Advertisement

ಬೀದಿದೀಪ ನಿರ್ವಹಣೆಗೆ ಬರೋರಿಲ್ಲ!

09:17 AM Aug 17, 2019 | Suhan S |

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವಳಿ ನಗರದ ಬೀದಿದೀಪ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎನ್ನುವ ಪಾಲಿಕೆ ಕಸರತ್ತು ಫಲಿಸದಂತಾಗಿದೆ. ಕಳೆದ ಎಂಟು ತಿಂಗಳಲ್ಲಿ ಐದು ಬಾರಿ ಟೆಂಡರ್‌ ಕರೆದರು ಒಬ್ಬ ಗುತ್ತಿಗೆದಾರನೂ ಪಾಲ್ಗೊಳ್ಳುತ್ತಿಲ್ಲ.

Advertisement

ಪಾಲಿಕೆಗೆ ಬೀದಿದೀಪ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಜನರ ದೂರುಗಳಿಗೆ ಸಕಾಲದಲ್ಲಿ ಪರಿಹಾರ ಕಲ್ಪಿಸುವ ಮೂಲಕ ಪರಿಣಾಮಕಾರಿ ಸೇವೆ ನೀಡಬೇಕು ಎನ್ನುವ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ಮೂರು ಪ್ಯಾಕೇಜ್‌ಗಳಿಗೆ ಇ-ಟೆಂಡರ್‌ ಕರೆದರೂ ಅರ್ಹ ಗುತ್ತಿಗೆದಾರರು ಪಾಲ್ಗೊಳ್ಳದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೂರು ಪ್ಯಾಕೇಜ್‌ಗಳಲ್ಲಿ ಗುತ್ತಿಗೆ: ಬೀದಿ ದೀಪ ನಿರ್ವಹಣೆ ಕುರಿತು ದೂರುಗಳು, ಸಕಾಲಕ್ಕೆ ದುರಸ್ತಿಯಾಗದಿರುವ ಬಗ್ಗೆ ಜನರಲ್ಲಿ ಸಾಕಷ್ಟು ಅಸಮಾಧಾನಗಳಿವೆ. ಈ ಹಿನ್ನೆಲೆಯಲ್ಲಿ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯುವುದರಿಂದ ಸಮರ್ಪಕ ಮಾನವ ಸಂಪನ್ಮೂಲ, ಯಂತ್ರ, ವೃತ್ತಿಪರತೆ ಹೊಂದಿರುವ ಗುತ್ತಿಗೆದಾರರು ಪಾಲ್ಗೊಳ್ಳುತ್ತಾರೆ. ಇದರಿಂದ ಮಹಾನಗರ ಜನತೆಗೆ ಉತ್ತಮ ಸೇವೆ ಕೊಡಬಹುದು ಎಂಬುವುದು ಪಾಲಿಕೆ ಸದಸ್ಯರ ಹಾಗೂ ಅಧಿಕಾರಿಗಳ ಅಭಿಪ್ರಾಯವಾಗಿತ್ತು.

5 ಬಾರಿ ಟೆಂಡರ್‌: ಧಾರವಾಡ, ಹುಬ್ಬಳ್ಳಿ (ಉತ್ತರ) ಹಾಗೂ ಹುಬ್ಬಳ್ಳಿ (ದಕ್ಷಿಣ) ಮೂರು ಪ್ಯಾಕೇಜ್‌ಗಳಲ್ಲಿ ಒಟ್ಟು 3.91 ಕೋಟಿ ರೂ. ಮೊತ್ತದ ಟೆಂಡರ್‌ನ್ನು ಕಳೆದು ಎಂಟು ತಿಂಗಳಲ್ಲಿ 5 ಬಾರಿ ಕರೆಯಲಾಗಿದೆ. ಮೊದಲ ಬಾರಿ ಕರೆದ ಟೆಂಡರ್‌ನಲ್ಲಿ ಒಬ್ಬ ಗುತ್ತಿಗೆದಾರನೂ ಪಾಲ್ಗೊಂಡಿಲ್ಲ. ನಂತರದ 4 ಮರು ಅಲ್ಪಾವಧಿ ಟೆಂಡರ್‌ಗಳಲ್ಲಿ ಪಾಲ್ಗೊಂಡಿದ್ದ ಇಬ್ಬರು ಗುತ್ತಿಗೆದಾರರು ತಾಂತ್ರಿಕ ಬಿಡ್‌ ಹಂತದಲ್ಲಿ ಅನರ್ಹರಾಗಿದ್ದು, ಹಣಕಾಸು ಬಿಡ್‌ಗೆ ಯಾರೂ ಅರ್ಹತೆ ಪಡೆಯಲಿಲ್ಲ. ಹೀಗಾಗಿ ವಿವಿಧ ಮಹಾನಗರಗಳಲ್ಲಿ ಬೀದಿ ದೀಪ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರನ್ನು ಮನವೊಲಿಸುವ ಅನಿವಾರ್ಯತೆ ಪಾಲಿಕೆ ಅಧಿಕಾರಿಗಳಿಗೆ ಬಂದಿದೆ.

