Advertisement

ಉಡುಪಿಯಲ್ಲಿ ಕಟ್ಟೆಚ್ಚರ; ಮಂಗಳೂರಿಗೆ ಖಾಸಗಿ, ಸರಕಾರಿ ಬಸ್‌ ಸೇವೆ ಸ್ಥಗಿತ

12:45 AM Dec 21, 2019 | mahesh |

ಉಡುಪಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಶುಕ್ರವಾರ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಮಂಗಳೂರಿನಲ್ಲಿ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿಯಿಂದ ಮಂಗಳೂರಿಗೆ ತೆರಳುವ ಬಸ್‌ಗಳ ಸಂಚಾರ ಮೊಟಕುಗೊಳಿಸಲಾಗಿತ್ತು.

Advertisement

ಬಸ್‌ ಸಂಚಾರ ಮೊಟಕು
ಮಂಗಳೂರಿನಲ್ಲಿ ಗಲಭೆ ಮತ್ತು ಕರ್ಫ್ಯೂನಿಂದಾಗಿ ಮಂಗಳೂರು ಮಾರ್ಗದ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳ ಸಂಚಾರ ನಿಷೇಧಿಸಿದ್ದು, ಶುಕ್ರವಾರ ಬೆಳಗ್ಗೆ 5.30ಕ್ಕೆ ಉಡುಪಿಯಿಂದ ಮಂಗಳೂರಿಗೆ ತೆರಳಿದ ಎಕ್ಸ್‌ ಪ್ರಸ್‌ ಬಸ್‌ವೊಂದು ಕೊಟ್ಟಾರ ಚೌಕಿವರೆಗೆ ಹೋಗಿ ಹಿಂದಿರುಗಿದೆ. ಉಡುಪಿ- ಮಂಗಳೂರು, ಭಟ್ಕಳ -ಮಂಗಳೂರು, ಮಣಿಪಾಲ- ಮಂಗಳೂರು ಮಾರ್ಗದ ಸುಮಾರು 20 ಬಸ್‌ಗಳ ಸೇವೆಯನ್ನು ಕೆಎಸ್‌ಆರ್‌ಟಿಸಿ ರದ್ದುಗೊಳಿಸಿದೆ.

ಮಾರ್ಗ ಬದಲಾವಣೆ
ಬೈಂದೂರು, ಕುಂದಾಪುರ, ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಬಸ್‌ಗಳು ಹಾಗೂ ಇತರ ವಾಹನಗಳು ಧರ್ಮಸ್ಥಳ ಮಾರ್ಗವಾಗಿ ಬೆಂಗಳೂರು ತಲುಪಲಿದೆ.

ಪ್ರಯಾಣಿಕರ ಪರದಾಟ
ಬಸ್‌ ಸೇವೆ ಸ್ಥಗಿತಗೊಳಿಸಿರುವುದ ರಿಂದ ಮಂಗಳೂರು ಮಾರ್ಗವಾಗಿ ವಿವಿಧ ಕಡೆಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು. ಉಡುಪಿಯಿಂದ ಪಡುಬಿದ್ರಿ ವರೆಗೆ ಕೆಲವು ಲೋಕಲ್‌ ಬಸ್‌ಗಳು ಸಂಚರಿಸಿವೆ.

ಗಂಗೊಳ್ಳಿಯಲ್ಲಿ ಅಂಗಡಿ ಬಂದ್‌
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿಲ್ಲ. ಮಂಗಳೂರಿನಲ್ಲಿ ಗಲಭೆಯ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ರಾಜ್ಯ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಮೊಕ್ಕಾಂ ಹೂಡಿ ಕಟ್ಟೆಚ್ಚರ ಕಾಪಾಡಿಕೊಂಡಿವೆ.

Advertisement

ಗಂಗೊಳ್ಳಿಯಲ್ಲಿ ಶಾಂತಿಯುತ ಬಂದ್‌
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರ ಖಂಡಿಸಿ, ಘರ್ಷಣೆಯಲ್ಲಿ ಮೃತಪಟ್ಟ ಇಬ್ಬರಿಗೆ ಸದ್ಗತಿ ಕೋರಿ ಗಂಗೊಳ್ಳಿಯಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರು ಸ್ವಯಂಪ್ರೇರಿತರಾಗಿ ಅಂಗಡಿ – ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರು. ಅಂಗಡಿ, ಹೋಟೆಲ್‌, ಮೀನಿನ ವ್ಯಾಪಾರ, ಕಾರು, ರಿಕ್ಷಾ ಮತ್ತು ಇನ್ನಿತರ ವಾಹನಗಳಲ್ಲಿ ಬಾಡಿಗೆ ಮಾಡುವುದನ್ನು ಕೂಡ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿದ್ದರು. ಇದನ್ನು ಹೊರತುಪಡಿಸಿ ಬಾಕಿ ಉಳಿದಂತೆ ಎಲ್ಲ ವ್ಯಾಪಾರ – ವಹಿವಾಟು, ಮೀನುಗಾರಿಕೆ ಚಟುವಟಿಕೆ ಎಂದಿನಂತೆ ನಡೆಯಿತು. ಜನಸಂಚಾರ ವಿರಳವಾಗಿತ್ತು.

ಬಿಗಿ ಬಂದೋಬಸ್ತ್
ಸೂಕ್ಷ್ಮ ಪ್ರದೇಶವಾದ ಗಂಗೊಳ್ಳಿ ಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಭದ್ರತೆ ವಹಿಸಲಾಗಿದೆ. ಜಿಲ್ಲಾ ಮೀಸಲು ಪಡೆಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಡಿಶನ್‌ ಎಸ್‌ಪಿ ಕುಮಾರಚಂದ್ರ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದರು. ಸ್ಥಳದಲ್ಲಿ ಕುಂದಾಪುರ ಎಎಸ್‌ಪಿ ಹರಿರಾಮ್‌ ಶಂಕರ್‌ ಅವರು ಮೊಕ್ಕಾಂ ಹೂಡಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಧರ್ಮದ ಮುಖಂಡರೊಂದಿಗೆ ಮಾತುಕತೆ ನಡೆಸಿ ಶಾಂತಿ ಕಾಪಾಡಲು ಮನವಿ ಮಾಡಲಾಗಿದೆ. ನಗರದ ಪ್ರಮುಖ ಸ್ಥಳದಲ್ಲಿ ರಕ್ಷಣಾ ಸಿಬಂದಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಚೆಕ್‌ಪೋಸ್ಟ್‌ ಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
-ನಿಶಾ ಜೇಮ್ಸ್‌, ಎಸ್ಪಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next