Advertisement

ಕುಕ್ಕೆಯಲ್ಲಿ ಭಕ್ತ ಸಾಗರ: ನೀರಿಗಿಲ್ಲ ಬರ

10:14 PM May 21, 2019 | mahesh |

ಸುಬ್ರಹ್ಮಣ್ಯ: ನಾಡಿನೆಲ್ಲೆಡೆ ನೀರಿಗೆ ತತ್ವಾರ ಬಂದು ಬರಗಾಲದ ಛಾಯೆ ಕಾಣಿಸಿಕೊಂಡಿದೆ. ಪ್ರಮುಖ ದೇಗುಲಗಳಲ್ಲಿ ನೀರಿನ ಅಭಾವ ತಲೆದೋರಿದೆ. ಆದರೆ ಪುಣ್ಯ ಕ್ಷೇತ್ರ ಕುಕ್ಕೆಯಲ್ಲಿ ಸದ್ಯ ನೀರಿಗೆ ಬರವಿಲ್ಲ. ಕ್ಷೇತ್ರಕ್ಕೆ ಬರುವ ಭಕ್ತರು ನೀರು ಸಿಗುವುದಿಲ್ಲವೋ ಎನ್ನುವ ಆತಂಕ ಪಡಬೇಕಿಲ್ಲ. ಬಿರು ಬಿಸಿಲಿದ್ದರೂ ಕ್ಷೇತ್ರದ ಪ್ರಮುಖ ನದಿ ಕುಮಾರಧಾರಾ ಜಲಸಮೃದ್ಧಿಯಿಂದ ಕೂಡಿದೆ.

Advertisement

ಕರಾವಳಿ ಸಹಿತ ರಾಜ್ಯದ ಪ್ರಮುಖ ಭಾಗಗಳಲ್ಲಿ ನೀರಿನ ಅಭಾವ ತಲೆದೋರಿದ್ದು, ಅದರ ಬಿಸಿ ದೇವಸ್ಥಾನಗಳಿಗೂ ತಟ್ಟಿದೆ. ನೀರಿನ ಕೊರತೆ ಇರುವ ಕಾರಣ ದೇವಸ್ಥಾನಗಳಿಗೆ ಭೇಟಿ ನೀಡಲು ಭಕ್ತರು ಹಿಂದೇಟು ಹಾಕುವ ಸ್ಥಿತಿ ಬಂದೊದಗಿದೆ. ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕುಕ್ಕೆ ಕ್ಷೇತ್ರ ಸಂದರ್ಶಿಸುವ ಯಾತ್ರಿಕರ ಸಂಖ್ಯೆಯಲ್ಲೂ ಇಳಿಕೆಯಾಗುವ ಆತಂಕ ವಿತ್ತು. ಆದರೆ ಹಾಗಾಗಿಲ್ಲ. ಮಂಗಳವಾರ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯ ಭಕ್ತರು ಕಂಡುಬಂದರು. ಭಕ್ತರಿಗೆ ಪುಣ್ಯ ಸ್ನಾನ ಮಾಡಲು, ಕುಡಿಯಲು, ಇತರ ಅನುಕೂಲಗಳಿಗೆ ನೀರಿನ ಕೊರತೆ ಎದುರಾಗಿಲ್ಲ. ನದಿ ಪಾತ್ರದ ರೈತರು ತಾವು ಬೆಳೆಯುವ ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಗೇರು ಮತ್ತು ತರಕಾರಿ ಕೃಷಿಗೆ ಕುಮಾರಧಾರೆಯನ್ನೇ ಅವಲಂಬಿಸಿದ್ದಾರೆ. ಇಲ್ಲಿ ನೀರಿನ ಹರಿವು ಬಹುತೇಕ ಬೇಸಗೆ ಅವಧಿ ಮುಗಿಯುವವರೆಗೂ ಇರುತ್ತದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀರಿನ ಪೂರೈಕೆಗೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಕುಮಾರಧಾರಾ ಸೇತುವೆ ಬಳಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇಲ್ಲಿ ಅಧಿಕ ನೀರಿನ ಶೇಖರಣೆಯಾಗಿ ಪರಿಸರದಲ್ಲಿ ಅಂತರ್ಜಲ ವೃದ್ಧಿಸಿದೆ. ಅಗ್ರಹಾರದಲ್ಲಿ ಗ್ರಾ.ಪಂ. ಜಾಕ್‌ವೆಲ್‌ ನಿರ್ಮಿಸಿದೆ. ದೊಡ್ಡ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ ಕ್ಷೇತ್ರಕ್ಕೆ ಉತ್ಕೃಷ್ಟ ನೀರು ಸರಬರಾಜು ಮಾಡಲಾಗುತ್ತಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀರು ಸರಬರಾಜು ಮಂಡಳಿ ಮೂಲಕ ಕುಕ್ಕೆ ಕ್ಷೇತ್ರಕ್ಕೆ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ.

ಮರಳುಗಾರಿಕೆಯಿಂದ ತೊಂದರೆ
ಕುಮಾರಧಾರಾ ನದಿಯ ಮೇಲ್ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ಈಗ ನಡೆಯುತ್ತಿದೆ. ಮಳೆಗಾಲದಲ್ಲಿ ಉಂಟಾಗಿರುವ ಭೂಕುಸಿತದ ಲಾಭ ಪಡೆದು ಅಲ್ಲಿ ಕೆಲವರು ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮರಳು ತೆಗೆಯುವುದರಿಂದ ಕೆಳಭಾಗಕ್ಕೆ ಕೆಂಪು ಮಿಶ್ರಿತ ನೀರು ಹರಿದು ನದಿ ನೀರು ಕಲುಷಿತಗೊಳ್ಳುತ್ತಿದೆ. ಸ್ಥಳೀಯರಿಗೆ ಸಹಿತ ಕುಮಾರ ಧಾರಾ ಸ್ನಾನ ಘಟ್ಟದಲ್ಲಿ ಪುಣ್ಯ ಸ್ನಾನ ನಡೆಸುವ ಭಕ್ತರಿಗೂ ತೊಂದರೆ ಆಗುತ್ತಿದೆ.

ಸುಭಿಕ್ಷೆಗಾಗಿ ಪ್ರಾರ್ಥನೆ
ಸುಬ್ರಹ್ಮಣ್ಯ ಪರಿಸರದಲ್ಲಿ ನಾಲ್ಕೈದು ಬಾರಿ ಮಳೆ ಬಂದ ಕಾರಣ ನೀರು ಹರಿಯುತ್ತಿದೆ. ಇತರ ದೇಗುಲಗಳಲ್ಲಿ ನೀರಿನ ಸಮಸ್ಯೆ ಎದುರಾದರೆ, ನಮ್ಮಲ್ಲಿ ಸುಬ್ರಹ್ಮಣ್ಯ ದೇವರ ದಯೆಯಿಂದ ಸಮಸ್ಯೆ ಕಂಡುಬಂದಿಲ್ಲ. ಮಳೆಗಾಗಿ ಸಮಿತಿ ಸದಸ್ಯರು ದೇಗುಲದ ಅರ್ಚಕರ ಜತೆ ಚರ್ಚಿಸಿ ದಿನ ನಿಗದಿಪಡಿಸಿ ನಾಡಿನ ಸುಭಿಕ್ಷೆಗಾಗಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು.
– ನಿತ್ಯಾನಂದ ಮುಂಡೋಡಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಕುಕ್ಕೆ ದೇಗುಲ

Advertisement

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next