ರಾಮನಗರ: ರಾಮನಗರದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ. ಮೈತ್ರಿ ಸರ್ಕಾರ ಅವಧಿಯಲ್ಲಿ ಕನಕಪುರಕ್ಕೆ ನಾನೇ ಮೆಡಿಕಲ್ ಕಾಲೇಜಿಗೆ 100 ಕೋಟಿ ಹಣ ಕೊಟ್ಟಿದ್ದೆ. ಡಿಕೆ ಶಿವಕುಮಾರ್ ಆಗ ವೈದ್ಯಕೀಯ ಸಚಿವರಾಗಿದ್ದರು. ಟೆಂಡರ್ ಕೊಟ್ಟಿದ್ದೂ ಕೂಡಾ ಇನ್ನೂ ಜೀವಂತವಾಗಿದೆ. ಆ ಬಳಿಕ ಬಿಜೆಪಿ ಸರ್ಕಾರ ಬಂದು ಕನಕಪುರಕ್ಕೆ ಕೊಟ್ಟಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಯಿತು. ಈಗ ನಿಮ್ಮದೇ ಸರ್ಕಾರ ಇದೆ. ನಾನು ಕೊಟ್ಟಿದ್ದ ಆ ಮೆಡಿಕಲ್ ಕಾಲೇಜಿಗೆ ಜೀವಕೊಡಿ. ಆದರೆ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ರಾಮನಗರಕ್ಕೆ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಬಂತು. ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಆಸ್ಪತ್ರೆ ಬೇಕೆಂದು ನಾನು ಕನಸು ಕಂಡಿದ್ದೆ. 600 ಕೋಟಿ ವೆಚ್ಚದಲ್ಲಿ ಹಿಂದಿನ ಸರ್ಕಾರ ಎರಡೂ ಸದನದಲ್ಲಿ ಅನುಮೋದನೆ ಕೊಟ್ಟಿತ್ತು. ಈಗ ಮೆಡಿಕಲ್ ಕಾಲೇಜು ಸ್ಥಳಾಂತರ ಸರಿಯಲ್ಲ. ಇದು ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತದೆ. ಜಿಲ್ಲಾ ಕೇಂದ್ರ ಬಿಟ್ಟು ಅಲ್ಲೆಲ್ಲೋ ಮೂಲೆಗೆ ಮೆಡಿಕಲ್ ಕಾಲೇಜು ಸ್ಥಳಾಂತರ ಅವೈಜ್ಞಾನಿಕ. ಹೀಗೆ ಆದರೆ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಗಳು ಬರಲ್ಲ ಎಂದರು.
ಇದನ್ನೂ ಓದಿ:Wedding: ತಾಳಿ ಕಟ್ಟುವ ವೇಳೆ ಮದುವೆ ಬೇಡವೆಂದು ಹಸೆಮಣೆಯಿಂದ ಮೇಲೆದ್ದ ವಧು
ರಾಮನಗರ ಜಿಲ್ಲಾ ಕೇಂದ್ರ, ಇಲ್ಲಿ ಮೆಡಿಕಲ್ ಕಾಲೇಜು ಬಂದರೆ ಸುತ್ತಮುತ್ತಲಿನ ತಾಲೂಕಿಗಳಿಗೂ ಅನುಕೂಲ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಬೇಕೇಬೇಕು ಅಂದರೆ ಅವರದ್ದೇ ಸರ್ಕಾರ ಇದೆ. ಹೊಸ ಕಾಲೇಜು ಮಂಜೂರು ಮಾಡಿಕೊಳ್ಳಲಿ. ಅದನ್ನು ಬಿಟ್ಟು ಇದ್ದ ಸ್ಥಳಾಂತರ ಮಾಡೋದು ರಾಮನಗರಕ್ಕೆ ಮಾಡಿದ ಅವಮಾನ ಎಂದರು.
ಮುಂದಿನ ಬಜೆಟ್ ನಲ್ಲಿ ರಾಮನಗರಕ್ಕೆ ಮೆಡಿಕಲ್ ಕಾಲೇಜು ಎಂಬ ಉಸ್ತುವಾರಿ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮುಂದಿನ ಬಜೆಟ್ ಮಂಡನೆ ಆಗದಿದ್ದರೆ? ಬಜೆಟ್ ನಲ್ಲಿ ತರುವುದು ಬೇರೆ ವಿಚಾರ. ಇಲ್ಲಿ ಮೆಡಿಕಲ್ ಕಾಲೇಜಿನ ಕೆಲಸ ಫ್ರಾರಂಭವಾಗಿದೆ. ಅದನ್ನ ನಿಲ್ಲಿಸಿ ಕನಕಪುರಕ್ಕೆ ಶಿಫ್ಟ್ ಮಾಡಬಾರದು ಎಂದರು.