ಬೆಂಗಳೂರು: “ರಾಜ್ಯದಲ್ಲಿ ಪ್ರಸ್ತುತ 6.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಯಾವುದೇ ರೀತಿಯಲ್ಲಿ ರಸಗೊಬ್ಬರದ ಕೊರತೆ ಇಲ್ಲ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಡಿಎಪಿ ಸೇರಿದಂತೆ ವಿವಿಧ ಪ್ರಕಾರದ ರಸಗೊಬ್ಬರ ಕೊರತೆ ಬಗ್ಗೆ “ಉದಯವಾಣಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅವರು, ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ವಿವಿಧ ಗ್ರೇಡ್‌ನ 35.63 ಲಕ್ಷ ಮೆ.ಟ. ರಸಗೊಬ್ಬರ ಲಭ್ಯವಿತ್ತು. ಅದರಲ್ಲಿ 28.54 ಲಕ್ಷ ಮೆ.ಟ. ಮುಂಗಾರು ಕೃಷಿ ಚಟುವಟಿಕೆಗಳಿಗಾಗಿ ಮಾರಾಟ ಆಗಿದೆ. ಉಳಿದ ದಾಸ್ತಾನು ಅನ್ನು ಹಿಂಗಾರಿನಲ್ಲಿ ಬಳಕೆಗೆ ಅವಕಾಶ ಇದ್ದು, ಈ ಪ್ರಕ್ರಿಯೆ ಈಗಾಗಲೇ ನಡೆದಿದೆ ಎಂದು ಹೇಳಿದ್ದಾರೆ.
ಮುಂಗಾರಿನಲ್ಲಿ ಸರಬರಾಜು ಆಗಿಯೂ 7.08 ಲಕ್ಷ ಮೆ.ಟ. ರಸಗೊಬ್ಬರ ಉಳಿದಿದೆ. ಜತೆಗೆ ಅಕ್ಟೋಬರ್‌ನಲ್ಲಿ 2.30 ಲಕ್ಷ ಮೆ.ಟ. ಗೊಬ್ಬರ ಪೂರೈಕೆ ಆಗಿದೆ. ಇದರೊಂದಿಗೆ ಒಟ್ಟಾರೆ ಲಭ್ಯತೆ 9.39 ಲಕ್ಷ ಮೆ.ಟ. ಆಯಿತು. ಇಡೀ ಅಕ್ಟೋಬರ್‌ನಲ್ಲಿ ಬೇಡಿಕೆ ಇರುವುದು 2.80 ಲಕ್ಷ ಮೆ.ಟ. ಹಾಗಾಗಿ, ಯಾವುದೇ ರೀತಿಯಲ್ಲಿ ಕೊರತೆ ಇಲ್ಲ. ಈ ರಸಗೊಬ್ಬರವನ್ನು ನಿಯಮಿತವಾಗಿ ರೈತರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ದಾಳಿ ನಡೆಸಿ 40 ಕೆ.ಜಿ ಹಸಿ ಗಾಂಜಾ ವಶ: ಆರೋಪಿ ಪರಾರಿ
ಇನ್ನು ಒಟ್ಟಾರೆ 9.39 ಲಕ್ಷ ಮೆ.ಟ. ಪೈಕಿ ಅಕ್ಟೋಬರ್ 26 (ಮಂಗಳವಾರ)ರವರೆಗೆ 3.33 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ. ಉಳಿದ 6.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ (ಡಿಎಪಿ 33,570 ಮೆಟ್ರಿಕ್ ಟನ್, ಎಂಒಪಿ 28,420 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 3,16,140 ಮೆಟ್ರಿಕ್ ಟನ್ ಹಾಗೂ ಯೂರಿಯಾ 2,27,630 ಮೆಟ್ರಿಕ್ ಟನ್) ದಾಸ್ತಾನು ಇದೆ.
ಮುಂಗಾರು ಹಂಗಾಮಿನಲ್ಲಿ ಆರಂಭಿಕ ಶುಲ್ಕ (11.54 ಲಕ್ಷ ಮೆ.ಟ.) ಹಾಗೂ 24 ಲಕ್ಷ ಮೆಟ್ರಿಕ್ ಟನ್ ಸರಬರಾಜು ಒಳಗೊಂಡಂತೆ ಒಟ್ಟು 35,63,000 ಮೆ.ಟನ್ ವಿವಿಧ ರಸಗೊಬ್ಬರ ಲಭ್ಯವಿತ್ತು. ಈ ಅವಧಿಯಲ್ಲಿ ಮಾರಾಟ ಆಗಿದ್ದು 28.54 ಲಕ್ಷ ಮೆಟ್ರಿಕ್ ಟನ್. ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ 2021ರ ಅಕ್ಟೋಬರ್‌ನಿಂದ 2022ರ ಮಾರ್ಚ್‌ವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ , ಯೂರಿಯಾ ಗೊಬ್ಬರಗಳಿಗೆ 16.94 ಲಕ್ಷ ಮೆಟ್ರಿಕ್ ಟನ್ ಬೇಡಿಕೆಯಿದೆ ಎಂದು ಮಾಹಿತಿ ನೀಡಿದ್ದಾರೆ.