ನವದೆಹಲಿ: ಕೆಲ ದಿನಗಳ ಹಿಂದೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದಾಗ ಕಲ್ಲಿದ್ದಲಿನ ಕೊರತೆಯಿಲ್ಲ. ದೇಶದಲ್ಲಿ ಬೇಡಿಕೆಯಿರುವಷ್ಟು ವಿದ್ಯುತ್ ಉತ್ಪಾದನೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಭಾನುವಾರ ಪುನಃ ಅದೇ ಅಭಯವನ್ನು ನೀಡಿದೆ.
ಕಲ್ಲಿದ್ದಲು ಸಚಿವಾಲಯದಿಂದ ಹೊರಬಿದ್ದಿರುವ ಪ್ರಕಟಣೆಯಲ್ಲಿ, “ಜೂ. 16ರ ವರದಿ ಪ್ರಕಾರ ನಮ್ಮಲ್ಲಿ 52 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹವಿದೆ. ಅದಷ್ಟೇ ಅಲ್ಲದೆ ವಿದ್ಯುತ್ ಸ್ಥಾವರಗಳಿಕೆ ಸರಬರಾಜು ಆಗಲೆಂದು ವಿವಿಧ ಬಂದರುಗಳಲ್ಲಿ ಮತ್ತು ಖಾಸಗಿ ಗೋದಾಮುಗಳಲ್ಲಿ 4.5 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹವಿದೆ’ ಎಂದು ಸಚಿವಾಲಯ ತಿಳಿಸಿದೆ.
ಆಮದಿನಲ್ಲಿ ಗಣನೀಯ ಹೆಚ್ಚಳ
ಕಳೆದ ಕೆಲ ವಾರಗಳಲ್ಲಿ ರಷ್ಯಾದಿಂದ ಭಾರತಕ್ಕೆ ಕಲ್ಲಿದ್ದಲು ಆಮದು ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾದ ಮೇಲೆ ಅನೇಕ ದೇಶಗಳು ನಿರ್ಬಂಧ ಹೇರಿದ ಬೆನ್ನಲ್ಲೇ ರಷ್ಯಾದ ಕಲ್ಲಿದ್ದಲು ಮಾರಾಟಗಾರರು ರಿಯಾಯಿತಿ ದರದಲ್ಲಿ ಕಲ್ಲಿದ್ದಲು ರಫ್ತು ಮಾಡಲಾರಂಭಿಸಿದ್ದಾರೆ. ಇದರ ಲಾಭವನ್ನು ಪಡೆಯಲು ಉದ್ದೇಶಿಸಿರುವ ಭಾರತ, ಶೇ. 30 ರಿಯಾಯಿತಿ ದರದಲ್ಲಿ ಭಾರೀ ಪ್ರಮಾಣದಲ್ಲಿ ಕಲ್ಲಿದ್ದಲನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.