Advertisement

“ಇನ್ನೂ ಸಮಯ ಇದೆ”: ಕಲಬುರಗಿ ಪಾಲಿಕೆ ಬೆಂಬಲ ವಿಚಾರದಲ್ಲಿ ಕುಮಾರಸ್ವಾಮಿ ನಡೆ ಇನ್ನೂ ನಿಗೂಢ

03:42 PM Sep 13, 2021 | Team Udayavani |

ಮಂಡ್ಯ: “ಇನ್ನೂ ಸಮಯ ಇದೆ. ಅವಸರವೇನಿಲ್ಲ” ಎನ್ನುವ ಮೂಲಕ ಕಲಬುರಗಿ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಯಾರಿಗೆ ಎಂಬ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೌಪ್ಯತೆ ಕಾಪಾಡಿದರು.

Advertisement

ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಲೇಟ್ ಮಂಚೇಗೌಡ ಕುಟುಂಬದಲ್ಲಿ ರಾಸುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಲಬುರಗಿ ಪಾಲಿಕೆಯಲ್ಲಿ ಮೇಯರ್ ಚುನಾವಣೆಗೆ ಇನ್ನೂ ಸಮಯವಿದೆ. ಈಗಲೇ ಏನು ಹೇಳುವುದಿಲ್ಲ ಎಂದು ಸುದ್ದಿಗಾರರಿಗೆ ಯಾವುದೇ ಮಾಹಿತಿ ಬಿಟ್ಟುಕೊಡಲಿಲ್ಲ.

ಶಾಸಕಾಂಗ ಸಭೆಯಲ್ಲಿ ಚರ್ಚೆ: ಇಂದಿನಿಂದ ಅಧಿವೇಶನ ಪ್ರಾರಂಭವಾಗಿದೆ. ಇಂದು ಅಧಿವೇಶನದಲ್ಲಿ ಯಾವುದೇ ಚರ್ಚೆಗಳು ನಡೆಯುವುದಿಲ್ಲ. ಕೇವಲ ಸಂತಾಪ ಸೂಚಕ ಸಭೆ ಮಾತ್ರ ಇದೆ. ನಾಳೆಯಿಂದ ಚರ್ಚೆಗಳು ಪ್ರಾರಂಭವಾಗಲಿದೆ. ಇಂದು ಜೆಡಿಎಸ್ ಶಾಸಕಾಂಗ ಸಭೆ ಕರೆದಿದ್ದು, ಅಧಿವೇಶನದಲ್ಲಿ ಯಾವ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಇದನ್ನೂ ಓದಿ:ಐದು ಬಾರಿ ಸಂಸದರಾಗಿ ಗೆಲುವು… ಆಸ್ಕರ್ ಕರಾವಳಿ ಪ್ರದೇಶದ ಜನಪ್ರಿಯ ರಾಜಕಾರಣಿಯಾಗಿದ್ರು…

Advertisement

ಸುಮಲತಾ ವಿರುದ್ಧ ವ್ಯಂಗ್ಯ: ಮಂಡ್ಯದಲ್ಲಿ ಅಕ್ರಮ ಜತೆಗೆ ಸಕ್ರಮ ಗಣಿಗಾರಿಕೆ ಸ್ಥಗಿತಗೊಂಡಿರುವ ಬಗ್ಗೆ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ಶಾಸಕರು ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಇದರಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಮೌನ ವಹಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ದೊಡ್ಡ ಸಾಮರ್ಥ್ಯ ಇರುವವರು ಇದ್ದಾರೆ ಎಂದು ಸಂಸದೆ ಸುಮಲತಾ ವಿರುದ್ಧ ವ್ಯಂಗ್ಯವಾಡಿದ ಅವರು, ಈ ಗೊಂದಲದಲ್ಲಿ ನಾನು ಮೂಗು ತೂರಿಸುವುದು ಸರಿಯಲ್ಲ. ಸಮರ್ಥರು ಈ ಜಿಲ್ಲೆಯಲ್ಲಿ ಇದ್ದಾರೆ ಅವರೇ ಸರಿಪಡಿಸಿಕೊಳ್ಳುತ್ತಾರೆ ಎಂದು ಜೆಡಿಎಸ್ ಶಾಸಕರು ಸಮರ್ಥರಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next