Advertisement

ಯಾರಿಗೂ ಬೇಡವಾದ 10 ಕೋಟಿ ದೇವರ ಹುಂಡಿ ಸೇರಿತು!

06:00 AM Dec 02, 2017 | |



Advertisement

ಬೆಂಗಳೂರು: ನೋಟು ಅಮಾನ್ಯಿಕರಣ ಆಗಿ ಒಂದು ವರ್ಷ ಕಳೆದಿದೆ. ಆದರೆ, ನಂತರ ರಾಜ್ಯದ ದೇವಸ್ಥಾನಗಳಿಗೆ ನಿಷೇಧಿತ ಸಾವಿರ ಹಾಗೂ ಐನೂರು ರೂಪಾಯಿ ನೋಟಿನ ಕಾಣಿಕೆ ಮಾತ್ರ ಇನ್ನೂ ನಿಂತಿಲ್ಲ. ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಸುಮಾರು 10 ಕೋಟಿ ರೂಪಾಯಿಯಷ್ಟು ಅಪಮೌಲ್ಯಗೊಂಡ ನೋಟು ದೇವರ ಹುಂಡಿ ಸೇರಿದೆ.

ಇದು ಬರೀ ರಾಜ್ಯ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಲೆಕ್ಕಾಚಾರ ಮಾತ್ರ! ದೇವರ ಹುಂಡಿಯಲ್ಲಿ ದೊರೆತ ಕಪ್ಪು ಹಣವನ್ನು ಬಿಳಿ ಮಾಡಲು ರಾಜ್ಯ ಸರ್ಕಾರ ಈಗ ಆರ್‌ಬಿಐ ಮೊರೆ ಹೋಗಿದೆ.

ರಿಸರ್ವ್‌ ಬ್ಯಾಂಕ್‌ಗೆ ಪತ್ರ ಬರೆದಿರುವ ಮುಜ ರಾಯಿ ಇಲಾಖೆ, ದೇವರ ಹುಂಡಿಯಲ್ಲಿ ದೊರೆತ ಹಣ ಇದಾಗಿದ್ದು, ದೇವಸ್ಥಾನಗಳ ಪುನರುಜ್ಜೀವನಕ್ಕಾಗಿ ಬಳಸುವ ಹಣವನ್ನು ಹೊಸ ನೋಟಿಗೆ ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದೆ. ಆದರೆ, ಆರ್‌ಬಿಐ ಇದಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಿಸರ್ವ್‌ ಬ್ಯಾಂಕ್‌ನ ನಿರಾಸಕ್ತಿಯಿಂದ ಬೇಸತ್ತಿರುವ ರಾಜ್ಯ ಸರ್ಕಾರ ಕಪ್ಪು ಹಣವನ್ನು ವೈಟ್‌ ಮಾಡಿಕೊಳ್ಳುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿ ಮುಳುಗಿದೆ.

ನಿಷೇಧಿತ ನೋಟುಗಳ ಬಗ್ಗೆ ಅತಿಯಾದ ಉದಾರತನ ತೋರಿದ ಜಾಣ ಭಕ್ತರು 1000 ಹಾಗೂ 500 ರೂ. ಮುಖಬೆಲೆಯ ನೋಟಿನ ಕಂತುಗಳನ್ನೇ ದೇವರ ಹುಂಡಿಯಲ್ಲಿ ಹಾಕಿ ದೇವರ ಕೃಪೆಗೆ ಪಾತ್ರರಾಗಿ ಪಾಪ ಕಳೆದುಕೊಂಡಿದ್ದಾರೆ! ಆದರೆ, ಮುಜರಾಯಿ ದೇವಸ್ಥಾನಗಳ ಹುಂಡಿ ತುಂಬಿದ್ದರೂ, ಆ ಹಣವನ್ನು ಬಳಕೆ ಮಾಡದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರ ಹಣಕ್ಕೆ ದೇವರೇ ಗತಿ ಎಂದು ಸರ್ಕಾರ ತಲೆ ಮೇಲೆ ಕೈ ಹೊತ್ತು ಕೂಡುವಂತಾಗಿದೆ.

