ಕುಂದಾಪುರ: ಕಳೆದ ಹಲವು ತಿಂಗಳುಗಳಿಂದ ಸರಿಯಾಗಿ ಕಾರವಾರ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಕುಂದಾಪುರ ನಿಲ್ದಾಣಕ್ಕೆ ಬರುವ ಹೊತ್ತಲ್ಲೇ ವಿದ್ಯುತ್ ನಿಲುಗಡೆಯಾಗುವುದರ ಜತೆಗೆ ವಿದ್ಯುತ್ ಇದ್ದಾಗಲೂ ನಿಲ್ದಾಣದ ಎಲ್ಲ ದೀಪಗಳನ್ನು ಉರಿಸದೆ ಕಗ್ಗತ್ತಲಲ್ಲಿ ಇರುವುದು ಕಂಡು ಬರುತ್ತಿದೆ. ಪ್ರಯಾಣಿಕರಿಂದ ಪ್ರತಿ ನಿತ್ಯ ರೈಲು ಹಿತರಕ್ಷಣ ಸಮಿತಿ ಕುಂದಾ ಪುರಕ್ಕೆ ದೂರುಗಳ ಸುರಿಮಳೆಯಾಗುತ್ತಿದೆ.
ಫಲವಿಲ್ಲ:
ಕರಾವಳಿಗರು ಭೂಮಿ ತ್ಯಾಗ ಮಾಡಿ, ರಾಷ್ಟ್ರ ನಿರ್ಮಾಣದ, ರೈಲ್ವೇ ಒಂದು ಸೇವೆ ಎಂಬ ಕನಸಿನೊಂದಿಗೆ ಜಾರ್ಜ್ ಫೆರ್ನಾಂಡಿಸ್ ಮೂಲಕ ಕಟ್ಟಿದ ಕೊಂಕಣ ರೈಲ್ವೇ ಲಾಭದ ಉದ್ದೇಶದಿಂದಾಗಿ, ಸಂಪೂರ್ಣ ವ್ಯವಸ್ಥೆ ಹಳಿ ತಪ್ಪಿದೆಯೇ ಎಂಬ ಸಂಶಯ ಇದೀಗ ಆರಂಭವಾಗಿದೆ. ಪ್ರತೀ ನಿತ್ಯ ಪ್ರಯಾಣಿಕರಿಂದ ಬರುವ ದೂರುಗಳನ್ನು ನಿರ್ಲಕ್ಷಿಸುವುದನ್ನು ಗಮನಿಸಿದರೆ ಯಾವುದೋ ಲಾಬಿಯ ಜತೆ ನಿಗಮದ ಆಡಳಿತ ಶಾಮೀಲಾದ ಸಂಶಯ ಮೂಡುತ್ತಿದೆ. ಕಳೆದ ಹಲವು ವರ್ಷಗಳಿಂದ ಬೇರೆ ಬೇರೆ ಮಾರ್ಗಗಳ ಮೂಲಕ ಕುಂದಾಪುರ ನಿಲ್ದಾಣದ ಕಗ್ಗತ್ತಲ ಸಮಸ್ಯೆಗೆ ಪರಿಹಾರಕ್ಕೆ ಒತ್ತಾಯಿಸಿದರೂ, ಕೊಂಕಣ ರೈಲ್ವೇ ಆಡಳಿತ ನಿರ್ದೇಶಕರ ಕಳಪೆ ಆಡಳಿತದ ಸೂಚನೆಯ ಪರಿಣಾಮ, ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುತ್ತಾ 30 ಶೇ. ವಿದ್ಯುತ್ ಬಳಕೆ ಇತ್ಯಾದಿ ನೆಪ ಹೇಳಿ ಇಡೀ ಕುಂದಾಪುರ ನಿಲ್ದಾಣದ ಬಹು ಭಾಗ ಕತ್ತಲ ಕೂಪವಾಗಿ ಕೊಂಕಣ ರೈಲ್ವೇ ಮಾರ್ಪಡಿಸಿದೆ ಎಂದು ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.
