ್‌ ನೌಕರರು ಈ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಿಲ್ಲದಿರುವುದು ಹಾಗೂ ಅವರಿಂದ ಒತ್ತಾಯ ಪೂರ್ವಕವಾಗಿ ಮಾಡಿಸಲು ಮೇಲಧಿಕಾರಿಗಳು ತಯಾರಿಲ್ಲ.

Advertisement

ಸರಕಾರದ ಉತ್ತರ
ಜಿಲ್ಲಾ ನ್ಯಾಯಾಲಯಗಳಲ್ಲಿನ ಹೊರಗುತ್ತಿಗೆಯ ಸ್ವತ್ಛತಾ ಕಾರ್ಮಿಕರಿಗೆ ವೇತನ ಪಾವತಿಸಲು 1.30 ಕೋಟಿ ರೂ. ಹೆಚ್ಚುವರಿಯಾಗಿ ನೀಡಬೇಕು ಎಂದು ಹೈಕೋರ್ಟಿನ ರಿಜಿಸ್ಟ್ರಾರ್‌ ಜನರಲ್‌ ರಾಜ್ಯ ಸರಕಾರಕ್ಕೆ 2018 ಸೆ. 10ರಂದು ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ 2017 ಜು. 7ರ ಆದೇಶದಂತೆ ಹೊರ ಗುತ್ತಿಗೆ ನೌಕರರನ್ನು ಕೈಬಿಟ್ಟು, ಆ ಕೆಲಸಕ್ಕೆ 1981ರ ನ. 17ರ ಆದೇಶದಂತೆ ಡಿ ಗ್ರೂಪ್‌ ನೌಕರರನ್ನು ಬಳಸಿಕೊಳ್ಳುವಂತೆ ಸರಕಾರ ಸೂಚಿಸಿತು.
ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ಬೀದರ್‌, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ದ. ಕ. (ಮಂಗಳೂರು), ಧಾರವಾಡ, ಗದಗ, ಕಲಬುರಗಿ, ಹಾಸನ, ಹಾವೇರಿ, ಕೊಡಗು (ಮಡಿಕೇರಿ), ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಮನಗರ, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ (ಕಾರವಾರ), ಯಾದಗಿರಿ ಜಿಲ್ಲಾ ನ್ಯಾಯಾಲಯಗಳ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಿಗೆ ಆದೇಶವನ್ನು ಕಳುಹಿಸಲಾಗಿದೆ.
ಮೂರೂವರೆ ವರ್ಷಗಳಿಂದ ಹೊರ ಗುತ್ತಿಗೆ ಪದ್ಧತಿ ಜಾರಿಯಲ್ಲಿದ್ದು, ಆ ಕಾರ್ಮಿಕರಿಗೆ 4 ತಿಂಗಳ ವೇತನ ನೀಡಬೇಕಿದೆ. ಮಂಗಳೂರು ನ್ಯಾಯಾಲಯದಲ್ಲಿ 14 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ 1.30 ಲಕ್ಷ ರೂ. ವೇತನವನ್ನು ಸರಕಾರ ನೀಡುತ್ತಿತ್ತು.

ಡಿ ಗ್ರೂಪ್‌ ನೌಕರರೇ ಸಾಕಷ್ಟಿಲ್ಲ; ಈಗಿರುವ ನೌಕರರಿಗೆ ಹೊರೆ ಹೆಚ್ಚಿದೆ. ಹಾಗಿರುವಾಗ ಅವರನ್ನು ಸ್ವತ್ಛತಾ ಕಾರ್ಯಗಳಿಗೆ ಬಳಸಿಕೊಳ್ಳುವುದು ಹೇಗೆ? ಈ ನೌಕರರಲ್ಲಿ ಹಲವರು ಪದವೀಧರರು, ಅವರು ಈ ಕೆಲಸಕ್ಕೆ ತಯಾರಿಲ್ಲ; ಮಾಡಿಸಲು ನಮ್ಮ ಮನಸ್ಸು ಒಪ್ಪುತ್ತಿಲ್ಲ ಎನ್ನುತ್ತಾರೆ ಮಂಗಳೂರಿನ ನ್ಯಾಯಾಲಯದ ಹಿರಿಯ ಅಧಿಕಾರಿಯೊಬ್ಬರು.

ಶುಕ್ರವಾರ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಆದರೆ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಶನಿವಾರ ಈ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಹಾಗೂ ವಕೀಲರ ಸಂಘದ ಸದಸ್ಯ ಎಸ್‌.ಎಲ್‌. ಭೋಜೇಗೌಡ ಅವರಿಗೆ ಸಂಘದ ನಿಯೋಗ ಮನವಿ ಸಲ್ಲಿಸಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ಆರ್‌. ಬಲ್ಲಾಳ್‌ ತಿಳಿಸಿದ್ದಾರೆ.

ದ. ಕ. ಜಿಲ್ಲೆ: 198 ಡಿ ಗ್ರೂಪ್‌ ಹುದ್ದೆ; 126 ಖಾಲಿ 
ಜಿಲ್ಲೆಯಲ್ಲಿ 37 ನ್ಯಾಯಾಲಯಗಳಿದ್ದು, 198 ಡಿ ಗ್ರೂಪ್‌ ಹುದ್ದೆಗಳು ಮಂಜೂರಾಗಿವೆ. 126 ಹುದ್ದೆಗಳು ಖಾಲಿಯಿವೆ. ಉಳಿದಂತೆ 72 (ಶೇ. 36)ರಲ್ಲಿ 46 ಜವಾನರು ಹಾಗೂ  26 ಮಂದಿ ಅಟೆಂಡರ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನಲ್ಲಿ 22 ನ್ಯಾಯಾಲಯಗಳಿದ್ದು, ಇಲ್ಲಿ 100 ಹುದ್ದೆಗಳ ಪೈಕಿ 35 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next