Advertisement

10 ಕೋಟಿ ರೂ.ಕಾಮಗಾರಿಗೆ ತಡೆಯೊಡ್ಡುವುದು ಬೇಡ

05:27 PM Jul 27, 2018 | Team Udayavani |

ಕಾರವಾರ: ತಾಪಂ ಕಚೇರಿಗೆ ಹೊಂದಿಕೊಂಡಿರುವ ಕಟ್ಟಡವನ್ನು 2013ರಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಜಿಲ್ಲಾಧಿಕಾರಿಗಳ ಆದೇಶ ಪತ್ರದನ್ವಯ ಶಾಸಕರ ಕಚೇರಿ ಮಾಡಿಕೊಳ್ಳಲು ತಾಪಂ ಇಒ ಬಿಟ್ಟುಕೊಟ್ಟಿದ್ದರು. ಈ ಸಂಬಂಧ ತಾಪಂ ಸಭೆಯಲ್ಲಿ ಒಪ್ಪಿಗೆ ಸಹ ಪಡೆಯಲಾಗಿತ್ತು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಮೀರ್‌ ನಾಯ್ಕ ಹೇಳಿದರು.

Advertisement

ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಮಾಜಿ ಶಾಸಕ ಸತೀಶ್‌ ಸೈಲ್‌ ಬೆಂಬಲಿಗರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮಾಜಿ ಶಾಸಕರು ಕಚೇರಿಯ ವಾಶ್‌ ಬೇಸಿನ್‌ ಕಿತ್ತುಕೊಂಡು ಹೋದರು ಎಂಬ ವರದಿ ಖಂಡನಾರ್ಹ. ಈ ಸುದ್ದಿಗಳಿಗೆ ಆಧಾರವೇ ಇಲ್ಲ. ದುರುದ್ದೇಶಪೂರ್ವಕವಾಗಿ ಮಾಜಿ ಶಾಸಕರ ಹೆಸರು ಕೆಡಿಸಲು ಮಾಡಿದ ತಂತ್ರ ಎಂದು ಟೀಕಿಸಿದರು. ಇಂಥ ವರದಿಗಳನ್ನು ಬರೆಯುವಾಗ ತನಿಖಾ ವರದಿಯ ಸ್ವರೂಪ ಅನುಸರಿಸಬೇಕು. ಇಲ್ಲವೇ ಮಾಜಿ ಶಾಸಕ ಸತೀಶ್‌ ಸೈಲ್‌ರ ಪ್ರತಿಕ್ರಿಯೆ ಕೇಳಬೇಕಿತ್ತು ಎಂದರು. ಶಾಸಕರಾದ ಕೂಡಲೇ ಸೈಲ್‌ ಅವರು 18 ಲಕ್ಷ ರೂ. ಸ್ವಂತಕ್ಕೆ ಖರ್ಚು ಮಾಡಿ ಶಾಸಕರ ಕಚೇರಿಗೆ ಟೈಲ್‌ ಸಹಿತ ನವೀಕರಣ ಮಾಡಿಕೊಂಡಿದ್ದರು. ಕಟ್ಟಡಕ್ಕೆ ಅಳವಡಿಸಿದ ಟೈಲ್ಸ್‌, ವಾಶ್‌ ಬೇಸಿನ್‌ ಮುಂತಾದವುಗಳನ್ನು ಮುಟ್ಟಿಲ್ಲ. ಸ್ಥಿರಾಸ್ತಿಗಳನ್ನು ಮುಟ್ಟಿಲ್ಲ. ತಾ.ಪಂ.ನಿಂದ 10 ಲಕ್ಷ ಅನುದಾನ ಪಡೆದರೂ, ಶಾಸಕರ ನಿಧಿಯಿಂದ ಹತ್ತು ಲಕ್ಷವನ್ನು ತಾ.ಪಂ. ಸದಸ್ಯರ ಕ್ಷೇತ್ರಾಭಿವೃದ್ಧಿ ಕೆಲಸಗಳಿಗೆ ಪ್ರತಿಯಾಗಿ ನೀಡಿದ್ದಾರೆ ಎಂದರು.