ಸ್ಥಳೀಯ ಗುತ್ತಿಗೆದಾರರ ವಿರೋಧ?: ಪ್ರಸ್ತುತ ಮಹಾನಗರ ಪಾಲಿಕೆಯ 12 ವಲಯಗಳಲ್ಲಿ ಪ್ರತ್ಯೇಕವಾಗಿ ಬೀದಿದೀಪ ನಿರ್ವಹಣೆಗೆ ಟೆಂಡರ್‌ ನೀಡಲಾಗಿದ್ದು, ಪ್ರತಿವರ್ಷ ಮಹಾನಗರ ಪಾಲಿಕೆ ಸುಮಾರು 3.20 ಕೋಟಿ ರೂ. ವ್ಯಯಿಸುತ್ತದೆ. ಕೆಲ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ನಿರ್ವಹಿಸದ ಪರಿಣಾಮ ಮೂರು ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ನೀಡುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ದೊಡ್ಡ ಮೊತ್ತದ ಟೆಂಡರ್‌ ಕರೆದರೆ ಸಣ್ಣಪುಟ್ಟ ಗುತ್ತಿಗೆದಾರರು ಭಾಗವಹಿಸುವುದಿಲ್ಲ. ಅವರ ಲಾಭಿಯೂ ನಡೆಯುವುದಿಲ್ಲ ಎನ್ನುವ ಪಾಲಿಕೆ ಅಧಿಕಾರಿಗಳ ಹಾಗೂ ಸದಸ್ಯರ ಚಿಂತನೆಗೆ ಕೆಲ ಗುತ್ತಿಗೆದಾರರು ಸಡ್ಡು ಹೊಡೆದಿದ್ದು, ಹೊರಗಿನವರು ಇಲ್ಲಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ಪಾಲಿಕೆ ಅಧಿಕಾರಿಗಳದ್ದಾಗಿದೆ.

Advertisement

ಗುತ್ತಿಗೆದಾರರಲ್ಲಿ ಅತಂತ್ರ ಭೀತಿ: ಈಗಾಗಲೇ ಅವಳಿ ನಗರ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಎಲ್ಇಡಿ ದೀಪಗಳನ್ನು ಅಳವಡಿಸುವ ಕಂಪನಿಗಳೇ ಮುಂದಿನ 11 ವರ್ಷಗಳ ನಿರ್ವಹಣೆ ಕಾರ್ಯ ಮಾಡಬೇಕು ಎಂಬುವುದು ಯೋಜನೆಯಲ್ಲಿದೆ. ಒಂದು ವೇಳೆ ಹು-ಧಾ ಬೀದಿದೀಪ ನಿರ್ವಹಣೆ ಸ್ಮಾರ್ಟ್‌ಸಿಟಿ ಗುತ್ತಿಗೆ ಪಡೆಯುವ ಎಲ್ಇಡಿ ಕಂಪನಿಗೆ ವಹಿಸಿದರೆ ಮುಂದೇನು ಎನ್ನುವ ಆತಂಕ ಗುತ್ತಿಗೆದಾರರಲ್ಲಿದೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆ ಬೀದಿದೀಪ ನಿರ್ವಹಣೆ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಅಭಿಪ್ರಾಯಗಳಿವೆ.

ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ರಾಜ್ಯದ ಎಲ್ಲ ನಗರಗಳ ಬೀದಿದೀಪಗಳನ್ನು ಎಲ್ಇಡಿ ದೀಪಗಳಿಗೆ ಪರಿವರ್ತಿಸುವ ಯೋಜನೆಗೆ ಈಗಾಗಲೇ ರಾಜ್ಯಮಟ್ಟದಲ್ಲಿ ಮೂರು ಬಾರಿ ಟೆಂಡರ್‌ ಕರೆದರೂ ಪ್ರತಿಷ್ಠಿತ ಕಂಪನಿಗಳು ಆಸಕ್ತಿ ತೋರಿಲ್ಲ. ಹೀಗಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಸಮರ್ಪಕ ಬೀದಿ ದೀಪ ನಿರ್ವಹಣೆ ದೊರೆಯುತ್ತಿಲ್ಲ. ಇತ್ತ ಪಾಲಿಕೆಯಿಂದ ಕರೆದ ಟೆಂಡರ್‌ ಕೂಡ ಯಶಸ್ವಿಯಾಗದಿರುವುದು ತಲೆನೋವಾಗಿ ಪರಿಣಮಿಸಿದೆ.

 

•ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next