Advertisement

“ನಾಯಕರ ಮನೆಗಳ ಸುತ್ತಾಟ ಬೇಡ”: ಕಾರ್ಯಕರ್ತರಿಗೆ DCM ಡಿಕೆಶಿ ಖಡಕ್‌ ಸೂಚನೆ

12:09 AM May 22, 2023 | Team Udayavani |

ಬೆಂಗಳೂರು: ನಾಯಕರ ಮನೆಗಳ ಸುತ್ತ ಓಡಾಡಿಕೊಂಡಿರುವುದರಿಂದ ಏನೂ ಪ್ರಯೋಜನವಿಲ್ಲ. ಹಾಗೆಯೇ ಒಬ್ಬರ ಮುಂದೆ ಹೇಳಿದ್ದನ್ನು ಮತ್ತೂಬ್ಬರ ಮುಂದೆ ಚಾಡಿ ಹೇಳುವುದು ಸಲ್ಲದು. ಇದೆಲ್ಲವನ್ನೂ ಬದಿಗೊತ್ತಿ ನಮ್ಮ ಮುಂದೆ ಲೋಕಸಭೆ, ಪಾಲಿಕೆ ಚುನಾವಣೆಗಳಿವೆ. ಕಾರ್ಯಕರ್ತರು ಅದಕ್ಕೆ ಸನ್ನದ್ಧರಾಗಬೇಕು. ನಮ್ಮ ನಡುವೆ ಮಧ್ಯವರ್ತಿಗಳಾಗವುದು ಬೇಡ…- ಪಕ್ಷದ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ ಖಡಕ್‌ ಸೂಚನೆ ಇದು.

Advertisement

ನಗರದ ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿ, ನಾಯಕರ ಮನೆಗಳ ಸುತ್ತ ಓಡಾಡಿಕೊಂಡಿರುವುದರಿಂದ ಏನೂ ಉಪಯೋಗ ಆಗದು. ಬದಲಿಗೆ ಜನರ ಮನೆ-ಮನೆಗೆ ಹೋಗಿ ಲೋಕಸಭೆ ಚುನಾವಣೆಗೆ ಕೆಲಸ ಮಾಡಿ. ನೀವು ಹುಲ್ಲುಕಡ್ಡಿಯಂತಿದ್ದರೂ ನಿಮಗೆ ಅಧಿಕಾರ ಸಿಗಬೇಕಾದಾಗ ಸಿಕ್ಕೇ ಸಿಗುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗಲಿದೆ’ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗಾಂಧಿ ಕುಟುಂಬದವರು ನಮಗೆ ನೀಡಿರುವ ಸಲಹೆಯೇ ನಮಗೆ ವೇದವಾಕ್ಯ. ದೇಶವೇ ರಾಜ್ಯವನ್ನು ನೋಡುತ್ತಿದೆ. ಈ ಫ‌ಲಿತಾಂಶ ಇಡೀ ದೇಶಕ್ಕೆ ರವಾನೆಯಾಗಿರುವ ಸಂದೇಶ. ಈ ಗೆಲುವನ್ನು ಜಮ್ಮು ಕಾಶ್ಮೀರ, ಲಡಾಕ್‌, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸಂಭ್ರಮಿಸುತ್ತಿ¨ªಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.

ಅಧಿಕಾರ ಮುಖ್ಯವಲ್ಲ, ನಂಬಿಕೆ ಮುಖ್ಯ
ನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಗುವುದು ಮುಖ್ಯವಲ್ಲ; ನಮ್ಮ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಂಡು ಹೋಗುವುದು ಮುಖ್ಯ. ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ನಿರ್ಮಾಣ ಮಾಡುವುದು ನಮ್ಮ ಗುರಿ. ನಾವು ಬಿಜೆಪಿ ಹಾಗೂ ಜೆಡಿಎಸ್‌ ಅವರ ವಿಚಾರಕ್ಕೆ ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಆವಶ್ಯಕತೆ ಇಲ್ಲ. ವಿಪಕ್ಷಗಳು ಟೀಕೆ ಮಾಡುತ್ತಲೇ ಇರಲಿ, ನಾವು ನಮ್ಮ ಕೆಲಸ ಮಾಡೋಣ. ಜನರ ನಂಬಿಕೆ ಉಳಿಸಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ರಾಜ್ಯದ ಅಭಿವೃದ್ಧಿ ಮಾಡೋಣ. ನಮಗೆ ದ್ವೇಷ, ಅಸೂಯೆ ಬೇಡ. ನಾವು ಕಾಂಗ್ರೆಸ್‌ ಬರಲಿದೆ, ಪ್ರಗತಿ ತರಲಿದೆ ಎಂಬ ಸಂಕಲ್ಪ ಮಾಡಿ¨ªೆವು. ಅದನ್ನು ಸಾಕಾರ ಮಾಡೋಣ” ಎಂದು ಹೇಳಿದರು.

ನಮ್ಮ ಮುಂದೆ ಲೋಕಸಭೆ, ಪಾಲಿಕೆ ಚುನಾವಣೆಯ ಮಹತ್ವದ ಜವಾಬ್ದಾರಿ ಇದೆ. ಇಂದು 135 ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿರಬಹುದು ಆದರೂ ನನಗೆ ತೃಪ್ತಿ ಇಲ್ಲ. ಕಾರ್ಯಕರ್ತರು ಶಕ್ತಿಶಾಲಿ ಆಗಬೇಕು. ಬೂತ್‌ ಮಟ್ಟದ ಕಾರ್ಯಕರ್ತರ ಧ್ವನಿ ಗಟ್ಟಿಯಾಗಿದ್ದರೆ ಮಾತ್ರ ನೀವು ನಾಯಕರಾಗುತ್ತೀರಿ’ ಎಂದರು.

Advertisement

ಡೋಂಟ್‌ ಡಿಸ್ಟರ್ಬ್…!’
ಪ್ಲೀಸ್‌ ಡೋಂಟ್‌ ಡಿಸ್ಟರ್ಬ್’ ಎಂದು ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ಗದರಿದ ಪ್ರಸಂಗ ನಡೆಯಿತು. ರಾಜೀವ್‌ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತಾವು ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪಕ್ಕದಲ್ಲಿ ಎಂ.ಬಿ. ಪಾಟೀಲ್‌ ಕುಶಲೋಪರಿ ನಡೆಸಿದ್ದರು. ಇದು ಡಿ.ಕೆ. ಶಿವಕುಮಾರ್‌ ಅವರಿಗೆ ತುಸು ಕಿರಿಕಿರಿಯೆನಿಸಿ ಪ್ಲೀಸ್‌ ಡೋಂಟ್‌ ಡಿಸ್ಟರ್ಬ್’ ಎಂದರು. ಇದಕ್ಕೆ ಸಮಜಾಯಿಷಿ ನೀಡಲು ಸಚಿವರು ಮುಂದಾದರೂ, ಅದೇನೇ ಇರಲಿ, ಡೋಂಟ್‌ ಡಿಸ್ಟರ್ಬ್. ಇಲ್ಲಿ ನೀಡಬೇಕಾದ ಸಂದೇಶ ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next