Advertisement

ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ!

12:46 PM Dec 20, 2019 | Suhan S |

ಜಗಳೂರು: ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿರುವ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೌಚಾಲಯದ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರನ್ನು ಕಾಲೇಜಿಗೆ ಕಳುಹಿಸುವುದೇ ಅಪರೂಪ. ಆದರೆ ತಮ್ಮ ಮಕ್ಕಳು ಕಲಿಯಬೇಕೆಂಬ ಉದ್ದೇಶದಿಂದ ಪೋಷಕರು ಕಾಲೇಜಿಗೆ ಕಳುಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಉತ್ತಮ ಶಿಕ್ಷಣ, ಸಿಬ್ಬಂದಿ ಇದ್ದರೂ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಾಗಿರುವ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಸಮೀಪ 2007ರಲ್ಲಿ 5 ಎಕರೆ ವಿಸ್ತೀರ್ಣದ ಜಾಗದಲ್ಲಿ ಪ್ರಾರಂಭವಾದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಸುತ್ತಮುತ್ತಲಿನ 10 ಗ್ರಾಮಗಳ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಸದರಿ ಕಾಲೇಜಿನಲ್ಲಿ ವಿಜ್ಞಾನ, ಕಲೆ, ವಾಣಿಜ್ಯ ವಿಭಾಗಗಳಿದ್ದು ಸುಮಾರು 250 ವಿದ್ಯಾರ್ಥಿಗಳಿದ್ದು ಅದರಲ್ಲಿ 150ಕ್ಕೂ ಅಧಿ ಕ ವಿದ್ಯಾರ್ಥಿನಿಯರೇ ಇದ್ದಾರೆ.

ಆದರೆ ಕಾಲೇಜಿನಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿನಿಯರು , ಉಪನ್ಯಾಸಕರು ಹುಳ ಹುಪ್ಪಟಿಗಳ ಹೆದರಿಕೆ ಇದ್ದರೂ ಮಲ, ಮೂತ್ರ ವಿಸರ್ಜನೆಗೆ ಕಾಲೇಜಿನ ಸಮೀಪದ ಬಯಲು ಸ್ಥಳವನ್ನೇ ಆಶ್ರಯಿಸುವಂತಾಗಿದೆ. ಹಳೆಯ ಶೌಚಾಲಯವಿದ್ದರೂ ಅದು ಹೆಸರಿಗೆ ಮಾತ್ರವಿದೆ. ಕಾಲೇಜು ಕಟ್ಟಡ ಕಟ್ಟಿದಾಗ ಮನೆಗಳಲ್ಲಿ ನಿರ್ಮಿಸುವಂತೆ ವಿದ್ಯಾರ್ಥಿಗಳಿಗೊಂದು, ವಿದ್ಯಾರ್ಥಿನಿಯರಿಗೊಂದು ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳಿಗೆ ಕೇವಲ ಎರಡು ಶೌಚಾಲಯ ಸಾಕಾಗದೆಂದು ಹಾಗೂ ನೀರಿನ ಕೊರತೆಯಿಂದ ನಿರ್ವಹಣೆ ಇಲ್ಲದೇ ಅವು ಪಾಳು ಬಿದ್ದಿವೆ. ಕಾಲೇಜು ಆವರಣದಲ್ಲಿ 1 ಕೋಟಿ ರೂ ವೆಚ್ಚದಲ್ಲಿ 3 ಕೊಠಡಿಗಳ ಜೊತೆ ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು 1 ವರ್ಷ ಕಳೆದರೂ ಸಹ ಕೆಲಸ ಇನ್ನೂ ಕುಂಟುತ್ತಾ ಸಾಗುತ್ತಿದೆ. ಹಾಗಾಗಿ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next