Advertisement

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ

09:33 PM Feb 04, 2020 | Lakshmi GovindaRaj |

ತುಮಕೂರು: ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ, ಚುನಾವಣೆಗೆ ಮೂರು ತಿಂಗಳಿದ್ದಾಗ ರಾಜಕಾರಣ ಮಾಡೋಣ ಈಗ ಅಭಿವೃದ್ಧಿಗೆ ಗಮನ ಹರಿಸೋಣ, ಈಗಿನ ವಾತಾವರಣ ನೋಡಿದರೆ ಇನ್ನು 3-4 ತಿಂಗಳಲ್ಲಿ ಮತ್ತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಹೇಳಿದರು.

Advertisement

ತಾಲೂಕಿನ ಹೊನ್ನುಡಿಕೆ ಸರ್ಕಾರಿ ಶಾಲೆ ವಾರ್ಷಿಕೋತ್ಸವ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಮೈತ್ರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ತಂದು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಶಾಲೆ ದತ್ತು ಪಡೆಯಲಾಗುವುದು: ಶಿಥಿಲಗೊಂಡಿದ್ದ ಶಾಲೆಯನ್ನು ಅಭಿವೃದ್ಧಿಪಡಿಸುವಂತೆ ಕಳೆದ ವಾರ್ಷಿಕೋತ್ಸವದಲ್ಲಿ ಶಾಲೆಯ ಶಿಕ್ಷಕರು ಮನವಿ ಮಾಡಿದ್ದರು, ಅದರಂತೆ ಶಾಲೆಗೆ ಮೂರು ಹೊಸ ಕಟ್ಟಡಗಳನ್ನು ಒಂದೇ ವರ್ಷದಲ್ಲಿ ಅಭಿವೃದ್ಧಿಪಡಿಸಿ ಉದ್ಘಾಟಿಸಲಾಗಿದೆ. ಹೊನ್ನುಡಿಕೆ ಸರ್ಕಾರಿ ಶಾಲೆಯನ್ನು ದತ್ತುಪಡೆದು ವಿಶೇಷವಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

ಖಾಸಗಿ ಶಾಲೆಗಳಿಗೆ ಪೈಪೋಟಿ: ಖಾಸಗಿ ಕಂಪನಿಗಳ ಸಿಎಸ್‌ಆರ್‌ ಫ‌ಂಡ್‌ ಪಡೆದು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಸಂಸ್ಥೆಗಳೊಂದಿಗೆ ಮಾತನಾಡಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಹೈಟೆಕ್‌ ಶಾಲೆಯನ್ನು ನಿರ್ಮಾಣ ಮಾಡುತ್ತೇವೆ, ಶಾಸಕನಾಗಿ ಆಯ್ಕೆಯಾಗುವ ಮುಂಚೆ ನೀಡಿದ್ದ ಭರವಸೆಯನ್ನು ಈಡೇರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೋಟಿ ರೂ. ಅನುದಾನ: ಶಾಸಕನಾಗಿ ಆಯ್ಕೆಯಾದ ಮೇಲೆ ಸಾಸಲು-ಚಿಕ್ಕಕೊರಟಗೆರೆ ರಸ್ತೆಗೆ 11 ಕೋಟಿ, ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ ರಸ್ತೆ ಕಾಮಗಾರಿಗೆ 2 ಕೋಟಿ ಕಾಮಗಾರಿ, ಹೊಳವನಹಳ್ಳಿಯಿಂದ ಕುಣಿಗಲ್‌ ರಸ್ತೆಗೆ 1.5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹೊನ್ನಾದೇವಿ ದೇಗುಲದ ರಸ್ತೆ ಅಭಿವೃದ್ಧಿಗೊಳಿಸಲು ಅನುದಾನ ನೀಡಿದ್ದು ನಾನು, ಅದರಂತೆ ಕೆಲಸ ಮಾಡಲಾಗಿದೆ, ಹೊನಸಿಗೆರೆ, ಮಸ್ಕಲ್‌, ಹೊನ್ನುಡಿಕೆ ಗ್ರಾಮಗಳಿಗೆ ತಲಾ ಕೋಟಿ ರೂ. ಅನುದಾನವನ್ನು ತರಲಾಗಿದೆ ಎಂದರು.

