Advertisement

ಯಾರಿಗೂ ಬೇಡವಾದ ಕನ್ನಡ ಎಂಜಿನಿಯರಿಂಗ್‌

12:01 AM Mar 04, 2023 | Team Udayavani |

ಬೆಂಗಳೂರು: ಉದ್ಯೋಗದ ಅನಿಶ್ಚಿತತೆ, ವಿದೇಶ ದಲ್ಲಿ ಕೆಲಸ ಪಡೆಯುವುದು ದುಸ್ತರವೆಂಬ ಅಭಿಪ್ರಾಯ, ಆಕರಗ್ರಂಥಗಳ ಅಲಭ್ಯತೆ, ಉನ್ನತ ಶಿಕ್ಷಣಕ್ಕೆ ಇಲ್ಲದ ಅವಕಾಶ, ಪೋಷಕರ ಆತಂಕ ಮುಂತಾದವುಗಳ ಪರಿಣಾಮವಾಗಿ ಕನ್ನಡದಲ್ಲಿ ಎಂಜಿ ನಿಯರಿಂಗ್‌ ಶಿಕ್ಷಣ ಓದಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ. ಕನ್ನಡದಲ್ಲೇ ಎಂಜಿನಿಯರಿಂಗ್‌ ವೃತ್ತಿ ಶಿಕ್ಷಣ ಪಡೆಯಲು ರಾಜ್ಯ ಸರಕಾರ 2020-21ರಿಂದ ಅವಕಾಶ ನೀಡಿದ್ದು, ರಾಜ್ಯದಲ್ಲಿ ಮೂರು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಲಾ 30ರಂತೆ ಒಟ್ಟು 90 ಸೀಟುಗಳನ್ನು ಇದಕ್ಕಾಗಿ ಮೀಸಲಿರಿಸಿದೆ.

Advertisement

ಆದರೆ ಮೂರು ವರ್ಷಗಳಿಂದಲೂ ಮೀಸಲಿಟ್ಟಿರುವ ಒಂದೇ ಒಂದು ಸೀಟು ಭರ್ತಿಯಾಗಿಲ್ಲ!

ಚಿಕ್ಕಬಳ್ಳಾಪುರದ ಎಸ್‌ಜೆಸಿ ತಾಂತ್ರಿಕ ಸಂಸ್ಥೆ, ಮೈಸೂರಿನ ಮಹಾರಾಜ ತಾಂತ್ರಿಕ ಸಂಸ್ಥೆ ಹಾಗೂ ಬೀದರ್‌ನ ಭೀಮಣ್ಣ ಖಂಡ್ರೆ ತಾಂತ್ರಿಕ ಸಂಸ್ಥೆಗಳಲ್ಲಿ ಅದಕ್ಕೆ ಕನ್ನಡ ಎಂಜಿನಿಯರಿಂಗ್‌ಗೆ ಅವಕಾಶವಿದೆ.

ಸಾಂಪ್ರದಾಯಿಕ, ಪ್ರಧಾನ ಎಂಜಿನಿಯರಿಂಗ್‌ ಕೋರ್ಸ್‌ಗಳಾದ ಸಿವಿಲ್‌ ಮತ್ತು ಮೆಕ್ಯಾನಿಕಲ್‌ ವಿಷಯಗಳ ಕನ್ನಡ ಪಠ್ಯ ಪುಸ್ತಕವನ್ನು ವಿಟಿಯು ಸಿದ್ಧಪಡಿಸಿದೆ. ಮೊದಲ ವರ್ಷದ ಎರಡು ಸೆಮಿಸ್ಟರ್‌ಗಳ ಪಠ್ಯಪುಸ್ತಕ ಈಗಾಗಲೇ ಸಿದ್ಧವಾಗಿದೆ. 2ನೇ ವರ್ಷದ ಪಠ್ಯಪುಸ್ತಕಗಳು ತಯಾರಾಗುತ್ತಿವೆ.

ವಿಟಿಯು ಕುಲಪತಿ ಡಾ| ವಿದ್ಯಾಶಂಕರ್‌ ಪ್ರಕಾರ, ಕನ್ನಡದಲ್ಲಿ ಎಂಜಿನಿಯರಿಂಗ್‌ ಕಲಿಸಲು ವಿಟಿಯು ಸಿದ್ಧವಾಗಿದೆ. ಆದರೆ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ ಆದರೆ ತಮಿಳು ಭಾಷಿಕರಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ಹೇಳುತ್ತಾರೆ.

Advertisement

ಮೀಸಲು ನೀಡಬೇಕು
ಸರಕಾರ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಓದಿದವರಿಗೆ ತನ್ನ ವಿವಿಧ ಇಲಾಖೆಗಳ ಕೆಲಸದಲ್ಲಿ ಮೀಸಲಾತಿ ನೀಡಬೇಕು. ನೀರಾವರಿ, ಲೋಕೋಪಯೋಗಿ, ಇಂಧನ ಇಲಾಖೆಯಲ್ಲಿ ಕನಿಷ್ಠ ಶೇ. 1ರಿಂದ 2ರಷ್ಟು ಮೀಸಲಾತಿ ಕಲ್ಪಿಸಿದರೂ ಕನ್ನಡ ಎಂಜಿನಿಯರಿಂಗ್‌ಗೆ ಓದಲು ವಿದ್ಯಾರ್ಥಿಗಳು ಮುಂದಾಗಬಹುದು ಎಂದು ಅವರು ಹೇಳುತ್ತಾರೆ.

