Advertisement
ಪಂಜ ಗ್ರಾಮದ ಐವತ್ತೂಕ್ಲು ಪಲ್ಲೋಡಿ ಮನೆ ಮೀನಾಕ್ಷಿ ಅವರಿಗೆ ಹುಟ್ಟಿನಿಂದಲೇ ಕಾಲಿಗೆ ಸಂಬಂಧಿಸಿದ ಅಂಗವೈಕಲ್ಯವಿದೆ. ನಡೆದಾಡಲು ಕಷ್ಟ. ಕೆಲಸ ಮಾಡಲೂ ಆಗದ ಸ್ಥಿತಿ. ಗಂಡನೂ ಕೈಬಿಟ್ಟಿದ್ದಾರೆ. ಶಾಲೆಗೆ ಹೋಗುವ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಕುಟುಂಬಕ್ಕೆ ಸ್ವಂತ ನೆಲೆಯಿಲ್ಲ. ಹೀಗಾಗಿ, ಅಲೆದಾಡುತ್ತ, ಸಿಕ್ಕಲ್ಲಿ ಕೂಡಿ ಮಾಡುತ್ತಲೇ ತಾಯಿ ತನ್ನಿಬ್ಬರು ಮಕ್ಕಳನ್ನೂ ಸಾಕುತ್ತಿದ್ದಾರೆ.
ಅಂಗವೈಕಲ್ಯ ಇರುವುದು ಗೊತ್ತಿದ್ದೂ ತನ್ನನ್ನು ಮದುವೆಯಾಗಲು ಮುಂದಾದ ಆನಂದ ಗೌಡರ ಕುರಿತು ಈ ಮಹಿಳೆಗೆ ಹೆಮ್ಮೆ ಮತ್ತು ಗೌರವ ಇತ್ತು. ಆದರೆ, ಅದು ಬಹಳ ದಿನ ಉಳಿಯಲಿಲ್ಲ. ಮದುವೆ ಯಾಗಿ ಇಬ್ಬರು ಮಕ್ಕಳಾದ ಮೇಲೆ ಗಂಡ ಮದ್ಯವ್ಯಸನ ಅಂಟಿಸಿಕೊಂಡ. ಬಳಿಕ ಪತ್ನಿ, ಮಕ್ಕಳನ್ನು ಮರೆತು ತನ್ನ ಮನೆಯಲ್ಲೇ ಉಳಿದುಕೊಂಡ. ಕೂಲಿ ಕೆಲಸ
ಗಂಡನಿಂದ ದೂರವಾದ ಬಳಿಕ ಬೀದಿಗೆ ಬಿದ್ದ ಮೀನಾಕ್ಷಿ ಸುಬ್ರಹ್ಮಣ್ಯ, ಗುತ್ತಿಗಾರು ಮುಂತಾದ ಕಡೆಗಳ ಅಂಗಡಿ, ಹೊಟೇಲುಗಳಲ್ಲಿ ಕೂಲಿ ಕೆಲಸ ಮಾಡುತ್ತ ಗಂಡು ಮಕ್ಕಳಿಬ್ಬರನ್ನು ಸಾಕುತ್ತಿದ್ದಾರೆ. ಈಗಲೂ ಗುತ್ತಿಗಾರಿನ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪಕ್ಕದ ನಡುಗಲ್ಲು ಎಂಬಲ್ಲಿ ಗುಡಿಸಲಿನಂತಹ ಕೊಠಡಿ ಯೊಂದನ್ನು ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಗೆ ಪಡೆದು, ಅದರಲ್ಲಿ ಮಕ್ಕಳೊಂದಿಗೆ ವಾಸವಿದ್ದಾರೆ. ಮಕ್ಕಳಿಬ್ಬರು ಗುತ್ತಿಗಾರು ಪ್ರೌಢಶಾಲೆಗೆ ಹೋಗುತಿದ್ದು, ಓರ್ವ ಪುತ್ರ 10ನೇ ತರಗತಿ ಮತ್ತು ಮತ್ತೋರ್ವ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
Related Articles
ಪಂಜದ ಡಾ| ರಾಮಯ್ಯ ಭಟ್ ಅವರ ಸಲಹೆಯಂತೆ ಮೀನಾಕ್ಷಿ ಅವರು ಪಲ್ಲೋಡಿಯ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿ ಕೊಂಡಿದ್ದರು. ಅಂದು ತಾ.ಪಂ. ಸದಸ್ಯೆ ಭಾಗ್ಯಾ ಪ್ರಸನ್ನ 20,000 ರೂ. ಸಹಾಯ ಧನದ ಒದಗಿಸಿದ್ದು, ಆನಂತರ ಸಾಲ ಮಾಡಿ ಸಣ್ಣದೊಂದು ಶೆಡ್ ನಿರ್ಮಿಸಿಕೊಂಡಿದ್ದಾರೆ. ಶೆಡ್ ನಿರ್ಮಸಿದ ಅದೇ ಜಾಗಕ್ಕೆ 94ಸಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಪಡಿತರ ಚೀಟಿ, ಆಧಾರ್ ಕಾರ್ಡ್ ಇದೆ. 2008ರಿಂದ ಮನೆ ತೆರಿಗೆ ಪಾವತಿಸುತ್ತಿದ್ದಾರೆ. ಇಷ್ಟಿದ್ದರೂ ಶೋಷಿತ ಕುಟುಂಬಕ್ಕೆ ಇನ್ನೂ ಜಾಗದ ಹಕ್ಕುಪತ್ರ ಸಿಕ್ಕಿಲ್ಲ.
