Advertisement
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸಿದ್ಧಪಡಿಸಿದ ಮೆಟ್ರೋ ಮೊದಲ ಮತ್ತು ಎರಡನೇ ಹಂತಗಳ ನಕ್ಷೆಯಲ್ಲೇ ಈ “ಮಿಸ್ಡ್ ಲಿಂಕ್’ ಅನ್ನು ಕಾಣಬಹುದು. ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳ ಪೈಕಿ ಪೂರ್ವಕ್ಕೆ ಬೈಯಪ್ಪನಹಳ್ಳಿ ಮಾರ್ಗ ಹೊರತುಪಡಿಸಿದರೆ, ಉಳಿದೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಪಶ್ಚಿಮದ ಕಡೆಗೇ ಮುಖ ಮಾಡುತ್ತವೆ.
Related Articles
Advertisement
ರಿಂಗ್ ರಸ್ತೆಯಲ್ಲಿ ಬರಲಿ ಮೆಟ್ರೋ: ಇನ್ನು ಇಡೀ ಮೆಟ್ರೋ 1 ಮತ್ತು 2ನೇ ಹಂತಗಳಲ್ಲಿ ಇರುವುದು ಕೇವಲ ಎರಡು ಇಂಟರ್‌ಚೇಂಜ್‌ಗಳು. ಪ್ರಸ್ತುತ ಮೊದಲ ಹಂತದಲ್ಲಿ ಪ್ರಯಾಣಿಕರು ಒಂದು ಮೂಲೆಯಿಂದ ಮತ್ತೂಂದು ಮೂಲೆಗೆ ಮೆಟ್ರೋದಲ್ಲಿ ಹೋಗಬೇಕಾದರೆ, ಮೆಜೆಸ್ಟಿಕ್ ಬರುವುದು ಕಡ್ಡಾಯ! ಉದಾಹರಣೆಗೆ ಮೈಸೂರು ರಸ್ತೆಯಿಂದ ಬರುವವರು ಪೀಣ್ಯಕ್ಕೆ ಹೋಗಲು ಮೆಜೆಸ್ಟಿಕ್‌ಗೆ ಬರಬೇಕಾಗಿದೆ. ಆದರೆ, ಹೊಸಹಳ್ಳಿಯಿಂದ ರಾಜಾಜಿನಗರ ನಿಲ್ದಾಣದ ನಡುವೆ ಕೇವಲ 1.6 ಕಿ.ಮೀ. ಅಂತರ ಇದೆ. ಇದಕ್ಕೆ ಸಂಪರ್ಕ ಕಲ್ಪಿಸಿದ್ದರೆ, ನೇರವಾಗಿ ಪೀಣ್ಯಕ್ಕೆ ತೆರಳಬಹುದಿತ್ತು ಎನ್ನುತ್ತಾರೆ ನಗರ ಮೂಲಸೌಕರ್ಯಗಳ ತಜ್ಞ ಪ್ರೊ.ಎಂ.ಎನ್. ಶ್ರೀಹರಿ.
ವರ್ತುಲ ರಸ್ತೆಗೆ ಮೆಟ್ರೋ ಸಂಪರ್ಕ ಕಲ್ಪಿಸಿಲ್ಲ. ಸದ್ಯ ಸಿಲ್ಕ್ಬೋರ್ಡ್ ಜಂಕ್ಷನ್-ಕೆ.ಆರ್. ಪುರ ನಡುವೆ ಮೆಟ್ರೋ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಂದುವರಿದು ಕೆ.ಆರ್. ಪುರ-ಹೆಬ್ಟಾಳ-ಯಶವಂತಪುರ-ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವೆ ಸಂಪರ್ಕ ಕಲ್ಪಿಸಬಹುದು. ಇದು ಸಾಧ್ಯವಾಗದಿದ್ದರೆ, ಮಿಸ್ಡ್ ಲಿಂಕ್ ಇರುವ ಕಡೆಗಳಲ್ಲಿ ಮಾನೊ ರೈಲಿನಂತಹ ಸಂಪರ್ಕ ಸೇವೆಗಳನ್ನಾದರೂ ಮಾಡಬೇಕು. ಅಂದಾಗ ಸಂಚಾರದಟ್ಟಣೆ ತಗ್ಗಲಿದೆ. ಜನರೂ ನಿಟ್ಟುಸಿರು ಬಿಡುತ್ತಾರೆ ಎಂದು ಶ್ರೀಹರಿ ಅಭಿಪ್ರಾಯಪಡುತ್ತಾರೆ.