ಎಸ್‌ಜೆಸಿ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ| ಜಿ. ಟಿ. ರಾಜು ಪ್ರಕಾರ, ಕಳೆದ ವರ್ಷ ಐವರು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಅನ್ನು ಕನ್ನಡದಲ್ಲಿ ಪಡೆಯಲು ಆಸಕ್ತಿ ತೋರಿ ಸಿಇಟಿ ಆಪ್ಷನ್‌ ಎಂಟ್ರಿಯಲ್ಲಿ ನೋಂದಾಯಿಸಿಕೊಂಡಿದ್ದರು. ಕೊನೆಕ್ಷಣದಲ್ಲಿ ಅವರು ನಿಲುವು ಬದಲಾಯಿಸಿಕೊಂಡರು ಎಂದರು.

ಎಸೆಸೆಲ್ಸಿ ತನಕ ಕನ್ನಡ ಮಾಧ್ಯಮದಲ್ಲಿ ಓದಿರುವ ಮಕ್ಕಳು ಪದವಿ ಪೂರ್ವದಲ್ಲಿ ವಿಜ್ಞಾನವನ್ನು ಆಂಗ್ಲ ಭಾಷೆಯಲ್ಲೇ ಓದಿರುತ್ತಾರೆ. ಆ ಬಳಿಕ ಮತ್ತೆ ಕನ್ನಡ ಮಾಧ್ಯಮಕ್ಕೆ ಮರಳಲು ವಿದ್ಯಾರ್ಥಿಗಳು ಬಯಸುವುದಿಲ್ಲ. ಅದೇ ರೀತಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಎಂಜಿನಿಯರಿಂಗ್‌ ಕೋರ್ಸ್‌ಗೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳು, ಉನ್ನತ ಶಿಕ್ಷಣ ಆಂಗ್ಲ ಭಾಷೆಯಲ್ಲಿ ನಡೆಯುವುದರಿಂದ ತಮ್ಮ ಉದ್ಯೋಗ ಭವಿಷ್ಯ ಮೊಟಕಾಗಬಹುದು ಎಂಬುದು ವಿದ್ಯಾರ್ಥಿಗಳು ಆತಂಕವಾಗಿದೆ.

ಪಠ್ಯ ಕನ್ನಡದಲ್ಲಿದ್ದರೂ ಪರಿಭಾಷೆಗಳು ಆಂಗ್ಲದಲ್ಲಿಯೇ ಇರುತ್ತವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಪರೀಕ್ಷೆಗಳು ಸಮಸ್ಯೆ ಆಗಲಾರವು ಎಂಬ ಅಭಿಪ್ರಾಯವೂ ಇದೆ. ಆದರೆ ಪರಿಭಾಷೆ ಆಂಗ್ಲದಲ್ಲಿದ್ದರೂ ಆಕರ ಗ್ರಂಥಗಳು ಕನ್ನಡದಲ್ಲಿ ಸಾಕಷ್ಟು ಲಭ್ಯವಿಲ್ಲ. ಇದು ಮಕ್ಕಳಿಗೆ ಸಮಸ್ಯೆ ಸೃಷ್ಟಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಬೋಧಿಸುವ ಮೈಸೂರಿನ ನೃಪತುಂಗ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜನ್ನು ಮುನ್ನಡೆಸುವ ಕನ್ನಡ ವಿಕಾಸ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯ ಉಪಾಧ್ಯಕ್ಷ ಸುದರ್ಶನ್‌ ಹೇಳುವಂತೆ, ಈ ಬಾರಿ ಐವರು ವಿದ್ಯಾರ್ಥಿಗಳು ಕನ್ನಡದಲ್ಲಿ ಪಿಯು ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದಾರೆ. ಮಕ್ಕಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಓದಲು ಆಸಕ್ತಿಯಿದ್ದರೂ ಫೋಷಕರ ವಿರೋಧದ ಕಾರಣದಿಂದ ಆಂಗ್ಲಭಾಷೆಯಲ್ಲೇ ಓದುತ್ತಾರೆ.

ಕಳೆದ ಬಾರಿ ಕನ್ನಡದಲ್ಲಿ ಪಿಯು ಪರೀಕ್ಷೆ ಬರೆದಿಲ್ಲ ರಾಜ್ಯದಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯನ್ನು ಕನ್ನಡದಲ್ಲಿ ಒಬ್ಬ ವಿದ್ಯಾರ್ಥಿಯೂ ಬರೆದಿರಲಿಲ್ಲ. ಈ ಬಾರಿ 532 ವಿದ್ಯಾರ್ಥಿಗಳು ಕನ್ನಡ ದಲ್ಲಿ ವಿಜ್ಞಾನ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ ಎಂದು ಪ.ಪೂ.ಶಿಕ್ಷಣ ಇಲಾಖೆ ತಿಳಿಸಿದೆ.

ನಾವು ಕನ್ನಡದಲ್ಲಿ ಎಂಜಿನಿಯರಿಂಗ್‌ ಓದಲು ಅವಕಾಶ ಕಲ್ಪಿಸಿದ್ದು, ಪಠ್ಯ ವನ್ನೂ ನೀಡಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯು ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಲು ಒತ್ತು ನೀಡುತ್ತದೆ. ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್‌ ಅನ್ನು ಕನ್ನಡದಲ್ಲೇ ಓದುವವರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ.
– ಡಾ| ಸಿ. ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

-  ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next