Advertisement

Support price: ಕೇಂದ್ರ ಬೆಂಬಲ ಬೆಲೆ ಘೋಷಿಸದೆ ಪ್ರೋತ್ಸಾಹಧನ ಸಿಗದು

03:42 PM Dec 08, 2023 | Team Udayavani |

ಹಾಸನ: ರಾಜ್ಯ ಸರ್ಕಾರ ಕೊಬ್ಬರಿಗೆ ಹೆಚ್ಚುವರಿ 250 ರೂ. ಪ್ರೋತ್ಸಾಹ ಧನ ಪ್ರಕಟಿಸಿದೆ. ಕಳೆದ ವರ್ಷ ಒಂದು ಕ್ವಿಂಟಲ್‌ ಕೊಬ್ಬರಿಗೆ ನೀಡಿದ್ದ 1,250 ರೂ. ಜತೆಗೆ ಈ ವರ್ಷದ 250 ರೂ. ಸೇರಿದರೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನ 1,500 ರೂ.ಗೆ ಏರಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಬೆಳೆಗಾರರಿಂದ ನೇರವಾಗಿ ಕೊಬ್ಬರಿ ಖರೀದಿ ಆರಂಭಿಸದಿದ್ದರೆ ರಾಜ್ಯ ಸರ್ಕಾರದ 1500 ರೂ. ಪ್ರೋತ್ಸಾಹಧನ ತೆಂಗು ಬೆಳೆಗಾರರಿಗೆ ಲಭ್ಯವಾಗುವುದಿಲ್ಲ.

Advertisement

ಖರೀದಿ ಕೇಂದ್ರ ತೆರೆಯಬೇಕು: ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿ ನಫೆಡ್‌ ಮೂಲಕ ಖರೀದಿ ಕೇಂದ್ರ ತೆರೆದು ತೆಂಗು ಬೆಳೆಗಾರರಿಂದ ನೇರವಾಗಿ ಕೊಬ್ಬರಿ ಖರೀದಿ ಆರಂಭಿಸಬೇಕು. ಖರೀದಿ ಕೇಂದ್ರದಲ್ಲಿ ಕೊಬ್ಬರಿ ಮಾರಾಟ ಮಾಡಿದ ತೆಂಗು ಬೆಳೆಗಾರರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಪಾವತಿ ಮಾಡಲು ಸಾಧ್ಯ. ಕಳೆದ ವರ್ಷ ಕೇಂದ್ರ ಸರ್ಕಾರ ಕೊಬ್ಬರಿಗೆ 1,1750 ರೂ. ಬೆಂಬಲ ಬೆಲೆ ಘೋಷಣೆ ಮಾಡಿ ನಫೆಡ್‌ ಮೂಲಕ ಕೊಬ್ಬರಿ ಖರೀದಿಸಿತ್ತು. ಆನಂತರ ರಾಜ್ಯ ಸರ್ಕಾರ 1,250 ರೂ. ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಆಗ ತೆಂಗು ಬೆಳೆಗಾರರಿಗೆ ಕ್ವಿಂಟಲ್‌ ಕೊಬ್ಬರಿಗೆ 13,000 ರೂ. ದರ ಸಿಕ್ಕಿದಂತಾಗಿತ್ತು.

ಕೊಬ್ಬರಿ ಖರೀದಿ ನಫೆಡ್‌ ಪುನರಾರಂಭಿಸಲೇ ಇಲ್ಲ: ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಘೋಷಣೆ ಮಾಡಿದ ಕೆಲ ದಿನಗಳಲ್ಲಿಯೇ ನಫೆಡ್‌ ಕೊಬ್ಬರಿ ಖರೀದಿ ಕೇಂದ್ರಗಳನ್ನು ಮುಚ್ಚಿತು. ಹಾಗಾಗಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಶೇ.10 ರಷ್ಟು ಬೆಳೆಗಾರರಿಗೂ ಸಿಗಲಿಲ್ಲ. ಕೊಬ್ಬರಿ ಖರೀದಿ ಮುಂದುವರಿಸಬೇಕು ಎಂದು ಬೆಳೆಗಾರರು ಮನವಿ ಮಾಡಿದರೂ ಕೇಂದ್ರ ಸರ್ಕಾರ ಸ್ವಾಮ್ಯದ ನಫೆಡ್‌ ಕೊಬ್ಬರಿ ಖರೀದಿ ಪುನರಾರಂಭಿಸಲೇ ಇಲ್ಲ. ಹಾಗಾಗಿ ಬಹಳಷ್ಟು ತೆಂಗು ಬೆಳೆಗಾರರಿಗೆ ಬೆಂಬಲ ಬೆಲೆ, ಪ್ರೋತ್ಸಾಹಧನ ಸೌಲಭ್ಯ ಸಿಗದೇ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಷ್ಟ ಅನುಭವಿಸಿದರು.

