Advertisement

ಚಿತ್ರೀಕರಣಕ್ಕೆ ತೊಂದರೆ ಇಲ್ಲ

11:37 PM Mar 13, 2020 | Lakshmi GovindaRaj |

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ಚಿತ್ರಮಂದಿರಗಳ ಪ್ರದರ್ಶನ ಬಂದ್‌ ಮಾಡುವಂತೆ ಸರ್ಕಾರ ನೀಡಿರುವ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲು ಕನ್ನಡ ಚಿತ್ರರಂಗ ನಿರ್ಧರಿಸಿದೆ. ಈಗಾಗಲೇ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ, ರಾಜ್ಯದ ಎಲ್ಲಾ ಪ್ರದರ್ಶಕರಿಗೂ ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಒಂದು ವಾರ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಆದೇಶ ಪಾಲಿಸಲು ತಿಳಿಸಿದೆ.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಈ ಕುರಿತಂತೆ ಶುಕ್ರವಾರ ಸಭೆ ನಡೆಸಿ, ಚಿತ್ರಮಂದಿರಗಳನ್ನು ಸ್ಥಗಿತಗೊಳಿಸಲು ಮನವಿ ಮಾಡಲಾಗಿದೆ. ಚಿತ್ರ ಪ್ರದರ್ಶನ ಇರುವುದಿಲ್ಲ. ಆದರೆ, ಚಿತ್ರೀಕರಣಕ್ಕೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮಂಡಳಿಯ ಉಪಾಧ್ಯಕ ಉಮೇಶ್‌ ಬಣಕಾರ್‌, “ಬಹಿರಂಗವಾಗಿ ಹೊರಾಂಗಣದಲ್ಲಿ ಜನ ಸೇರದಿರುವ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಯಾವುದೇ ನಿರ್ಬಂಧವಿಲ್ಲ.

ಸರ್ಕಾರ ಕೂಡ ಚಿತ್ರೀಕರಣ ಸ್ಥಗಿತಗೊಳಿಸುವ ಬಗ್ಗೆ ಹೇಳಿಲ್ಲ. ಹಾಗಾಗಿ, ಚಿತ್ರೀಕರಣಕ್ಕೆ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ತೊಂದರೆ ಇಲ್ಲ. ಸರ್ಕಾರದ ಆದೇಶದಿಂದ ಸದ್ಯಕ್ಕೆ ಒಂದು ವಾರ ಚಿತ್ರಮಂದಿರಗಳು ಬಂದ್‌ ಆಗಲಿವೆ. ಈ ಆದೇಶದಿಂದ ಚಿತ್ರರಂಗಕ್ಕೆ ಹಾಗೂ ಈ ವಾರ ಬಿಡುಗಡೆಯಾದ ಸಿನಿಮಾಗಳಿಗೆ ತೊಂದರೆ ಸಹಜ. ಆದರೂ, ಸರ್ಕಾರದ ಆದೇಶ ಪಾಲಿಸಬೇಕಿದೆ ಎಂದು ಹೇಳಿದ್ದಾರೆ.

ಸಿಜೆಗೆ ವಕೀಲರ ಪತ್ರ: “ಕೊರೊನಾ ವೈರಸ್‌’ ಭೀತಿ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟ್‌ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗೆ ವಕೀಲರು ಪತ್ರ ಬರೆದಿದ್ದಾರೆ. ಈ ಕುರಿತು ಪಿಎಸ್‌ಎ ಲಾ ಪಾಟ್ನರ್ಸ್‌ನ ವಕೀಲ ಪ್ರವೀಣ ಕುಮಾರ್‌ ಹಿರೇಮಠ ಅವರು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಅವರಿಗೆ ವಿವರವಾದ ಪತ್ರ ಬರೆದಿದ್ದಾರೆ.

ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ನಿಗದಿಪಡಿಸಬೇಕು. ಪ್ರಕರಣಗಳಲ್ಲಿ ಸಾಕ್ಷಿ ನುಡಿಯಲು ಕಡ್ಡಾಯವಾಗಿ ಸಾಕ್ಷಿದಾರರು ಖುದ್ದು ಹಾಜರಾಗಬೇಕಾಗುತ್ತದೆ. ಅದೇ ರೀತಿ, ಕಕ್ಷಿದಾರರು ಸಹ ಕೋರ್ಟ್‌ಗೆ ಹಾಜರಾಗಬೇಕಾಗುತ್ತದೆ. ಆದ್ದರಿಂದ ಸಾಕ್ಷಿದಾರರು ಮತ್ತು ಕಕ್ಷಿದಾರರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು. ಈ ಕುರಿತು ನ್ಯಾಯಾಲಯಗಳಲ್ಲಿ ಜಾಗೃತಿ ಸಭೆಗಳನ್ನು ಏರ್ಪಡಿಸಬೇಕು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next