Advertisement

38 ಕೊಳವೆ ಬಾವಿ: ನರುಗನಹಳ್ಳಿಗೆ 1.50. ಕೋಟಿ, ರಂಭಾಪುರ, ಬೇಗೂರು, ನಾಗವಲ್ಲಿ ಸರ್ಕಾರಿ ಕಾಲೇಜು, ಚೋಳಂಬಳ್ಳಿ, ವಡ್ಡರಹಳ್ಳಿ, ಲಕ್ಷ್ಮಿಪುರ, ಹೊನ್ನೇನಹಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ, ಚಿಕ್ಕಪುರ, ಲಕ್ಕೇನಹಳ್ಳಿ,ರಾಮನಹಳ್ಳಿ, ತೊಂಡಗೆರೆಯಲ್ಲಿ ಶುದ್ಧ ಕುಡಿಯುವ ನೀರು ಘಟಕ, ಹೊನ್ನುಡಿಕೆ ಜಿ.ಪಂ.ವ್ಯಾಪ್ತಿಯಲ್ಲಿ 38 ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ತಿಳಿಸಿದರು.

ಶೀಘ್ರ ಬಡವರಿಗೆ ನಿವೇಶನ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಎಲ್ಲ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗಿದೆ. ಸರ್ಕಾರದಿಂದ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಶ್ರೀಘ್ರದಲ್ಲಿ ಎಲ್ಲ ಬಡವರಿಗೆ ಮನೆ ಹಾಗೂ ನಿವೇಶನವನ್ನು ವಿತರಿಸುವ ಕೆಲಸ ಮಾಡಲಾಗುವುದು ಎಂದು ನುಡಿದರು.

ಪಕ್ಷ ಭೇದ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ: ಗ್ರಾಮಾಂತರ ಕ್ಷೇತ್ರದ 12 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ಕೊಡಿಸಲಾಗಿದ್ದು, ಅವರ ಸ್ವಸಾರ್ಮಥ್ಯದ ಮೇಲೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದಂತೆ ಆಗಿದೆ, ಚುನಾವಣೆ ಮುಂಚೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬದ್ಧನಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಭೇದ ಬಿಟ್ಟು ಸಹಕರಿಸುವಂತೆ ಮನವಿ ಮಾಡಿದರು. ಜೆಡಿಎಸ್‌ ಗ್ರಾಮಾಂತರ ಅಧ್ಯಕ್ಷರಾದ ಹಾಲನೂರು ಅನಂತ್‌ಕುಮಾರ್‌, ನರುಗನಹಳ್ಳಿ ವಿಜಯ್‌ಕುಮಾರ್‌, ಸೇರಿದಂತೆ ಎಪಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯ್ತಿ ಸದಸ್ಯರು, ವಿಎಸ್‌ಎಸ್‌ಎನ್‌ ಸದಸ್ಯರು ಸೇರಿದಂತೆ ಇತರರು ಇದ್ದರು.

ಕ್ಷೇತ್ರದ ಅಭಿವೃದ್ಧಿ ಮೊದಲ ಆದ್ಯತೆ: ಚುನಾವಣೆಗೆ ಮುಂಚೆ ಈ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು ಅದರಂತೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ, ಈಗ ರಾಜಕೀಯ ಮಾಡುವ ಸಮಯವಲ್ಲ ರಾಜಕೀಯ ಮಾಡುವುದು ಚುನಾವಣೆ ಬಂದಾಗ ಈಗ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ಶಾಸಕ ಡಿ.ಸಿ.ಗೌರೀಶಂಕರ್‌ ತಿಳಿಸಿದರು.

ಸರ್ಕಾರಿ ಶಾಲೆಗಳು ಹೈಟಕ್‌ ಶಾಲೆಗಳಾಗಬೇಕು, ಆ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸುತ್ತೇವೆ, ಖಾಸಗೀ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳು ತಮ್ಮ ಕಾರ್ಯಚಟುವಟಿಕೆ ಮಾಡಬೇಕು, ಖಾಸಗಿ ಕಂಪನಿಗಳ ಸಿಎಸ್‌ಆರ್‌ ಫ‌ಂಡ್‌ ಪಡೆದು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಸಂಸ್ಥೆಗಳೊಂದಿಗೆ ಮಾತನಾಡಿದ್ದು, ಕ್ಷೇತ್ರದಲ್ಲಿ ಹೈಟೆಕ್‌ ಶಾಲೆಯನ್ನು ನಿರ್ಮಾಣ ಮಾಡುತ್ತೇವೆ.
-ಡಿ.ಸಿ.ಗೌರಿಶಂಕರ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next