ವರ್ಷಕ್ಕೆ 600 ಕೋಟಿ ರೂ. ವಹಿವಾಟು ಮಾಡುವ ಉದ್ಯಮಿ ಹಾಗೂ ಮಾಜಿ ಶಾಸಕ ಸತೀಶ್‌ ಸೈಲ್‌ ಅವರು 2005 ರಿಂದ ಸಾಮಾಜಿಕ ಜೀವನದಲ್ಲಿ ಬಡವರಿಗೆ ಮತ್ತು ಯುವಕರಿಗೆ ನೆರವು ನೀಡುತ್ತಾ ಬಂದಿದ್ದಾರೆ. ಅವರಿಗೆ ವಾಶ್‌ ಬೇಸಿನ್‌ ಕಿತ್ತುಕೊಂಡು ಹೋಗುವ ದುರ್ಗತಿ ಬಂದಿಲ್ಲ ಎಂದು ಕೆಡಿಎ ಮಾಜಿ ಅಧ್ಯಕ್ಷ ಶಂಭು ಶೆಟ್ಟಿ ನುಡಿದರು.

ಶಾಸಕಿ ರೂಪಾಲಿ ನಾಯ್ಕರಿಗೆ ತಾಪಂ ಕಟ್ಟಡ ಕೊಡಬಾರದು ಎಂದು ಎಲ್ಲಿಯೂ ಠರಾವು ಮಾಡಿಲ್ಲ. ಅವರು ಬಿಜೆಪಿಗೆ ಮಾತ್ರ ಶಾಸಕರಲ್ಲ. ಇಡೀ ಕ್ಷೇತ್ರಕ್ಕೆ ಶಾಸಕರು. ಅವರು ಸಹ ಆರೋಪಗಳನ್ನು ಮಾಡುವ ಮುನ್ನ ಯೋಚಿಸಬೇಕಿತ್ತು ಎಂದು ತಾಪಂ ಸದಸ್ಯರಾದ ಪುರುಷೋತ್ತಮ ಗೌಡ, ಮಾರುತಿ ನಾಯ್ಕ ಹೇಳಿದರು.

ಕಾಂಗ್ರೆಸ್‌ ಧುರೀಣ ಬಾಬು ಶೇಖ್‌ ಮಾತನಾಡಿ ಮಾಜಿ ಶಾಸಕ ಸತೀಶ್‌ ಸೈಲ್‌ ರು ಕೊನೆಯ ವಾರದಲ್ಲಿ 10 ಕೋಟಿ ರೂ. ಕಾಮಗಾರಿಗಳನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆ. ಆ ಕೆಲಸಗಳಿಗೆ ಹಾಲಿ ಶಾಸಕರು ತಡೆಯೊಡ್ಡಬಾರದು. ಮತ್ತು ಆ ನಿಗದಿತ ಕಾಮಗಾರಿಗಳನ್ನು ಮುಂದುವರಿಸಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌ ಪಕ್ಷಕ್ಕೆ ಹೋರಾಟ ರೂಪಿಸುವುದು ಗೊತ್ತಿದೆ ಎಂದು ಎಚ್ಚರಿಸಿದರು.

Advertisement

ಕಾಂಗ್ರೆಸ್‌ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ ಸತೀಶ್‌ ಸೈಲ್‌ ಅಧಿಕಾರದಲ್ಲಿ ಇದ್ದಾಗ ಹೊಗಳುತ್ತಿದ್ದ ಕೆಲವರು ಈಗ ಅದೇ ಕೈಯಿಂದ ತೆಗಳುತ್ತಿದ್ದಾರೆ. ಇದು ಸರಿಯಲ್ಲ. ಸೈಲ್‌ ಕ್ಷೇತ್ರದ ಅಭಿವೃದ್ಧಿಗೆ ದುಡಿದದ್ದು ನಿಜ. ಮತ್ತೊಮ್ಮೆ ಅವರನ್ನು ಶಾಸಕರನ್ನಾಗಿ ಮಾಡಿಯೇ ತೀರುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಪಣತೊಟ್ಟರು. ನಗರಸಭೆ ಅಧ್ಯಕ್ಷ ಜಿ.ವಿ.ನಾಯ್ಕ, ಸಂದೀಪ ತಳೇಕರ್‌,ವಿಠ್ಠಲ ಸಾವಂತ, ಲೀಲಾಬಾಯಿ ಠಾಣೇಕರ್‌, ಬೆಂಬಲಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next