Advertisement

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಪಡೆಯಬೇಕಿಲ್ಲ ಜನ ಎಚ್ಚರವಹಿಸಬೇಕು: ಸಚಿವ ಡಾ.ಕೆ.ಸುಧಾಕರ್

09:12 AM Nov 30, 2021 | Team Udayavani |

ಚಿಕ್ಕಬಳ್ಳಾಪುರ: ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಪಡೆಯಬೇಕಿಲ್ಲ ಜನ ಎಚ್ಚರವಹಿಸಬೇಕು ಯಾರು ಕೋವಿಡ್‍ನ ಎರಡನೇ ಡೋಸ್ ಪಡೆದುಕೊಂಡಿಲ್ಲ ಅವರು ಮೊದಲು ಲಸಿಕೆಯನ್ನು ಪಡೆದುಕೊಂಡು ಸೋಂಕು ನಿಯಂತ್ರಿಸಲು ಸಹಕರಿಸಬೇಕೆಂದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

Advertisement

ನಂದಿ ಗ್ರಾಮದಲ್ಲಿ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಕಾರ್ತಿಕಮಾಸ ಕೊನೆ ಸೋಮವಾರದ ಅಂಗವಾಗಿ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ವೇಗವಾಗಿ ಹರಡುವಂತಹ ಹೊಸ ರೂಪಾಂತರಗೊಂಡ ವೈರಾಣು. ಆದರೆ ಅದರ ತೀವ್ರತೆ ಎಷ್ಟಿದೆಯೆಂಬ ಖಚಿತ ವರದಿ ಇದುವರೆಗೂ ಬಂದಿಲ್ಲ. ಇದು ಹರಡದೆ ಇರಲು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಕಳೆದ 15 ದಿನಗಳಲ್ಲಿ 10 ರಿಂದ 12 ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ. ಈ ದೇಶಗಳಿಂದ ಬರುವರ ಮೇಲೆ ನಾವು ನಿಗಾ ಇಡುತ್ತೇವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು,ಪೋರ್ಟ್‍ಗಳಲ್ಲಿ ಎಚ್ಚರವಹಿಸಿದ್ದೇವೆ. ಬರುವ ಎಲ್ಲಾ ಪ್ರಯಾಣಿಕರಿಗೂ ಕೂಡ ತಪಾಸಣೆ ಮಾಡಿ ಒಂದು ವೇಳೆಯಲ್ಲಿ ಪಾಸಿಟಿವ್ ಬಂದರೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುತ್ತೇವೆ ಎಂದರು.

ಪ್ರಯಾಣಿಕರ ವರದಿ ನೆಗಿಟವ್ ಬಂದರು ಸಹ ಅವರನ್ನು ಒಂದು ವಾರ ಮನೆಯಲ್ಲಿ ಹೋಮ್ ಕ್ವಾರಂಟೈನ್ ಮಾಡಿ ನಂತರ ಪುನಃ 7 ದಿವಸಗಳ ನಂತರ ಅವರ ವರದಿ ನೆಗೆಟಿವ್ ಬಂದರೆ ಅವರನ್ನು ಹೊರಗಡೆ ಹೋಗಲು ಅವಕಾಶವನ್ನು ಕಲ್ಪಿಸುತ್ತೇವೆ ಎಂದ ಸಚಿವರು ಪ್ರಯಾಣಿಕರ ಪ್ರಥಮ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕ ಸಾಧಿಸುವ ಜನರ ಆರೋಗ್ಯವನ್ನು ತಪಾಸಣೆ ಮಾಡುತ್ತೇವೆ. ಜೊತೆಗೆ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಇಡೀ ದೇಶದಲ್ಲಿ ಬಿಗಿಯಾದ ಮುನ್ನೆಚ್ಚರಿಕೆ ಕ್ರಮಗೊಂಡಿರುವ ಕರ್ನಾಟಕ ಮೊದಲ ರಾಜ್ಯವಾಗಿದೆ ಎಂದರು.

ಹೊಸ ನಿಯಮಗಳು

ರಾಜ್ಯದಲ್ಲಿ ಸೋಂಕು ನಿಯಂತ್ರಿಸಲು ಈಗಾಗಲೇ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ವಿಶೇಷವಾಗಿ ದೊಡ್ಡ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡಿಮೆ ಮಾಡಬೇಕು. ಅನಗತ್ಯವಾಗಿ ದೊಡ್ಡ ಸಂಖ್ಯೆಯಲ್ಲಿ ಸೇರುವುದು, ವೈದ್ಯಕೀಯ, ನರ್ಸಿಂಗ್ ಸಂಸ್ಥೆಗಳಲ್ಲಿ, ಉನ್ನತ ಶಿಕ್ಷಣದ ಕಾಲೇಜುಗಳಲ್ಲಿ ಅದರಲ್ಲೂ ವಿಶೇಷವಾಗಿ ವಸತಿನಿಲಯಗಳು ಇರುವಂತಹ ಪ್ರದೇಶದಲ್ಲಿ ಬಹಳ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮಾರ್ಗಸೂಗಳನ್ನು ಹೊರಡಿಸಿದ್ದೇವೆ ಎಂದರು.

