Advertisement

ನೂರೊಂದು ನೆನಪಲ್ಲಿ ಮೇಘನಾರಾಜ್‌

12:42 PM Jun 07, 2017 | Team Udayavani |

ಮೇಘನಾರಾಜ್‌ ಈಗ ಹ್ಯಾಪಿಯಾಗಿದ್ದಾರೆ. ಆ ಹ್ಯಾಪಿಗೆ ಕಾರಣ ಏನು ಗೊತ್ತಾ? ಇದೇ ಮೊದಲ ಬಾರಿಗೆ ಅವರು ನಟಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ. ಹೌದು ಜೂ.9 ರಂದು “ನೂರೊಂದು ನೆನಪು’ ಮತ್ತು ‘ಜಿಂದಾ’ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಈ ಚಿತ್ರಗಳಲ್ಲಿ ಮೇಘನಾ ನಾಯಕಿ ಅನ್ನೋದು ವಿಶೇಷ. ಕನ್ನಡದಲ್ಲಿ ಮೇಘನಾ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಇನ್ನೂ ಎರಡು ಸಿನಿಮಾಗಳನ್ನು ಅನೌನ್ಸ್‌ ಮಾಡುವ ಉತ್ಸಾಹದಲ್ಲಿದ್ದಾರೆ. ಅಂದಹಾಗೆ, ಒಂದೇ ದಿನ ಬಿಡುಗಡೆಯಾಗುತ್ತಿರುವ ಎರಡು ಚಿತ್ರಗಳ ಕುರಿತು ಮೇಘನಾರಾಜ್‌ ಚಿಟ್‌ಚಾಟ್‌ನಲ್ಲಿ ಮಾತನಾಡಿದ್ದಾರೆ.

Advertisement

* ಒಂದೇ ದಿನ ನಿಮ್ಮ ನಟನೆಯ 2 ಚಿತ್ರಗಳು ರಿಲೀಸ್‌ ಆಗುತ್ತಿವೆ ಹೇಗನ್ನಿಸುತ್ತೆ?
– ಹೌದು, ತುಂಬಾನೇ ಖುಷಿಯಾಗುತ್ತಿದೆ. ಇದೇ ಮೊದಲ ಸಲ ನಾನು ಅಭಿನಯಿಸಿದ ಎರಡು ಚಿತ್ರಗಳು ಒಂದೇ ದಿನ ರಿಲೀಸ್‌ ಆಗುತ್ತಿವೆ. ಎರಡೂ ವಿಭಿನ್ನತೆಯ ಚಿತ್ರಗಳು. ಒಂದೊಂದರಲ್ಲಿ ಒಂದೊಂದು ಪಾತ್ರವಿದೆ. ಈ ಶುಕ್ರವಾರ ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವ ಗ್ಯಾರಂಟಿ. ನಾನಂತೂ ಈಗ ಎರಡು ಸಿನಿಮಾಗಳ ಫ‌ಲಿತಾಂಶ ಎದುರು ನೋಡುತ್ತಿದ್ದೇನೆ.

* ಎರಡು ಚಿತ್ರಗಳ ಪಾತ್ರ ಬಗ್ಗೆ?
– “ಜಿಂದಾ’ ಚಿತ್ರದ್ದು ನೈಜ ಕಥೆ. ಅಲ್ಲಿ ಒಂಥರಾ ರಫ್ ಅಂಡ್‌ ಟಫ್ ಇರೋ ಪಾತ್ರಗಳ ನಡುವೆ ಇರುವಂತಹ ಮುಗ್ಧತೆಯ ಪಾತ್ರ. ಅವಳ ಲೈಫ‌ಲ್ಲಿ ಕೆಲವು ಘಟನೆ ನಡೆಯುತ್ತವೆ. ಅದರಿಂದ ಎಷ್ಟೊಂದು ಘಾಸಿಗೊಳಗಾಗುತ್ತಾಳೆ ಅನ್ನೋ ಪಾತ್ರವದು. “ನೂರೊಂದು ನೆನಪು’ ಚಿತ್ರದಲ್ಲಿ ಮೆಡಿಕಲ್‌ ಸ್ಟುಡೆಂಟ್‌ ಪಾತ್ರ. ಮಿನಿಸ್ಟರ್‌ ಮಗಳಾಗಿದ್ದರೂ, ತಾನೇ ತನ್ನ ಕಾಲ ಮೇಲೆ ನಿಲ್ಲಬೇಕೆಂಬ ಹಂಬಲದ ಪಾತ್ರವದು. ಇದು ನಾವೆಲ್‌ ಬೇಸ್ಡ್ ಸ್ಟೋರಿ. ಎರಡು ಸಿನಿಮಾಗೂ ಅದರದ್ದೇ ಆದ ಮಹತ್ವ ಇದೆ. “ಜಿಂದಾ’ದಲ್ಲಿ ಶೀತಲ್‌ ಆಗಿದ್ದರೆ, “ನೂರೊಂದು ನೆನಪು’ ಚಿತ್ರದಲ್ಲಿ ಶ್ರುತಿಯಾಗಿದ್ದೇನೆ.

