Advertisement

Government ಭೂಮಿ ಮಣ್ಣು ವ್ಯಾಪಾರಕ್ಕೆ ಅವಕಾಶವಿಲ್ಲ; ಬೇಳೂರು ಎಚ್ಚರಿಕೆ

07:13 PM Jun 13, 2024 | Team Udayavani |

ಸಾಗರ: ತಾಲೂಕಿನಲ್ಲಿ ಮಣ್ಣು ಮಾರಾಟದ ದಂಧೆ ನಡೆಯುತ್ತಿದೆ. ಸರ್ಕಾರಿ ಭೂಮಿ ಅಗೆದು ಅದರ ಮಣ್ಣನ್ನು ನಗರ ಪ್ರದೇಶಕ್ಕೆ ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣವನ್ನು ದಾಖಲೆ ಮಾಡಿ. ಸರ್ಕಾರಿ ಭೂಮಿ ಮಣ್ಣು ವ್ಯಾಪಾರ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಶಾಸಕ, ರಾಜ್ಯ ಅರಣ್ಯ ಕ್ಯೆಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕಂದಾಯ ಅಧಿಕಾರಿಗಳಿಗೆ ಕಟು ಎಚ್ಚರಿಕೆ ನೀಡಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿದ ಅವರು, ಖಾತೆ ಜಾಗದಲ್ಲಿ ಮಣ್ಣು ಹೆಡೆಯುವವರು ತಮ್ಮ ತೋಟಕ್ಕೆ ಮಾತ್ರ ಈ ಮಣ್ಣಿನ ಬಳಕೆ ಮಾಡಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಮಾರಾಟವನ್ನು ಮಾಡಿದರೆ ಕೂಡಲೇ ಬಳಕೆಯಾದ ವಾಹನವನ್ನು ವಶಕ್ಕೆ ಪಡೆಯಿರಿ ಎಂದು ಸೂಚಿಸಿದರು.

ಇತ್ತೀಚೆಗೆ ನಗರ ಸಮೀಪವಿರುವ ಎಡಜಿಗಳೇಮನೆ, ಉಳ್ಳೂರು, ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿ ಒತ್ತುವರಿಯನ್ನು ಮಾಡುತ್ತಿದ್ದಾರೆ ಎನ್ನುವ ದೂರು ಬಂದಿದೆ. ಜನರು ಒತ್ತುವರಿ ಮಾಡುತ್ತಿದ್ದರೂ ಪಂಚಾಯ್ತಿ ಕ್ಷೇತ್ರದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕ ಅಧಿಕಾರಿಗಳು ಸುಮ್ಮನಿರುವುದು ಕಂಡುಬಂದಿದೆ. ತತ್ ಕ್ಷಣ ಪರಿಶೀಲಿಸಿ ವರದಿಯನ್ನು ತಹಶೀಲ್ದಾರ್‌ರಿಗೆ ನೀಡಬೇಕು. ಇನ್ನು ಮುಂದೆ ಒತ್ತುವರಿ ಪ್ರಕರಣದಲ್ಲಿ ಮೊದಲು ಸಂಬಂಧಪಟ್ಟ ಕಂದಾಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಅಕ್ರಮ ಒತ್ತುವರಿಯನ್ನು ತಡೆಯಲು ಸರ್ಕಾರದ ಮಟ್ಟದಲ್ಲಿ ಪ್ರತಿ ತಾಲೂಕಿಗೆ ಪ್ರತ್ಯೇಕ ವಿಶೇಷ ತಂಡವನ್ನು ರಚನೆ ಮಾಡುವುದಕ್ಕೆ ಕಂದಾಯ ಮಂತ್ರಿಗಳಲ್ಲಿ ಹಾಗೂ ಮುಖ್ಯಮಂತ್ರಿಗಳಲ್ಲಿ ಈಗಾಗಲೇ ಚರ್ಚೆಯನ್ನು ನಡೆಸಿದ್ದೇನೆ. ಮುಂದಿನ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದರು.

ನಾನು ಶಾಸಕನಾಗಿ ಒಂದು ವರ್ಷ ಕಳೆಯುತ್ತಿದೆ. ಈವರೆಗೆ ಸುಮ್ಮನಿದ್ದೆ. ಇನ್ನು ಮುಂದೆ ಯಾವುದೇ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ, ಕಚೇರಿಗೆ ಅಲೆದಾಡಿಸಿದರೆ, ಮಧ್ಯವರ್ತಿಗಳಿಂದ ಹಣದ ಬೇಡಿಕೆ ಇಟ್ಟರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುತ್ತೇನೆ. ಉತ್ತಮವಾಗಿ ಕೆಲಸ ಮಾಡಿ ನಿಮ್ಮ ನೌಕರಿಯನ್ನು ಉಳಿಸಿಕೂಳ್ಳಿ ಎಂದು ಖಡಕ್ ಸೂಚನೆ ನೀಡಿದರು.

Advertisement

ತಾಲೂಕಿನಲ್ಲಿ ಯಾವುದೇ ಅಕ್ರಮ ಲೇಔಟ್ ನಿರ್ಮಾಣ ಹಾಗೂ ಸರ್ಕಾರಿ ಭೂಮಿ ಒತ್ತುವರಿ ಮಾಡುವುದಕ್ಕೆ ಅವಕಾಶವನ್ನು ನೀಡಬೇಡಿ. ಸರ್ಕಾರಿ ಭೂಮಿ ಅಕ್ರಮವಾಗಿ ಬೇಲಿ ಹಾಕುವುದು ಕಂಡು ಬಂದರೆ ಅಂತವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮವನ್ನು ಕೈಗೊಳ್ಳಿ. ಮಳೆಗಾಲದಲ್ಲಿ ಮನೆ ಕುಸಿತ, ತೋಟ ಗದ್ದೆಗಳಿಗೆ ಹಾನಿ ಕಂಡುಬಂದ ಸಂದರ್ಭದಲ್ಲಿ ರೆವಿನ್ಯೂ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆಯನ್ನು ಮಾಡಿ ವರದಿಯನ್ನು ತಾಲೂಕು ಆಡಳಿತಕ್ಕೆ ನೀಡಬೇಕು. ಯಾರೇ ವಿಳಂಬ ಮಾಡಿದರೂ ಅವರನ್ನು ಕೂಡಲೇ ಸಸ್ಪೆಂಡ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯಕ್, ಉಪ ತಹಶೀಲ್ದಾರ್ ಚಂದ್ರಶೇಖರ್, ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್ ಮೂರ್ತಿ ಇನ್ನಿತರ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next