ಕೊಬ್ಬರಿ ದರವೂ ಏರಿಕೆ ಕಾಣುತ್ತಿಲ್ಲ: ಈ ವರ್ಷವೂ ಕೊಬ್ಬರಿ ದರ ಕ್ವಿಂಟಲ್‌ಗೆ 8000 ರಿಂದ 9000 ರೂ. ದರದಲ್ಲಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೆ ಕ್ವಿಂಟಲ್‌ಗೆ 14,000 ರೂ. ವರೆಗೂ ದರ ಸಿಗಬಹುದು. ಆದರೆ, ಕೇಂದ್ರ ಸರ್ಕಾರ ಇದುವರೆಗೂ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಕೊಬ್ಬರಿ ದರವೂ ಏರಿಕೆ ಕಾಣುತ್ತಿಲ್ಲ.

ನಿರ್ಲಕ್ಷ್ಯ ತಾಳಲು ಸಾಧ್ಯವಿಲ್ಲ: ಒಕ್ಕೂಟ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಬರುವುದು ಜವಾಬ್ದಾರಿ. ಹಾಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡದೆ ನಿರ್ಲಕ್ಷ್ಯ ತಾಳಲು ಸಾಧ್ಯವಿಲ್ಲ. ಜೊತೆಗೆ ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ಹಾಗಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುವುದು ಖಚಿತ. ರಾಜ್ಯ ಸರ್ಕಾರ ಸದ್ಯಕ್ಕೆ ಬೀಸುವ ದೊಣ್ಣೆ ತಪ್ಪಿಸಿಕೊಂಡು ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹೊರಿಸಿದೆ. ನಾವು ತೆಂಗು ಬೆಳೆಗಾರರ ಪರವಾಗಿದ್ದೇನೆ. ಕೇಂದ್ರ ಸರ್ಕಾರ ತೆಂಗು ಬೆಳೆಗಾರರ ನಿರ್ಲಕ್ಷಿಸುತ್ತಿದೆ ಎಂದು ಬೆಳೆಗಾರರ ಗಮನವನ್ನು ಕೇಂದ್ರ ಸರ್ಕಾರದತ್ತ ತಿರುಗಿಸುವ ಜಾಣ ನಡೆಯನ್ನಂತೂ ರಾಜ್ಯ ಸರ್ಕಾರ ಅನುಸರಿಸಿದೆ.

Advertisement

ಕೇಂದ್ರದ ಘೋಷಣೆ ಯಾವಾಗ ?: ಕೇಂದ್ರ ಸರ್ಕಾರ ಸದ್ಯಕ್ಕೆ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಸೂಚನೆ ಕಾಣುತ್ತಿಲ್ಲ. ಈಗ ಕರ್ನಾಟಕ ಮಾತ್ರ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಡ ತರುತ್ತಿದೆ. ತೆಂಗು ಬೆಳೆಯುವ ಇನ್ನುಳಿದ ಕೇರಳ ಮತ್ತು ತಮಿಳುನಾಡು ರಾಜ್ಯಗಳೂ ಕೇಂದ್ರದ ಮೇಲೆ ಒತ್ತಡ ತರಬೇಕು. ಈ ಮೂರು ರಾಜ್ಯಗಳು ಒತ್ತಡ ತಂದರೂ ಈ ರಾಜ್ಯಗಳು ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಾಗಿವೆ. ಹಾಗಾಗಿ ಒತ್ತಡ ಬಂದ ತಕ್ಷಣ ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಸಾಧ್ಯತೆ ಇಲ್ಲ.

ಕೇಂದ್ರದ ಗಮನ ಸೆಳೆಯಬೇಕು : ಸಂಸತ್‌ ಕಲಾಪ ನಡೆಯುತ್ತಿರುವ ಈ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಪಟ್ಟುಹಿಡಿದು ಬೆಂಬಲ ಘೋಷಣೆ ಮಾಡಿಸಬೇಕು. ಅದಾಗದೆ ಸಂಸತ್‌ ಅಧಿವೇಶನ ಮುಗಿದರೆ ಕೆಂದ್ರ ಸರ್ಕಾರ ಕೆಲ ದಿನಗಳು ಬೆಂಬಲ ಬೆಲೆ ಘೋಷಣೆ ಮಾಡದೆ ಕಾಲ ದೂಡಬಹುದು. ಆಗ ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ರೋತ್ಸಾಹಧನ ತೆಂಗು ಬೆಳೆಗಾರರಿಗೆ ಸದ್ಯಕ್ಕೆ ಲಭ್ಯವಾಗುವುದಿಲ್ಲ.

ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next