ಬೆಂಗಳೂರು: ನಗರದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಸದಿಂದಲೇ ವಿದ್ಯುತ್ ತಯಾರಿಸುವ ಬಿಬಿಎಂಪಿ ಯೋಜನೆಗೆ ಮತ್ತೆ ಹಿನ್ನಡೆಯಾಗಿದೆ. ಕಸದಿಂದ ವಿದ್ಯುತ್ ಉತ್ಪಾದಿಸಲು ಗುತ್ತಿಗೆದಾರರು ಮುಂದೆ ಬಾರದ ಹಿನ್ನೆಲೆಯಲ್ಲಿ ಪಾಲಿಕೆಯ ತ್ಯಾಜ್ಯ ಸಂಸ್ಕರಣೆ ಘಟಕಗಳ ಸ್ವರೂಪ ಬದಲಾವಣೆ ಮಾಡಲು ಬಿಬಿಎಂಪಿ ಮುಂದಾಗಿದೆ.
ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಬದಲಾಗಿ, ವಿದ್ಯುತ್ ಉತ್ಪಾದನೆ ಮಾಡಲು ಬಿಬಿಎಂಪಿ ಯೋಜನೆ ರೂಪಿಸಿ ಟೆಂಡರ್ ಕರೆದಿತ್ತು. ಆದರೆ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದು ಪಾಲಿಕೆಗೆ ತಲೆ ನೋವಾಗಿ ಪರಿಣಮಿಸಿದೆ. ಪಾಲಿಕೆಯಿಂದ 3 ಬಾರಿ ಟೆಂಡರ್ ಆಹ್ವಾನಿಸಲಾಗಿದೆ. ಆದರೆ, ಬಿಬಿಎಂಪಿಯಿಂದ ಬಿಲ್ ಪಾವತಿಯಲ್ಲಿ ವಿಳಂಬವಾಗುತ್ತದೆ ಎಂಬ ಕಾರಣದಿಂದ ಗುತ್ತಿಗೆದಾರರು ಬಿಡ್ ಸಲ್ಲಿಕೆ ಮಾಡಲು ಮುಂದಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಬಿಡ್‌ನಲ್ಲಿ ಯಾರೊಬ್ಬರೂ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಎಸ್‌ಎಲ್ ಗ್ರೂಪ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲು ಬಿಬಿಎಂಪಿಯಿಂದ ಚಿಂತನೆ ನಡೆಸುತ್ತಿದೆ. ಸಂಸ್ಥೆ ಎಷ್ಟು ಘಟಕಗಳನ್ನು ಪಡೆದುಕೊಳ್ಳಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ತ್ಯಾಜ್ಯದಿಂದ ವಿದ್ಯುತ್ ತಯಾರಿಕೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯ ತ್ಯಾಜ್ಯ ಸಂಸ್ಕರಣೆ ಘಟಕಗಲ್ಲಿ ಗೊಬ್ಬರದ ಬದಲಿಗೆ ವಿದ್ಯುತ್ ಉತ್ಪಾದನೆ ಮಾಡುವ ಸಂಬಂಧ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಪಾಲ್ಗೊಂಡಿಲ್ಲ. ಹೀಗಾಗಿ ಎಸ್‌ಎಲ್ ಗ್ರೂಪ್ ಸಂಸ್ಥೆಗೆ ಗುತ್ತಿಗೆ ನೀಡಲು ಚರ್ಚೆ ನಡೆಸಲಾಗುತ್ತಿದೆ.
-ಜಿ.ಪದ್ಮಾವತಿ, ಮೇಯರ್