ಉಡುಪಿ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆಯನ್ನು ಇಳಿಕೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ನಾಳೆಯಿಂದ (ಮೇ.25) ಜೂನ್ 7ರವರೆಗೆ ಯಾವುದೇ ಮದುವೆ ಸಮಾರಂಭಗಳಿಗೆ ಅವಕಾಶ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಇಂದು ನಡೆದ ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವರ ಜೊತೆ ಸಭೆ ಮಾಡಿದ್ದೇವೆ. ಮದುವೆ ಸಮಾರಂಭಗಳ ಬಳಿಕ ಕೋವಿಡ್ ಪ್ರಕರಣಗಳು ಕಂಡು ಬರುತ್ತಿದೆ. ಹೀಗಾಗಿ ಮದುವೆಗೆ ಇಂದು ಸಂಜೆಯವರೆಗೆ ನೀಡಲಾದ ಅನುಮತಿ ಮಾತ್ರ ಮಾನ್ಯವಾಗಿರುತ್ತದೆ. ಜೂ.7ರವರೆಗೆ ಮದುವೆ ಸಮಾರಂಭಗಳಿಗೆ ಅನುಮತಿ ಇಲ್ಲ. ನಿಶ್ಚಿತಾರ್ಥ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದರು.
ಮಹೆಂದಿ, ಬೀಗರೂಟ ಮುಂತಾದ ಕಾರ್ಯಕ್ರಮ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಕಾರ್ಯಕ್ರಮದಲ್ಲಿ ಯಾರು ಭಾಗವಹಿಸಿದ್ದಾರೆ ಅವರಿಗೂ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದರು.
ಗಾಳಿ ಮಳೆಯಿಂದ ಎಲೆಕ್ಟ್ರಿಕಲ್ ವಸ್ತುಗಳು ಹಾಳಾಗಿವೆ, ಹಾಗಾಗಿ ಅನುಮತಿ ನೀಡಬೇಕು ಎಂದು ಹಲವು ಮನವಿ ಮಾಡಿದ್ದಾರೆ. ಹಾಗಾಗಿ ಕೇವಲ ಎಲೆಕ್ಟ್ರಿಕಲ್ ( ಎಲೆಕ್ಟ್ರಾನಿಕ್ ಅಲ್ಲ) ಅಂಗಡಿಗಳಿಗೆ ಬುಧವಾರ 6ರಿಂದ 10 ಗಂಟೆಯವರಿಗೆ ಅವಕಾಶ ನೀಡಿದ್ದೇವೆ. ಮತ್ತೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಜೂ.7ರವರೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಯಾರಾದರೂ ಹೋದರೆ ಅಂತವರ ವಾಹನಗಳನ್ನು ವಶಕ್ಕೆ ಪಡೆಯುತ್ತೇವೆ. ಅಗತ್ಯ ವಸ್ತುಗಳ ನೆಪದಲ್ಲಿ ಅನಗತ್ಯವಾಗಿ ತಿರುಗಾಡಬೇಡಿ ಎಂದು ಡಿಸಿ ಜಿ. ಜಗದೀಶ್ ಹೇಳಿದರು.