Advertisement

ಇದನ್ನೂ ಓದಿ:ರಾಜ್ ಮೌಳಿಯ RRR ಚಿತ್ರದಲ್ಲಿ ಕನ್ನಡದ ಈ ನಟ ಇದ್ದಾರಂತೆ?

ಎರಡನೇ ಡೋಸ್ ಪಡೆಯಲು ಮನವಿ

ರಾಜ್ಯದಲ್ಲಿ 18 ವರ್ಷದ ಮೇಲ್ಟಟ್ಟ ಜನ ಎರಡನೇ ಡೋಸ್ ಪಡೆಯದ ಇರುವ ಸಂಖ್ಯೆ 43-44 ಲಕ್ಷ ಇದೆ. ಪ್ರಸ್ತುತ ರಾಜ್ಯದಲ್ಲಿ 70 ಲಕ್ಷ ಲಸಿಕೆ ದಾಸ್ತಾನು ಇದೆ. ಎಲ್ಲರು ಪ್ರಾಶಸ್ತ್ಯದಿಂದ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಸಚಿವರು ಇನ್ಫೆಕ್ಷನ್ ಹೆಚ್ಚಾಗುವ ತನಕ ಕಾಯಬಾರದು ನಾವೆಲ್ಲರು 90% ಗಿಂತ ಅಧಿಕ ಲಸಿಕೆಯನ್ನು ಪಡೆದುಕೊಂಡರೇ ಈ ಅಲೆಯನ್ನು ತಡೆಯಲು ಅವಕಾಶವಿರುತ್ತದೆ. ರಾಜ್ಯದಲ್ಲಿ ಮೊಲದನೇ ಡೋಸ್ 90% ಹಾಗೂ ದ್ವಿತೀಯ ಡೋಸ್ ಕೇವಲ 57% ಆಗಿದೆ. ಅದು 90% ಏರಿಕೆ ಆದ ಮೇಲೆ ಯಾರು ಲಸಿಕೆ ಪಡೆದಿಲ್ಲವೋ ಅವರನ್ನು ಮನವೊಲಿಸಿ ಲಸಿಕೆಯನ್ನು ಹಾಕುತ್ತೇವೆ. ಅಲ್ಲಿಯೂ ಅವರು ಪಡೆದಿಲ್ಲವೆಂದರೆ ಮುಂದಿನ ದಿನಗಳಲ್ಲಿ ಅದರ ಬಗ್ಗೆ ಏನು ಕ್ರಮ ಜರುಗಿಸಬೇಕೆಂದು ಚಿಂತನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಗೆ ಪೂರಕವಾದ ವಾತಾವರಣ

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ಸ್ವೀಕರಿಸಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿಗೆ ಪೂರಕವಾದ ವಾತಾವರಣವಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಸರ್ಕಾರ ನಡೆಸುತ್ತಿರುವ ಬಿಜೆಪಿ ಪರವಾಗಿರಬೇಕೆಂದು ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮನಸ್ಸು ಮಾಡಿದ್ದಾರೆ. ಮಂಜುನಾಥ್‍ಗೌಡ ಹಾಗೂ ವರ್ತರೂ ಪ್ರಕಾಶ್ ಅವರು ಶಕ್ತಿಯನ್ನು ಹೊಂದಿರುವ ಉತ್ತಮ ನಾಯಕರು ನಮ್ಮ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ರಾಮಸ್ವಾಮಿ, ರಾಜ್ಯ ಮಾವು ಅಭಿವೃಧ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ಭೂ ಅಭಿವೃಧ್ಧಿ ಬ್ಯಾಂಕಿನ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಜೆಸಿಬಿ ಮಂಜು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರಸಭಾ ಸದಸ್ಯ ಗಜೇಂದ್ರ, ಲಾಲ್‍ಬಾಗ್ ನಿರ್ದೇಶಕ ಜಿ.ಆರ್.ಶ್ರೀನಿವಾಸ್, ನಗರಸಭಾಧ್ಯಕ್ಷ ಡಿ.ಎಸ್.ಆನಂದ್‍ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಪಟ್ರೇನಹಳ್ಳಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next