* ಎರಡು ಸಿನ್ಮಾದ ನಿರ್ದೇಶಕರ ಕೆಲಸ ಹೇಗಿತ್ತು?
– ಚೆನ್ನಾಗಿತ್ತು. “ನೂರೊಂದು ನೆನಪು’ ಚಿತ್ರ ನಿರ್ದೇಶಕ ಕಮರೇಶ್‌. ಸಿನಿಮಾದಲ್ಲಿ ಕೆಲಸ ಮಾಡಿದ ನೆನಪು ಮಾಸಿಲ್ಲ. ಒಳ್ಳೇ ತಂಡದ ಜತೆ ಕೆಲಸ ಮಾಡಿದೆ. ಈ ಚಿತ್ರದಲ್ಲಿ ಬಹಳಷ್ಟು ಹೊಸ ಕಲಾವಿದರೇ ಇದ್ದಾರೆ. ಡಿಂಗ್ರಿ ನಾಗರಾಜ್‌ ಮಗ ರಾಜವರ್ಧನ್‌ ಅವರ ಮೊದಲ ಚಿತ್ರವಿದು. ಇನ್ನು, “ಜಿಂದಾ’ ನಿರ್ದೇಶಕ ಮುಸ್ಸಂಜೆ ಮಹೇಶ್‌ ಅವರ ಜತೆ ಕೆಲಸ ಮಾಡುವುದೇ ಗೊತ್ತಾಗಲ್ಲ. ಎಲ್ಲರೊಂದಿಗೆ ಬೆರೆತು, ಎಲ್ಲರಿಂದಲೂ ಒಳ್ಳೇ ಕೆಲಸ ತೆಗೆದಿದ್ದಾರೆ. ಈ ಚಿತ್ರದಲ್ಲಿ ಆರು ಜನ ಹುಡುಗರಿದ್ದಾರೆ. ಅವರೆಲ್ಲರಿಗೂ ಮೊದಲ ಸಿನಿಮಾವಿದು. ಇಲ್ಲಿ ಅನುಭವಿ ತಂತ್ರಜ್ಞರಿದ್ದಾರೆ.

*ಮುಂದೆ ಇರುವ ಸಿನಿಮಾ?
– ಉಪೇಂದ್ರ ಅವರ ಜತೆ “ನಾಗಾರ್ಜುನ’ ಇದೆ. ಸದ್ಯಕ್ಕೆ ಕಥೆ ಕೇಳುತ್ತಲೇ ಇದ್ದೇನೆ. ಇನ್ನೊಂದು ಸಿನಿಮಾ ಕನ್‌ಫ‌ರ್ಮ್ ಆಗಿದೆ. ಮುಸ್ಸಂಜೆ ಮಹೇಶ್‌ ಸರ್‌ ಕಾಂಬಿನೇಷನ್‌ನಲ್ಲಿ ಇನ್ನೊಂದು ಸಿನಿಮಾ ಇದೆ.

Advertisement

* ಏನದು ಜಿಂದಾ ಗಲಾಟೆ?
– ಸಿನಿಮಾದಲ್ಲಿ ಒಂದು ಡೈಲಾಗ್‌ ಇದೆ. “ಗಂಡಸರು ಕಚಡ ನನ್ಮಕ್ಳು’ ಎಂಬ ಡೈಲಾಗ್‌ ಅದು. ಅದನ್ನು ಕೇಳಿದ ಕೆಲ ಯುವಕರು ಸಂಘಟನೆ ಮೂಲಕ ಬಂದು ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಗಂಡಸರಿಗೆ ಆ ಡೈಲಾಗ್‌ನಿಂದ ಹರ್ಟ್‌ ಆಗಿದೆ. ಕ್ಷಮೆ ಕೇಳಬೇಕು ಅಂದರು. ಆದರೆ, ನಾನು ಮಾತ್ರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದೇನೆ. ಯಾಕಂದರೆ, ನಾನೇನೂ ಪಬ್ಲಿಕ್‌ನಲ್ಲಿ ಕುಳಿತು ಗಂಡಸರ ಬಗ್ಗೆ ಅವಹೇಳನವಾಗಿ ಮಾತನಾಡಿಲ್ಲ. ಒಂದು ಸಿನಿಮಾದ ಪಾತ್ರ ಹೇಳಿರುವ ಡೈಲಾಗ್‌ ಅದು.

ಸುಮ್ಮನೆ ಗಂಡಸರನ್ನು ಬೈದಿಲ್ಲ. ಹಾಗೆಲ್ಲ ಮಾತಾಡುವಂತ ಹುಡುಗಿ ನಾನಲ್ಲ. ನಾನೊಬ್ಬ ನಟಿ, ಸಿನಿಮಾದ ಕಥೆ, ಪಾತ್ರ ಕೇಳಿದ್ದನ್ನು ಕೊಟ್ಟಿದ್ದೇನಷ್ಟೇ.ಆ ಡೈಲಾಗ್‌ನಿಂದ ಕೆಲವರಿಗೆ ಹರ್ಟ್‌ ಆಗಿರಬಹುದು. ಸಿನಿಮಾ ನೋಡಿದರೆ ಯಾಕೆ ಆ ಡೈಲಾಗ್‌ ಬರುತ್ತೆ ಅಂತ ಗೊತ್ತಾಗುತ್ತೆ. ಎರಡು ಪದಕ್ಕೇ ಇಷ್ಟೊಂದು ರಾದ್ಧಾಂತ ಮಾಡ್ತಾರೆ. ಬೇರೆ ಚಿತ್ರಗಳಲ್ಲಿ ಹೆಣ್ಣುಮಕ್ಕಳನ್ನು ಹೇಗೆಲ್ಲಾ ಬೈದಿದ್ದಾರೆ. ಆಗ ಯಾಕೆ ಯಾರೂ ಮಾತಾಡಿಲ್ಲ? ಸದ್ಯಕ್ಕೆ ಕ್ಷಮೆ ಕೇಳಿ ಅಂದಿದ್ದಾರೆ. ನಾನು ಕೇಳುವುದಿಲ್ಲ ಎಂದಿದ್ದೇನೆ. ಅವರು ರಿಲೀಸ್‌ ಮಾಡೋಕೆ ಬಿಡಲ್ಲ ಅಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next