Advertisement

ರಾಜ್ಯದಲ್ಲಿ 34,543 ಮುಜರಾಯಿ ದೇವಸ್ಥಾನಗಳ ಹುಂಡಿ ಗಳನ್ನು ಒಡೆದು ಎಣಿಕೆ ನಡೆಸಿದ್ದು, ಪ್ರಮುಖ ಹನ್ನೊಂದು ದೇವಸ್ಥಾನಗಳಲ್ಲಿ 73 ಲಕ್ಷ ರೂಪಾಯಿಯಷ್ಟು ಸಾವಿರ ಮತ್ತು 500 ರೂ. ನೋಟುಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ 1000 ಮುಖ ಬೆಲೆಯ 4.15 ಲಕ್ಷ ರೂ., ಹಾಗೂ 500 ಮುಖ ಬೆಲೆಯ 10.24 ಲಕ್ಷ ರೂಪಾಯಿ ಸೇರಿ ಒಟ್ಟು 14.38 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಉಡುಪಿ ಜಿಲ್ಲೆಯ ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 80 ಸಾವಿರ ರೂ. ಸಂಗ್ರಹವಾಗಿದ್ದರೆ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಯಲ್ಲಿ  11. 51 ರೂಪಾಯಿ ಕಾಣಿಕೆ ರೂಪ ದಲ್ಲಿ ಬಿದ್ದಿದೆ.

ರಾಜ್ಯದ ಎಲ್ಲ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ  ಮತ್ತಷ್ಟು ನಿಷೇಧಿತ ನೋಟುಗಳು ಬಂದಿರುವ ಸಾಧ್ಯತೆ ಇದ್ದು, ಈಗಲೇ ಕಾಣಿಕೆ ಹುಂಡಿಯನ್ನು ತೆರೆದು ಅಪಮೌಲ್ಯಗೊಂಡ ನೋಟುಗಳ ಮಾಹಿತಿಯನ್ನು ಸರ್ಕಾರಕ್ಕೆ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

ಪ್ರಮುಖ ದೇವಸ್ಥಾನಗಳಲ್ಲಿ ಸಂಗ್ರಹವಾದ ನಿಷೇಧಿತ ನೋಟುಗಳು
ಕುಕ್ಕೆ ಸುಬ್ರಮಣ್ಯ ದೇವಸ್ಥಾನ , ಸುಳ್ಯ            14,39,000
ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ         80,000
ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು            11,51,500
ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ನಂಜನಗೂಡು        9,92,000
ಬನಶಂಕರಿ ದೇವಸ್ಥಾನ, ಬೆಂಗಳೂರು            11,79,000
ಸಿದ್ದಲಿಂಗೇಶ್ವರ ದೇವಸ್ಥಾನ, ಯಡಿಯೂರು        2, 04,500
ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿ            7,38,500
ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು            7,34,500
ಘಾಟಿ ಸುಬ್ರಮಣ್ಯ ದೇವಸ್ಥಾನ, ದೊಡ್ಡಬಳ್ಳಾಪುರ        3,18,000
ಹುಲಿಗೆಮ್ಮ ದೇವಿ ದೇವಸ್ಥಾನ, ಕೊಪ್ಪಳ            3,37,000
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರು 5,57,000
ಒಟ್ಟು                             74,94,000

ನಿಷೇಧಿತ ಒಂದು ಸಾವಿರ ಹಾಗೂ 500 ರೂಪಾಯಿ ನೋಟುಗಳು ಎಲ್ಲಾ ದೇವಸ್ಥಾನಗಳ ಹುಂಡಿಗಳಲ್ಲಿ ಈಗಲೂ ಬಂದು ಬೀಳುತ್ತಿದೆ. ಈ ಬಗ್ಗೆ ಈಗಾಗಲೇ ಆರ್‌ಬಿಐಗೆ ಪತ್ರ ಬರೆದು, ಈ ಹಣವನ್ನು ಪಡೆಯುವಂತೆ ಪತ್ರ ಬರೆಯಲಾಗಿದೆ. ಆದರೆ, ಆರ್‌ಬಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಣವನ್ನು ಏನು ಮಾಡಬೇಕೆಂದು ತಿಳಿಯುತ್ತಿಲ್ಲ.  ಹುಂಡಿಯಲ್ಲಿ ಸಂಗ್ರಹವಾದ ಹಣದಿಂದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ಧಾರ್ಮಿಕ ಪರಿಷತ್ತು ಯೋಜನೆ ಹಾಕಿತ್ತು. ಆದರೆ, ಇದರಿಂದ ಏನು ಮಾಡುವುದು ತಿಳಿಯದಾಗಿದೆ.
– ಪದ್ಮನಾಭ ಕೋಟ್ಯಾನ, ಮುಜರಾಯಿ ಇಲಾಖೆ ಧಾರ್ಮಿಕ ಪರಿಷತ್‌ ಸದಸ್ಯ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next