ಹಾರಿಕೆಯ ಉತ್ತರ:
ಪ್ರತೀ ಬಾರಿಯೂ ಇಂತಹ ಸಮಸ್ಯೆಗಳ ಬಗ್ಗೆ ದೂರು ಬಂದಾಗ, ಎಲ್ಲಾ ನಿಲ್ದಾಣಗಳಲ್ಲಿ ಕೂಡಾ ಏಕ ರೂಪದಲ್ಲಿ ರೈಲು ಬರುವ 15 ನಿಮಿಷ ಮುಂಚೆ ಬೆಳಕು ಹಾಕುವ ನಿಯಮ ಇದೆ ಎಂಬ ಸಿದ್ಧ ಉತ್ತರ ಕೊಡುವ ಕೊಂಕಣ ರೈಲ್ವೇ, ಯಾಕಾಗಿ ಇಡೀ ಕುಂದಾಪುರ ನಿಲ್ದಾಣ ಪ್ರತೀ ರಾತ್ರಿ ಕತ್ತಲೆಯಲ್ಲಿ ಮುಳುಗಿ ಹೋಗುತ್ತದೆ ಮತ್ತು ವಿದ್ಯುತ್ ಇಲ್ಲದಾಗ ಪರ್ಯಾಯ ವ್ಯವಸ್ಥೆ ಮಾಡುವ ಕೆಲವನ್ನೂ ಮಾಡದೇ ಇರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ ಎನ್ನುವುದು ಯಾತ್ರಿಕರ ಆಕ್ರೋಶ. ಈ ಬಗ್ಗೆ ಈ ಹಿಂದೆಯೂ ಪತ್ರಿಕೆ ವರದಿ ಮಾಡಿದೆ.
ಬೆಳಕಿನ ವ್ಯವಸ್ಥೆ :
30 ವರ್ಷಗಳ ಅಸ್ತಿತ್ವ ಹೊಂದಿರುವ ಕೊಂಕಣ ರೈಲ್ವೇ ಬಳಿ ಪ್ರಯಾಣಿಕರ ಸೇವೆಗೆ ವಿದ್ಯುತ್ ನಿಲುಗಡೆಯಾದಾಗ ಒಂದು ಜನರೇಟರ್ ಕೂಡಾ ಇಲ್ಲವೇ ಎಂಬ ಪ್ರಶ್ನೆ ಇದ್ದು, ಇಷ್ಟು ಕಳಪೆ ಸೇವೆ ನಿಡುವ ನಿಗಮ ಯಾಕಾಗಿ ಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ. ತೀರಾ ಇತ್ತೀಚೆಗೆ ಕಾರವಾರ ವಿಭಾಗದ ರೈಲ್ವೇ ಮ್ಯಾನೇಜರ್ ಬಿ.ಬಿ. ನಿಕ್ಕಮ್ ತಮ್ಮ ವೈಯಕ್ತಿಕ ಶ್ರಮದಿಂದ ಹೈ ಮಾಸ್ಟ್ ಬೆಳಕಿನ ವ್ಯವಸ್ಥೆ ಮಾಡಿದ್ದರೂ, ನಿಗಮದ ವಾರ್ಷಿಕ ಬಜೆಟ್‌ನಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಕುಂದಾಪುರ ನಿಲ್ದಾಣಕ್ಕೆ ರೂಪಿತವಾಗಿಲ್ಲ ಎನ್ನುವುದು ಗಮನೀಯ.
ರೈಲ್ವೇ ಇರುವುದು ಸೇವೆಗಾಗಿ. ಲಾಭ ನಷ್ಟ ಅನಂತರದ ಲೆಕ್ಕಾಚಾರ. ಪ್ರಯಾಣಿಕರಿಗೆ ಕನಿಷ್ಠ ಮೂಲ ಸೌಲ ಭ್ಯ ವನ್ನು ಕೊಡಲಾಗದಿದ್ದರೆ, ಅದಕ್ಕೂ ನಷ್ಟದ ನೆಪ ಹೇಳುವುದಾದರೆ, ಕೊಂಕಣ ನಿಗಮವೇ ಭಾರತೀಯ ರೈಲ್ವೇ ಜತೆ ವಿಲೀನವಾಗಲಿ. ಹಾಗೆಯೇ ನಿಗಮದ ಆಡಳಿತ ನಿರ್ದೇಶಕರ ಜನ ವಿರೋಧಿ ನಡೆ ಬದಲಾಗದಿದ್ದರೆ ಅವರ ವಿರುದ್ಧ ಸಿಬಿಐ ತನಿಖೆಗೆ ಪ್ರಧಾನ ಮಂತ್ರಿಗಳನ್ನು ಆಗ್ರಹಿಸಲಾಗುವುದು.
-ಗಣೇಶ್ ಪುತ್ರನ್,ರೈಲು ಹಿತರಕ್ಷಣ ಸಮಿತಿ ಅಧ್ಯಕ್ಷರು