ನಗರದ ಬಹುತೇಕ ಕಡೆಗಳಲ್ಲಿ ನೈರುತ್ಯ ರೈಲ್ವೆ ಮಾರ್ಗಕ್ಕೆ ಪರ್ಯಾಯವಾಗಿಯೇ ಮೆಟ್ರೋ ರೈಲು ಹಾದುಹೋಗುತ್ತದೆ. ತುಮಕೂರು ರಸ್ತೆಯಲ್ಲಿ ಇದನ್ನು ಕಾಣಬಹುದು. ನಾಗರಬಾವಿ, ರಾಜಾಜಿನಗರ, ಬಸವೇಶ್ವರನಗರ, ಮಾಗಡಿ ರಸ್ತೆಯಿಂದ ಸುಮನಹಳ್ಳಿ ಕಡೆಗೆ ತೆರಳುವ ರಸ್ತೆ ಸೇರಿದಂತೆ ಸುತ್ತಲಿನ ವಸತಿ ಪ್ರದೇಶಗಳಲ್ಲಿ ಮೆಟ್ರೋ ಸೇವೆ ಲಭ್ಯವಿಲ್ಲ. ಹಾಗಂತಾ ಬಸ್ ಸೇವೆಗಳಂತೆಯೇ ಎಲ್ಲ ಕಡೆಗೂ ಮೆಟ್ರೋ ಹೋಗಬೇಕು ಎಂದಲ್ಲ. ಆದರೆ, ಸಾಧ್ಯತೆ ಇರುವ ಕಡೆಗಳಲ್ಲಿ ಮೆಟ್ರೋ ತೆಗೆದುಕೊಂಡು ಹೋಗಬಹುದಿತ್ತು ಎಂದು ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.
ಮೆಜೆಸ್ಟಿಕ್‌ನಲ್ಲಿ ಹೆಚ್ಚಲಿದೆ ದಟ್ಟಣೆ: 42.3 ಕಿ.ಮೀ. ಉದ್ದದ ಮೆಟ್ರೋಗೆ ಏಕೈಕ ಇಂಟರ್‌ಚೇಂಜ್ ಮೆಜೆಸ್ಟಿಕ್. ಹಾಗಾಗಿ, ಮೆಟ್ರೋ ಪ್ರಯಾಣಿಕರು ಒಂದು ದಿಕ್ಕಿನಿಂದ ಮತ್ತೂಂದು ದಿಕ್ಕಿಗೆ ಹೋಗಬೇಕಾದರೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಬರಲೇಬೇಕು. ಇದರಿಂದ ಹಿಂದೆಂದಿಗಿಂತ ಹೆಚ್ಚು ದಟ್ಟಣೆ ಉಂಟಾಗಲಿದೆ ಎನ್ನುತ್ತಾರೆ ನಗರ ಸಾರಿಗೆ ತಜ್ಞರು. ಮೆಜೆಸ್ಟಿಕ್ ನಿಲ್ದಾಣವು ದೇಶದಲ್ಲೇ ಅತಿದೊಡ್ಡ ಇಂಟರ್‌ಚೇಂಜ್ ಆಗಿದೆ. 20 ಸಾವಿರ ಪ್ರಯಾಣಿಕರ ಸಾಮರ್ಥ್ಯವನ್ನು ಇದು ಹೊಂದಿದೆ. ಆದರೆ, ಮೂರು ಬೋಗಿಯ ಒಂದು ರೈಲಿನಲ್ಲಿ ಪ್ರಯಾಣಿಸುವ ಸಾಮರ್ಥ್ಯ ಇರುವುದು 970 ಜನ ಮಾತ್ರ. ಆದ್ದರಿಂದ ರೈಲುಗಳ ಸಂಖ್ಯೆ ಇಲ್ಲಿ ಹೆಚ್ಚಿಸಬೇಕಿರುವುದು ಅನಿವಾರ್ಯ. ಪ್ರಯಾಣಿಕರ ದಟ್ಟಣೆ ಉಂಟಾಗಲಿರುವ ಬೆನ್ನಲ್ಲೇ ಮೆಜೆಸ್ಟಿಕ್ ಒಂದೇ ಇಂಟರ್‌ಚೇಂಜ್ ಸಾಕಾಗುತ್ತದೆಯೇ ಎಂಬ ಪ್ರಶ್ನೆಗೆ ಸ್ವತಃ ಬಿಎಂಆರ್‌ಸಿ ಅಧಿಕಾರಿಗಳಿಂದ ಬರುವ ಉತ್ತರ- ಇಲ್ಲ. ಟೋಕಿಯೊದಲ್ಲಿ 80ಕ್ಕೂ ಹೆಚ್ಚು ಇಂಟರ್‌ಚೇಂಜ್‌ಗಳಿವೆ. ಸಿಂಗಪುರದಲ್ಲಿ 500 ಮೀಟರ್‌ಗೊಂದು ಮೆಟ್ರೋ ಮಾರ್ಗ ಎದುರಾಗುತ್ತದೆ. ಅವುಗಳಿಗೆ ಹೋಲಿಸಿದರೆ, “ನಮ್ಮ ಮೆಟ್ರೋ’ದಲ್ಲಿ ಇನ್ನಷ್ಟು ಇಂಟರ್‌ಚೇಂಜ್‌ಗಳ ಅವಶ್ಯಕತೆ ಇದೆ. ಜಯದೇವ ಹೃದ್ರೋಗ ಆಸ್ಪತ್ರೆ ಬಳಿ, ಸಿಲ್ಕ್ಬೋರ್ಡ್ ಜಂಕ್ಷನ್ ಬಳಿ ತಲಾ ಒಂದು ಇಂಟರ್‌ಚೇಂಜ್‌ಗೆ ಉದ್ದೇಶಿಸಲಾಗಿದೆ. ಅದೂ ಸಾಲದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ. * ವಿಜಯಕುಮಾರ್ ಚಂದರಗಿ