Advertisement
ಪುನರ್ವಸತಿ ಕಾರ್ಯಕರ್ತೆಮೀನಾಕ್ಷಿ ಅವರು ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯ ಕರ್ತೆಯೂ ಆಗಿದ್ದಾರೆ. ಈ ಸೇವೆಗಾಗಿ ಮಾಸಿಕ 3,000 ರೂ. ವೇತನ ದೊರಕುತ್ತದೆ. ಅಂಗವಿಕಲರ ಮಾಸಾಶನ 600 ರೂ. ಬರುತ್ತದೆ. ಇದು ಬಿಟ್ಟರೆ ಬೇರೆ ಆದಾಯವಿಲ್ಲ. ಮನವಿಗೂ ಸ್ಪಂದನೆ ಇಲ್ಲ
ಸ್ವಂತ ನಿವೇಶನಕ್ಕಾಗಿ ಮೀನಾಕ್ಷಿ ಅಂಗಲಾಚುತ್ತಿದ್ದಾರೆ. ಯು.ಟಿ. ಖಾದರ್ ಸಚಿವರಾಗಿದ್ದಾಗ ನಿವೇಶನ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಖಾದರ್ ಸೂಚಿಸಿದ್ದರು. ಅಂಗವಿಕಲರ ಪುನರ್ವಸತಿ ಕಲ್ಯಾಣ ಇಲಾಖೆಗೂ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅತ್ತೆ, ಮಾವ ಹಾಗೂ ತವರು ಮನೆಯ ಜತೆಗೆ ಮೀನಾಕ್ಷಿ ಅವರಿಗೆ ಒಳ್ಳೆಯ ಸಂಬಂಧವಿದೆ. ಎಳವೆಯಲ್ಲೆ ಅಪ್ಪ ತೀರಿಕೊಂಡಿದ್ದರು. ಮದುವೆ ಬಳಿಕವೂ ತವರು ಮನೆಯವರು ಸಾಕಷ್ಟು ಸಹಾಯ ಮಾಡಿದ್ದಾರೆ. ಗಂಡನ ದುರಭ್ಯಾಸದಿಂದ ಎಲ್ಲವನ್ನೂ ಕಳಕೊಂಡಿದ್ದೇನೆ. ಚಿನ್ನದಂತಹ ಇಬ್ಬರು ಮಕ್ಕಳಿದ್ದಾರೆ. ಅವರನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಬೇಕಿದೆ ಎಂದು ಮೀನಾಕ್ಷಿ ಹೇಳುತ್ತಾರೆ. ಪರಿಶೀಲನೆಗೆ ಸೂಚನೆ
ನೊಂದ ಕುಟಂಬಕ್ಕೆ ಹಕ್ಕುಪತ್ರ ದೊರಕದೆ ಇರುವುದಕ್ಕೆ ಕಾರಣಗಳ ಕುರಿತು ಸಂಬಂಧಿಸಿದ ಅಲ್ಲಿನ ಕಂದಾಯ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚಿಸಿದ್ದೇನೆ. ಮುಂದೆ ಏನು ಕ್ರಮ ಎನ್ನುವ ಬಗ್ಗೆ ತಿಳಿಸುವೆ.
– ಕುಂಞಿ ಅಹ್ಮದ್, ಸುಳ್ಯ ತಹಶೀಲ್ದಾರ್ ಮಕ್ಕಳದ್ದೇ ಚಿಂತೆ
ನೆಮ್ಮದಿಯ ನಿದ್ದೆ ಕಾಣದೆ ಅದೆಷ್ಟೋ ವರ್ಷಗಳೇ ಕಳೆದಿವೆ. ಅಂಗವಿಕಲರಾಗಿ ಯಾರೂ ಹುಟ್ಟಬಾರದು. ಹುಟ್ಟಿದರೂ ನನ್ನಂತೆ ನತದೃಷ್ಟರಾಗಿ ಬಾಳಬಾರದು. ಆರೋಗ್ಯ ಸಮಸ್ಯೆಯೂ ನನ್ನನ್ನು ಬಾಧಿಸುತ್ತಿದೆ. ನನ್ನೆರಡು ಮಕ್ಕಳಿಗಗತಿ ಏನು ಎನ್ನುವ ಚಿಂತೆ ನನ್ನನ್ನು ಕಾಡುತ್ತಿದೆ.
– ಮೀನಾಕ್ಷಿ, ಅಂಗವಿಕಲರ ಪುನರ್ವಸತಿ ಕಾರ್ಯಕರ್ತೆ - ಬಾಲಕೃಷ್ಣ ಭೀಮಗುಳಿ