Advertisement

ಶಿಕ್ಷಕರಿಲ್ಲದೆ ಪೆರ್ಮುಡ ಶಾಲೆ ಮುಚ್ಚುವ ಭೀತಿ!

10:11 AM Mar 18, 2020 | Team Udayavani |

ವೇಣೂರು: ವಿದ್ಯಾರ್ಥಿಗಳಿಲ್ಲದೆ ಸರಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿದ್ದರೆ ಇಲ್ಲೊಂದು ಶಾಲೆ ಶಿಕ್ಷಕರೇ ಇಲ್ಲದೆ ಮುಚ್ಚುವ ಭೀತಿಯಲ್ಲಿದೆ. ಶಿಕ್ಷಕರಿಲ್ಲದ ಶಾಲೆಗೆ ಮಕ್ಕಳನ್ನು ಕಳಿಸಿ ಪ್ರಯೋಜನವೇನು ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

Advertisement

ನಿಟ್ಟಡೆ ಗ್ರಾಮದ ಪೆರ್ಮುಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಈ ಸಮಸ್ಯೆ ಎದುರಿಸುತ್ತಿರುವ ಶಾಲೆ. ಒಂದರಿಂದ 7ನೇ ತರಗತಿವರೆಗೆ 38 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕಿ ಸೇರಿದಂತೆ ನಾಲ್ವರು ಶಿಕ್ಷಕಿಯರು ಇಲ್ಲಿದ್ದರು. ಶಾಲಾ ಭಿವೃದ್ಧಿ ಸಮಿತಿಯು ಮತ್ತೋರ್ವ ಅತಿಥಿ ಶಿಕ್ಷಕಿಯನ್ನು ನೇಮಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಧಾನ್ಯತೆ ದೊರೆಯುವಂತೆ ಮಾಡಿತ್ತು.

ಶಿಕ್ಷಕಿಯರ ವರ್ಗಾವಣೆ
ಶೈಕ್ಷಣಿಕ ವರ್ಷ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಅಕ್ಟೋಬರ್‌ನಲ್ಲಿ ಇಬ್ಬರು ಶಿಕ್ಷಕಿಯರನ್ನು ಏಕಕಾಲದಲ್ಲಿ ಉಡುಪಿ ಜಿಲ್ಲೆಗೆ ವರ್ಗಾಯಿಸಲಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಬಗ್ಗೆ ಪೋಷಕರು ಚಿಂತನೆ ನಡೆಸುತ್ತಿರು ವಾಗಲೇ ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದ ವಿನೋದ ಅವರನ್ನು ಪದೋನ್ನತಿ ಗೊಳಿಸಿ ಉಂಬೆಟ್ಟು ಶಾಲೆಗೆ ವರ್ಗಾಯಿಸಲಾಯಿತು. ಮುಂದಿನ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದ ಪೆರ್ಮುಡ ಶಾಲೆಯನ್ನು ಓರ್ವ ಶಿಕ್ಷಕಿಯಿಂದ ನಿಭಾಯಿಸುವುದು ಕಷ್ಟ. ಖಾಲಿಯಿರುವ ಮೂವರು ಶಿಕ್ಷಕರ ಹುದ್ದೆಯನ್ನು ಶೀಘ್ರ ಮಂಜೂರು ಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಭರ್ತಿಗೆ ಆಗ್ರಹ
ಪೆರ್ಮುಡ ತೀರಾ ಹಳ್ಳಿಪ್ರದೇಶ ವಾಗಿದ್ದು, ರೈತರ ಮಕ್ಕಳೇ ಈ ಶಾಲೆಗೆ ಬರುತ್ತಿದ್ದಾರೆ. ಏಕಾಏಕಿ ಮೂವರು ಶಿಕ್ಷಕಿಯರ ವರ್ಗಾವಣೆಯಿಂದ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಎಸ್‌ಡಿಎಂಸಿಯು ಮಂಗಳೂರು ಶಿಕ್ಷಣ ಇಲಾಖೆಯ ಸಹಾಯಕ ಉಪನಿರ್ದೇ ಶಕರಿಗೆ ಲಿಖೀತ ಮನವಿ ಸಲ್ಲಿಸಿದೆ.

ಪೆರ್ಮುಡ ಶಾಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಿಆರ್‌ಪಿ ಜತೆ ಮಾತನಾಡುತ್ತೇನೆ. ವಿಮುಕ್ತಿ ಸಂಸ್ಥೆಯವರು 25 ಅತಿಥಿ ಶಿಕ್ಷಕರನ್ನು ನೀಡಿದ್ದು, ಮುಂಬರುವ ಶೈಕ್ಷಣಿಕ ಸಾಲಿಗೆ ತೊಂದರೆ ಆಗದಂತೆ ಅತಿಥಿ ಶಿಕ್ಷಕರನ್ನು ನೇಮಿಸುವುದಲ್ಲದೆ, ಖಾಯಂ ಶಿಕ್ಷಕರ ನೇಮಕಕ್ಕೂ ಗಮನ ಹರಿಸುತ್ತೇವೆ.
– ಲಕ್ಷ್ಮಣ ಶೆಟ್ಟಿ, ಬೆಳ್ತಂಗಡಿ ಬಿಇಒ

Advertisement

ಪೆರ್ಮುಡ ಶಾಲೆಯಲ್ಲಿ ಈಗ ಕೇವಲ ಓರ್ವ ಶಿಕ್ಷಕಿ ಇದ್ದು, ಮುಂದಿನ ವರ್ಷದಿಂದ ಅತಿಥಿ ಶಿಕ್ಷಕರು ಕೂಡ ಇರುವುದಿಲ್ಲ. ಇದೇ ಭೀತಿಯಿಂದ ಪೋಷಕರು ಮಕ್ಕಳ ದಾಖಲಾತಿಯನ್ನು ಹಿಂಪಡೆದರೆ ಶಾಲೆ ಮುಚ್ಚುವ ಸ್ಥಿತಿ ಬರಬಹುದು. ಅಧಿಕಾರಿಗಳು, ಜನಪ್ರತಿನಿಧಿಗಳು ತತ್‌ಕ್ಷಣ ಕ್ರಮ ಜರಗಿಸಿ ಪೋಷಕರಲ್ಲಿ ಧೈರ್ಯ ತುಂಬಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾದೀತು.
– ಉಮೇಶ್‌ ಕುಲಾಲ್‌, ಅಧ್ಯಕ್ಷರು, ಎಸ್‌ಡಿಎಂಸಿ

– ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next