Advertisement
ಕಡಲಾಳದಲ್ಲಿ ತೂಫಾನ್ ಎದ್ದು ನೀರಿನ ಬದಲಾವಣೆಯಿಂದಾಗಿ ವಿವಿಧ ಜಾತಿಯ ಮೀನುಗಳು ಕಡಲತೀರದತ್ತ ಧಾವಿಸುವುದು ವಾಡಿಕೆ. ಈ ಬಾರಿ ವಾಯು ಚಂಡಮಾರುತದ ಪ್ರಭಾವ ದಿಂದ ಉಂಟಾದ ತೂಫಾನ್ ಆಗಿದ್ದು ಬಿಟ್ಟರೆ ಮಳೆಗಾಲದಲ್ಲಿ ಉಂಟಾಗುವ ಸಾಮಾನ್ಯ ತೂಫಾನ್ ಏಳದಿರುವುದು ಮೀನುಗಾರರಲ್ಲಿ ನಿರಾಶೆ ಮೂಡಿಸಿದೆ.
Related Articles
Advertisement
ಜೂನ್ ತಿಂಗಳಿನಿಂದ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದ್ದರೂ ಇದೀಗ ಒಂದು ತಿಂಗಳು ಪೂರ್ಣ ಕೈ ತಪ್ಪಿದೆ. ಆ. 1ರಿಂದ ಯಾಂತ್ರಿಕ ಬೋಟ್‌ಗಳು ಸಮುದ್ರಕ್ಕೆ ಇಳಿಯಲಿವೆ. ಕಡಲು ಪ್ರಕ್ಷುಬ್ಧವಾಗಿದ್ದರಿಂದ ಕಳೆದ ವರ್ಷವೂ ಕೂಡ ಈ ಹೊತ್ತಲ್ಲಿ ನಾಡದೋಣಿಗಳಿಗೆ ಕಡಲಿಗಿಳಿಯಲು ಸಾಧ್ಯವಾಗಿರಲಿಲ್ಲ. ಎರಡು ತಿಂಗಳ ಅವಧಿಯ ಕೊನೆಯ 10 ದಿವಸದಲ್ಲಿ ಮೀನು ದೊರಕಿತ್ತು. ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಮಳೆಗೆ ಹೆಚ್ಚು ಪ್ರಾಧಾನ್ಯ. ಜೋರಾದ ಮಳೆಗೆ ನೆರೆ ನೀರು ಬಂದು ಸಮುದ್ರ ಸೇರಬೇಕು. ಸಿಹಿ ನೀರು ಸಮುದ್ರ ಸೇರಿದಾಗ ತಮಗೆ ಆಹಾರ ಸಿಗಬಹುದು ಎಂದು ಮೀನುಗಳು ಸಮುದ್ರ ತೀರ ಪ್ರದೇಶಕ್ಕೆ ಬರುತ್ತವೆ. ಇದರಿಂದ ನಾಡದೋಣಿ ಮೀನುಗಾರರಿಗೆ ಅನುಕೂಲ. ಈ ಬಾರಿಯ ಮಳೆ ತೀರ ಕಡಿಮೆಯಾದ್ದರಿಂದ ಇದುವರೆಗೂ ಅಂತಹ ವಾತಾವರಣವೇ ಸೃಷ್ಟಿಯಾಗಿಲ್ಲ ಎನ್ನುತ್ತಾರೆ ಮೀನುಗಾರರು.
ಬ್ಯಾಂಕ್ ಸಾಲ ಸಿಗುತ್ತಿಲ್ಲ
ಮಳೆಗಾಲದ ಅಲ್ಪಾವಧಿಯ ನಾಡ ದೋಣಿಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಯೋಜನೆ ಸಿಗುವುದಿಲ್ಲ. ಹಾಗಾಗಿ ಬಹುತೇಕ ದೋಣಿಯವರು ಇನ್ನಿತರ ಮೂಲಗಳಿಂದ ಸಾಲ ಪಡೆದೇ ಮೀನುಗಾರಿಕೆ ನಡೆಸುತ್ತಾರೆ. ನಿಗದಿತ ದಿನದಂದು ವಾಪಸ್ ಕೊಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಮೀನುಗಾರರು.
– ನಟರಾಜ್ ಮಲ್ಪೆ